ಮೊಬೈಲ್ ಗೇಮ್ ಚಟಕ್ಕಾಗಿ ತನ್ನ ಕುಟುಂಬದ ಉಳಿತಾಯವನ್ನೇ ಖಾಲಿ ಮಾಡಿದ ಬಾಲಕಿ!
ಬೀಚಿಂಗ್, ಜೂನ್. 06: ಚೀನಾದಲ್ಲಿ 13 ವರ್ಷದ ಬಾಲಕಿಯೊಬ್ಬಳು ಆನ್‌ಲೈನ್ ಮೊಬೈಲ್ ಗೇಮಿಂಗ್‌ಗಾಗಿ 449,500 ಯುವಾನ್ (ರೂ. 52,19,809) ಖರ್ಚು ಮಾಡುವ ಮೂಲಕ ತನ್ನ ಕುಟುಂಬದ ಉಳಿತಾಯವನ್ನು ಕೇವಲ ನಾಲ್ಕು ತಿಂಗಳಲ್ಲಿ ನೀರಿನಲ್ಲಿ ಹೋಮ ಮಾಡಿದ್ದಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಮಧ್ಯ ಚೀನಾದ ಹೆನಾನ್ ಪ್ರಾಂತ್ಯದ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬರು ಮನೆಯಲ್ಲಿ ತನ್ನ ತಾಯಿಯ ಡೆಬಿಟ್ ಕಾರ್ಡ್ ಅನ್ನು ನೋಡಿದ್ದಾರೆ. ಅದನ್ನು ತನ್ನ ಮೊಬೈಲ್ ಗೇಮಿಂಗ್ ಚಟಕ್ಕೆ ಹಣಕ್ಕಾಗಿ ಬಳಸಿದ್ದಾರೆ. ಶಿಕ್ಷಕಿಯು ಈ ಬಾಲಕಿ ಶಾಲೆಯಲ್ಲಿದ್ದರೂ ಕೂಡ ತನ್ನ ಫೋನ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿರುವುದನ್ನು ಗಮನಿಸಿ, ಆಕೆ ಆನ್‌ಲೈನ್ ಗೇಮ್‌ಗಳಿಗೆ ವ್ಯಸನಿಯಾಗಿರಬಹುದು ಎಂದು ಶಂಕಿಸಿದ್ದಾರೆ.

ಈ ಬಗ್ಗೆ ಬಾಲಕಿಯ ತಾಯಿಗೆ ಎಚ್ಚರಿಕೆ ನೀಡಿದ್ದಾರೆ. ಬಳಿಕ ಬಾಲಕಿಯ ತಾಯಿ ತನ್ನ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದ ಅವರು ಆಘಾತಕಾರಿ ಸಂಗತಿಯನ್ನು ತಿಳಿದುಕೊಂಡಿದ್ದಾರೆ. ಎಲಿಫೆಂಟ್ ನ್ಯೂಸ್ ಪ್ರಕಾರ, ಬಾಲಕಿಯ ತಾಯಿ ವಾಂಗ್ ಅವರ ಖಾತೆಯಲ್ಲಿ ಕೇವಲ 0.5 ಯುವಾನ್ (ರೂ. 5) ಉಳಿದಿತ್ತು.
ಚೀನಾದಲ್ಲಿ ವೈರಲ್ ಆಗಿರುವ ಘಟನೆಯ ವಿಡಿಯೋದಲ್ಲಿ, ಬಾಲಕಿಯ ತಾಯಿ ಕಣ್ಣೀರು ಹಾಕುತ್ತಾ ಮೊಬೈಲ್ ಗೇಮ್‌ಗಳಿಗೆ ಪಾವತಿಯಾಗಿರುವ ಹಣವನ್ನು ವಿವರಿಸುವ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳ ಪುಟಗಳನ್ನು ತೋರಿಸುತ್ತಿರುವುದು ಕಂಡುಬಂದಿದೆ. ಹಣ ಖರ್ಚಾಗಿರುವ ಬಗ್ಗೆ ಬಾಲಕಿಯ ತಂದೆ ವಿಚಾರಿಸಿದಾಗ, ಆಕೆ ಆಟಗಳನ್ನು ಖರೀದಿಸಲು 120,000 ಯುವಾನ್ (ರೂ. 13,93,828) ಮತ್ತು ಆಟದಲ್ಲಿನ ಖರೀದಿಗಳಿಗಾಗಿ 210,000 ಯುವಾನ್ (ರೂ. 24,39,340) ಖರ್ಚು ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಇದಲ್ಲದೆ ಆಕೆ ತನ್ನ ಕನಿಷ್ಠ 10 ಸಹಪಾಠಿಗಳಿಗೆ ಆಟಗಳನ್ನು ಖರೀದಿಸಲು ಮತ್ತೊಂದು 1,00,000 ಯುವಾನ್ (ರೂ. 11,61,590) ಖರ್ಚು ಮಾಡಿದ್ದಾರೆ. "ನನಗೆ ಇಷ್ಟವಿಲ್ಲದಿದ್ದರೂ, ಅವರು ತಮ್ಮ ಆಟಗಳಿಗೆ ಹಣ ಪಾವತಿಸುವಂತೆ ವಿನಂತಿಸಿದಾಗ ನಾನು ಪಾವತಿಸಿದ್ದೇನೆ" ಎಂದು ಹುಡುಗಿ ಹೇಳಿದ್ದಾರೆ. ಜೊತೆಗೆ ಈ ವಿಷಯವನ್ನು ಶಿಕ್ಷಕರಿಗೆ ತಿಳಿಸಲು ಹೆದರಿದ್ದಾಗಿ ಹೇಳಿದ್ದಾರೆ.

ಹಣ ಮತ್ತು ಅದರ ಮೂಲದ ಬಗ್ಗೆ ತನಗೆ ಸ್ವಲ್ಪವು ತಿಳಿದಿಲ್ಲ ಎಂದು ಬಾಲಕಿ ಹೇಳಿಕೊಂಡಿದ್ದಾಳೆ. ಆದ್ದರಿಂದ ಮನೆಯಲ್ಲಿ ಡೆಬಿಟ್ ಕಾರ್ಡ್ ಅನ್ನು ನೋಡಿದಾಗ, ಅದನ್ನು ತನ್ನ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಿದ್ದಾರೆ. ಮನೆಯಲ್ಲಿ ತಾವು ಇಲ್ಲದಿದ್ದಾಗ ಹಣದ ಅಗತ್ಯವಿದ್ದಲ್ಲಿ ಬಳಸಲು ಆಕೆಯ ತಾಯಿ ಕಾರ್ಡ್‌ನ ಪಾಸ್‌ವರ್ಡ್ ನೀಡಿದ್ದರು ಎಂಬುದು ಗಮನಾರ್ಹ.
ವಾಂಗ್ ಪ್ರಕಾರ, ಆಕೆಯ ಮಗಳು ತನ್ನ ಸ್ಮಾರ್ಟ್‌ಫೋನ್‌ನಲ್ಲಿ ಎಲ್ಲಾ ಮೊಬೈಲ್ ಗೇಮ್ ವಹಿವಾಟು ದಾಖಲೆಗಳನ್ನು ಅಳಿಸಿದ್ದಾರೆ. ಈ ಘಟನೆ ಚೀನಾದ ಸಾಮಾಜಿಕ ಮಾಧ್ಯಮ ವೆಬ್‌ಸೈಟ್‌ಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ಯಾರು ಹೊಣೆಗಾರರಾಗಬೇಕು ಎಂದು ನೆಟಿಜನ್‌ಗಳು ಪ್ರಶ್ನಿಸುತ್ತಿದ್ದಾರೆ.












Click it and Unblock the Notifications