Earthquake in Indonesia : ಇಂಡೋನೇಷ್ಯಾದಲ್ಲಿ 6.8 ತೀವ್ರತೆಯ ಭೂಕಂಪ
ಇಂಡೋನೇಷ್ಯಾದ ಉತ್ತರ ಮಲುಕು ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.8 ತೀವ್ರತೆಯ ಕಂಪನ ದಾಖಲಾಗಿದೆ.
ಜಕಾರ್ತ, ಫೆಬ್ರವರಿ 24; ಇಂಡೋನೇಷ್ಯಾದಲ್ಲಿ ಶುಕ್ರವಾರ ಮುಂಜಾನೆ ಮತ್ತೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ6.8 ತೀವ್ರತೆಯ ಕಂಪನ ದಾಖಲಾಗಿದೆ. ಆದರೆ ಭೂಕಂಪದಿಂದಾಗಿ ಯಾವುದೇ ಸಾವು, ನೋವು ಸಂಭವಿಸಿರುವ ಕುರಿತು ಅಧಿಕೃತವಾದ ಮಾಹಿತಿ ಲಭ್ಯವಾಗಿಲ್ಲ. ಎರಡು ವಾರಗಳ ಹಿಂದೆ ಟರ್ಕಿ ಮತ್ತು ಸಿರಿಯಾದಲ್ಲಿ ಉಂಟಾದ ಭೂಕಂಪದಲ್ಲಿ 47 ಸಾವಿರ ಜನರು ಮೃತಪಟ್ಟಿದ್ದರು.
ಶುಕ್ರವಾರ ಇಂಡೋನೇಷ್ಯಾದ ಉತ್ತರ ಮುಲುಕು ಎಂಬಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪದ ಪರಿಣಾಮವಾಗಿ ಉತ್ತರ ಸುವಲೆಸಿ ಪ್ರಾಂತ್ಯದಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪದ ಬಳಿಕ ಸುನಾಮಿಯ ಯಾವುದೇ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದು ದೇಶದ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮುಂಜಾನೆ 3.02ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ಮೊರೆಟೈ ಜಿಲ್ಲೆಯ ವಾಯುವ್ಯಕ್ಕೆ 133 ಕಿ. ಮೀ. ದೂರದಲ್ಲಿ ಸಮುದ್ರದ ಅಡಿ 112 ಕಿ. ಮೀ. ಆಳದಲ್ಲಿ ಪತ್ತೆಯಾಗಿದೆ. ಭೂಕಂಪದಿಂದಾಗಿ ಯಾವುದೇ ಕಟ್ಟಡಗಳಿಗೆ ಹಾನಿ ಉಂಟಾಗಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ವಕ್ತಾರ ಅಬ್ದುಲ್ ಮುಹಾರಿ ಈ ಕುರಿತು ಸ್ಪಷ್ಟಪಡಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇಂಡೋನೇಷ್ಯಾದಲ್ಲಿ ಪದೇ ಪದೇ ಭೂಕಂಪ ಸಂಭವಿಸುತ್ತದೆ. 'ಫೆಸಿಫಿಕ್ ರಿಂಗ್ ಆಫ್ ಫೈರ್' ಎಂಬ ದುರ್ಬಲ ಭೂಕಂಪ ಪೀಡಿತ ವಲಯದಲ್ಲಿ ಇಂಡೋನೇಷ್ಯಾ ಇರುವುದರಿಂದ ಪದೇ-ಪದೇ ಭೂಮಿ ನಡುಗಿದ ಅನುಭವವಾಗುತ್ತದೆ. ಅಲ್ಲದೇ ಭೂಕಂಪ ಸಂಭವಿಸಿದಾಗ ಸುನಾಮಿಯ ಎಚ್ಚರಿಕೆಯನ್ನು ನೀಡಲಾಗುತ್ತದೆ.
162 ಮಂದಿ ಸಾವು; ಈ ವರ್ಷದ ಜನವರಿ 10ರಂದು ಇಂಡೋನೇಷ್ಯಾದಲ್ಲಿ ಭೂಕಂಪ ಉಂಟಾಗಿತ್ತು. ರಿಕ್ಟರ್ ಮಾಪಕದಲ್ಲಿ 7.7ರ ತೀವ್ರತೆ ದಾಖಲಾಗಿತ್ತು. ಈ ಭೂಕಂಪ ಸಂಭವಿಸಿದಾಗ ಸುನಾಮಿಯ ಎಚ್ಚರಿಕೆಯನ್ನು ಸಹ ದೇಶದ ಹವಾಮಾನ ಇಲಾಖೆ ನೀಡಿತ್ತು. ಈ ಭೂಕಂಪದಿಂದಾಗಿ ಹಲವಾರು ಕಟ್ಟಡಗಳು ನೆಲಕ್ಕುರುಳಿದ್ದವು.
2022ರ ನವೆಂಬರ್‌ನಲ್ಲಿ ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 5.6 ರಷ್ಟು ತೀವ್ರತೆ ಹೊಂದಿದ್ದ ಭೂಕಂಪದಿಂದಾಗಿ 162 ಜನರು ಸಾವನ್ನಪ್ಪಿದ್ದರು. 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಇಂಡೋನೇಷ್ಯಾದಲ್ಲಿ ಪದೇ ಪದೇ ಭೂಕಂಪ ಸಂಭವಿಸುತ್ತದೆ. ಕೆಲವು ಭಾರೀ ಇದು ಭಾರೀ ಅನಾಹುತಕ್ಕೆ ಕಾರಣವಾಗುತ್ತದೆ.












Click it and Unblock the Notifications