ಬಾಹ್ಯಾಕಾಶದಲ್ಲಿ 6 ವಿಚಿತ್ರ ವಸ್ತುಗಳು: ಇಂದಿಗೂ ತೇಲುತ್ತಿವೆ ನೂರಾರು ಕೋಟಿ ಮೌಲ್ಯದ ವಸ್ತು, ಈ ವಸ್ತುಗಳ ರಹಸ್ಯವೇನು ?!
ಜಗತ್ತು ಅಚ್ಚರಿಗಳ ತಾಣ. ವಿಶ್ವದ ವಿವಿಧ ಪ್ರದೇಶಗಳಲ್ಲಿ ಹಾಗೂ ಬಾಹ್ಯಾಕಾಶದಲ್ಲಿ ಇಂದಿಗೂ ತಿಳಿಯದ ಹಲವು ವಿಷಯಗಳು ಇವೆ. ಕಲ್ಪನೆಗೂ ಮೀರಿದ, ನಿಲುಕದ ಹಲವು ವಿಷಯಗಳು ಬಾಹ್ಯಕಾಶದಲ್ಲಿವೆ. ಒಂದೊಂದು ವಿಷಯಗಳು ಇತ್ತೀಚಿಗೆ ರಿವೀಲ್ ಆಗುತ್ತಿರುವುದು ಇದೆ. ಅದರಲ್ಲೂ ಮುಖ್ಯವಾಗಿ ಕಪ್ಪು ರಂಧ್ರಗಳು, ಕೋಟ್ಯಾಂತರ ಗೆಲಕ್ಸಿಗಳು ಹಾಗೂ ನಕ್ಷತ್ರಗಳ ಜನನ ಹಾಗೂ ವಿಕಾಸ ಸೇರಿದಂತೆ ಹಲವು ರಹಸ್ಯಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಇಂದಿಗೂ ವಿಜ್ಞಾನಿಗಳಿಂದ ಸಾಧ್ಯವಾಗಿಲ್ಲ.
ಕ್ಷೀರಪಥ - ಕೋಟ್ಯಾಂತರ ನಕ್ಷತ್ರಗಳ ವಿಚಾರವು ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ಇದರೊಂದಿಗೆ ಬಾಹ್ಯಾಕಾಶದಲ್ಲಿ ಇನ್ನೂ ತೇಲುತ್ತಿರುವ 6 ವಿಚಿತ್ರ ವಸ್ತುಗಳು ಸಹ ಇವೆ. ಈ 6 ವಿಚಿತ್ರ ವಸ್ತುಗಳ ವಿವರಣೆ ಇಲ್ಲಿದೆ.

ಬಾಹ್ಯಾಕಾಶವೆನ್ನುವುದು ಇಂದಿಗೂ ಅಚ್ಚರಿಯ ತಾಣ. ತಂತ್ರಜ್ಞಾನ - ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ಹಲವು ವಿಷಯಗಳ ಬಗ್ಗೆ ವಿಜ್ಞಾನಿಗಳಿಗೆ ಇಂದಿಗೂ ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ನಮಗೆ ಇನ್ನೂ ಸಂಪೂರ್ಣವಾಗಿ ತಿಳಿಯದೆ ಇರುವ ಹಲವು ವಿಚಿತ್ರ ವಸ್ತುಗಳು ಬಾಹ್ಯಾಕಾಶಲ್ಲಿವೆ. ಕೆಲವು ನೈಸರ್ಗಿಕ ವಸ್ತುಗಳಾದರೆ, ಇನ್ನು ಕೆಲವು ಮನುಷ್ಯರು ಬಾಹ್ಯಾಕಾಶಕ್ಕೆ ಕಳುಹಿಸಿದ ವಸ್ತುಗಳಾಗಿವೆ. ಇದರ ಸಂಪೂರ್ಣ ವಿವರ ಈ ಲೇಖನದಲ್ಲಿದೆ.
1. ಬಾಹ್ಯಾಕಾಶದಲ್ಲಿ ಮಾನವರ ಮೂತ್ರದಿಂದ ಏನಾಗಿದೆ ?!
ಇನ್ನು ಬಾಹ್ಯಾಕಾಶದಲ್ಲಿ ತೇಲುತ್ತಿರುವ ವಸ್ತುಗಳಲ್ಲಿ ಹೆಪ್ಪುಗಟ್ಟಿದ ಮೂತ್ರದ ಹರಳುಗಳು ಸಹ ಒಂದು. ಈ ಹಿಂದಿನ ಕಾಲದಲ್ಲಿ ಬಾಹ್ಯಾಕಾಶಕ್ಕೆ ಹೋಗುತ್ತಿದ್ದ ವಿಜ್ಞಾನಿಗಳು ದ್ರವ ತ್ಯಾಜ್ಯವನ್ನು ಹೊರಗೆ ಬಿಡುತ್ತಿದ್ದರು. ಅದು ತಕ್ಷಣವೇ ಹೆಪ್ಪುಗಟ್ಟಿ ಸಣ್ಣ ಹೊಳೆಯುವ ಹರಳುಗಳಂತೆ ಬಾಹ್ಯಾಕಾಶದಲ್ಲಿ ತೇಲುತ್ತಿತ್ತು. ಈಗ ಅಂತರಿಕ್ಷ ನಿಲ್ದಾಣದಲ್ಲಿ ತ್ಯಾಜ್ಯವನ್ನು ಮರುಬಳಕೆ ಮಾಡುವ ವ್ಯವಸ್ಥೆ ಇರುವುದರಿಂದ ಈ ದೃಶ್ಯಗಳು ಕಂಡು ಬರುತ್ತಿಲ್ಲ. ಈ ಹಿಂದಿನ ದಿನಗಳಲ್ಲಿ ಬಾಹ್ಯಾಕಾಶದಲ್ಲಿ ದ್ರವ ತ್ಯಾಜ್ಯವೂ ಬಹುದೊಡ್ಡ ಸಮಸ್ಯೆ ಆಗಿತ್ತು.
2. ಟೆಸ್ಲಾ ರೋಡ್ಸ್ಟರ್ ಮತ್ತು 'ಸ್ಟಾರ್ಮ್ಯಾನ್'
ಬಾಹ್ಯಾಕಾಶದಲ್ಲಿ ತೇಲುತ್ತಿರುವ ಮತ್ತೊಂದು ವಸ್ತು ಎಂದರೆ ಅದು ಟೆಸ್ಲಾ ರೋಡ್ಸ್ಟರ್ ಮತ್ತು 'ಸ್ಟಾರ್ಮ್ಯಾನ್'. ಉದ್ಯಮಿ ಹಾಗೂ ಕೋಟ್ಯಾಧಿಪತಿ ಎಲಾನ್ ಮಸ್ಕ್ ಅವರ ಟೆಸ್ಲಾ ರೋಡ್ಸ್ಟರ್ ಕಾರನ್ನು 2018ರಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು. ಆದರೆ ಅದರೊಳಗಿದ್ದ 'ಸ್ಟಾರ್ಮ್ಯಾನ್' ಎಂಬ ಮಾನವಾಕಾರದ ಗೊಂಬೆಯೂ ಸಹ ಇತ್ತು. ಈ ಕಾರು ಬಾಹ್ಯಾಕಾಶದಲ್ಲಿ ಇನ್ನೂ ಸುತ್ತುತ್ತಲ್ಲೇ ಇದೆ.
3. ವಾಯೇಜರ್ನ ಗೋಲ್ಡನ್ ರೆಕಾರ್ಡ್
ಬಾಹ್ಯಾಕಾಶದಲ್ಲಿ ಸುತ್ತುತ್ತಿರುವ ಮತ್ತೊಂದು ಪ್ರಮುಖ ವಸ್ತುವೆಂದರೆ ವಾಯೇಜರ್ನ ಗೋಲ್ಡನ್ ರೆಕಾರ್ಡ್. ಇನ್ನು ವಾಯೇಜರ್-1 ಮತ್ತು ವಾಯೇಜರ್-2 ಬಾಹ್ಯಾಕಾಶ ನೌಕೆಗಳಲ್ಲಿ ಚಿನ್ನದಿಂದ ಮಾಡಲಾದ ವಿಶೇಷ ದಾಖಲೆಗಳನ್ನು ಕಳುಹಿಸಲಾಗಿದೆ. ಈ ನೌಕೆಗಳಲ್ಲಿ ಭೂಮಿಯ ಚಿತ್ರಗಳು, ವಿವಿಧ ಭಾಷೆಗಳ ಶುಭಾಶಯಗಳು, ಪ್ರಕೃತಿಯಲ್ಲಿ ಕೇಳುವ ಶಬ್ದಗಳು ಮತ್ತು ಸಂಗೀತದ ಮಾಹಿತಿಗಳಿವೆ. ಭವಿಷ್ಯದಲ್ಲಿ ಬೇರೆ ಜೀವಿಗಳಿಗೆ ಮಾನವ ನಾಗರಿಕತೆಯ ಪರಿಚಯವಾಗಲಿ ಎಂಬ ಉದ್ದೇಶದಿಂದ ಕೆಲವೊಂದು ಮಾಹಿತಿಗಳನ್ನು ಕಳುಹಿಸಲಾಗಿತ್ತು. ಇದು ಸಹ ಇನ್ನೂ ಬಾಹ್ಯಾಕಾಶದಲ್ಲಿಯೇ ಇದೆ.
4. ಕೆಸ್ಲರ್ ಕ್ಲೌಡ್ - ಬಾಹ್ಯಾಕಾಶದ ಕಸ
ಭೂಮಿಯ ಸುತ್ತಲಿನ ಕಕ್ಷೆಯಲ್ಲಿರುವ ಹಳೆಯ ಉಪಗ್ರಹಗಳು, ರಾಕೆಟ್ಗಳ ಅವಶೇಷಗಳು ಸೇರಿದಂತೆ ಸಾವಿರಾರು ಬಾಹ್ಯಾಕಾಶ ತ್ಯಾಜ್ಯಗಳು ಸಹ ಸುತ್ತುತ್ತಲ್ಲೇ ಇವೆ. ಅಲ್ಲದೆ ಇವುಗಳು ಅತ್ಯಂತ ವೇಗವಾಗಿ ಚಲಿಸುತ್ತಿರುವುದರಿಂದ ಸಣ್ಣ ತುಂಡುಗಳು ಸಹ ಉಪಗ್ರಹಗಳಿಗೆ ಅಪಾಯವನ್ನುಂಟು ಮಾಡಲಿದೆ. ಈ ತ್ಯಾಜ್ಯ ಹೆಚ್ಚಾದರೆ ಭವಿಷ್ಯದ ಬಾಹ್ಯಾಕಾಶ ಪ್ರಯಾಣಕ್ಕೂ ಸಮಸ್ಯೆ ಆಗಬಹುದು ಎನ್ನುವ ಆತಂಕವೂ ಸಹ ಇದೆ.
5. ಬಾಹ್ಯಾಕಾಶದಲ್ಲಿದೆ J002E3 ರಹಸ್ಯ ವಸ್ತು
2002ರಲ್ಲಿ ಖಗೋಳಶಾಸ್ತ್ರಜ್ಞರು J002E3 ಎಂಬ ವಿಚಿತ್ರ ವಸ್ತುವನ್ನು ಪತ್ತೆ ಮಾಡಿದ್ದರು. ಮೊದ ಮೊದಲು ವಿಜ್ಞಾನಿಗಳು ಇದನ್ನು ಕ್ಷುದ್ರಗ್ರಹ ಎಂದೇ ಭಾವಿಸಿದ್ದರು. ಆದರೆ ಇದರ ಮೇಲಿದ್ದ ಬಿಳಿ ಬಣ್ಣವನ್ನು ಪರಿಶೀಲಿಸಿದಾಗ ಅದು NASA ರಾಕೆಟ್ಗಳಲ್ಲಿ ಬಳಸುತ್ತಿದ್ದ ಬಣ್ಣಕ್ಕೆ ಹೋಲಿಕೆಯಾಗಿದೆ ಎನ್ನುವುದು ತಿಳಿದು ಬಂದಿತ್ತು. ನಂತರ ಇದನ್ನು ಅಪೋಲೊ-12 ಮಿಷನ್ನ ರಾಕೆಟ್ನ ಒಂದು ಭಾಗ ಎಂದು ವಿಜ್ಞಾನಿಗಳು ಪತ್ತೆ ಮಾಡಿದರು. ಇದೂ ಸಹ ಬಾಹ್ಯಾಕಾಶದಲ್ಲಿಯೇ ಉಳಿದಿದೆ.
6. ಬಾಹ್ಯಾಕಾಶದಲ್ಲಿ ತೇಲುತ್ತಿದೆ ಟೂಲ್ಬ್ಯಾಗ್ - ಇದರ ಮೌಲ್ಯ 1 ಲಕ್ಷ ಡಾಲರ್
ಇನ್ನು 2008ರಲ್ಲಿ ಬಾಹ್ಯಾಕಾಶದಲ್ಲಿ ಬಾಹ್ಯಾಕಾಶಕ್ಕೆ ಹೋಗಿದ್ದ ವಿಜ್ಞಾನಿಯೊಬ್ಬರ ಟೂಲ್ಬ್ಯಾಗ್ ಬಾಹ್ಯಾಕಾಶದಲ್ಲಿ ಕಳೆದುಹೋಗಿತ್ತು. ಈ ಘಟನೆ ಸಾಕಷ್ಟು ಸುದ್ದಿಯಾಗಿತ್ತು. ಇದಕ್ಕೆ ಹೋಲುವ ಮತ್ತೊಂದು ಘಟನೆ 2023ರ ನವೆಂಬರ್ನಲ್ಲಿಯೂ ನಡೆದಿತ್ತು. ಬಾಹ್ಯಾಕಾಶ ನಿಲ್ದಾಣದ ಹೊರಭಾಗದಲ್ಲಿ ಸೌರ ಫಲಕದ ದುರಸ್ತಿ ಕಾರ್ಯ ನಡೆಸುತ್ತಿದ್ದಾಗ, ಯಾತ್ರಿಕರೊಬ್ಬರ ಟೂಲ್ಬ್ಯಾಗ್ ಬಾಹ್ಯಾಕಾಶಕ್ಕೆ ಜಾರಿಹೋಗಿತ್ತು.
ಸುಮಾರು ಆರು ತಿಂಗಳ ಕಾಲ ಈ ಬಿಳಿ ಬಣ್ಣದ ಟೂಲ್ಬ್ಯಾಗ್ ಭೂಮಿಯ ಸುತ್ತ ಕಕ್ಷೆಯಲ್ಲಿ ತೇಲುತ್ತಿತ್ತು. ಭೂಮಿಯಿಂದ ಬೈನಾಕ್ಯುಲರ್ ಮೂಲಕವೂ ಇದನ್ನು ನೋಡಬಹುದಾಗಿತ್ತು. ನಂತರ 2024ರ ಪ್ರಾರಂಭದಲ್ಲಿ ಇದು ಭೂಮಿಯ ವಾತಾವರಣವನ್ನು ಪ್ರವೇಶಿಸಿದಾಗ ಸುಟ್ಟುಹೋಯಿತು. ಈ ಟೂಲ್ಬ್ಯಾಗ್ನ ಮೌಲ್ಯ ಸುಮಾರು 1 ಲಕ್ಷ ಡಾಲರ್ ಎಂದು ವರದಿಯಾಗಿದೆ.


Click it and Unblock the Notifications
