Road Accident: ಪಶ್ಚಿಮ ಕೀನ್ಯಾದಲ್ಲಿ ಭೀಕರ ರಸ್ತೆ ಅಪಘಾತ, 48 ಜನ ದುರ್ಮರಣ
ನೈರೋಬಿ: ಪಶ್ಚಿಮ ಕೀನ್ಯಾದ ಲೊಂಡಿಯಾನಿ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಈ ಭೀಕರ ಅಪಘಾತದಲ್ಲಿ 48 ಜನ ಮೃತಪಟ್ಟಿದ್ದಾರೆ. ಹೆದ್ದಾರಿಯಲ್ಲಿ ಹಡಗಿಗೆ ಸಂಬಂಧಿಸಿದ ವಸ್ತುಗಳನ್ನು ಸಾಗಿಸುತ್ತಿದ್ದ ಕಂಟೈನರ್, ಚಾಲಕನ ನಿಯಂತ್ರಣ ತಪ್ಪಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಬಳಿಕ ಪಾದಚಾರಿಗಳ ಮೇಲೆ ಹರಿದಿರುವ ಪರಿಣಾಮ 48 ಜನ ಮೃತಪಟ್ಟಿದ್ದು, ಹಲವರು ಗಂಭೀರ ಗಾಯಗೊಂಡಿದ್ದಾರೆ.
ನೈರೋಬಿಯ ವಾಯುವ್ಯಕ್ಕೆ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಲೊಂಡಿಯಾನಿಯ ರಿಫ್ಟ್ ವ್ಯಾಲಿ ಪಟ್ಟಣದ ಸಮೀಪ ಶುಕ್ರವಾರ ಸಂಜೆ ರಸ್ತೆ ಅಪಘಾತ ಸಂಭವಿಸಿದ್ದು, ಇನ್ನೂ ಈ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ 48 ಜನ ಮೃತಪಟ್ಟಿದ್ದು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಗಾಯಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಳಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಗೊಂಡವರ ಸ್ಪಷ್ಟ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.

ಇನ್ನೂ 30 ಜನರು ಗಂಭೀರವಾಗಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಿಗೆ ರವಾನಿಸಲಾಗಿದ್ದು, ಕೆರಿಚೋ ಕಡೆಗೆ ಪ್ರಯಾಣಿಸುತ್ತಿದ್ದ ಟ್ರಕ್ "ನಿಯಂತ್ರಣ ಕಳೆದುಕೊಂಡು ಎಂಟು ವಾಹನಗಳು, ಹಲವಾರು ಮೋಟಾರು ಸೈಕಲ್‌ಗಳು, ರಸ್ತೆಬದಿಯಲ್ಲಿದ್ದ ಜನರು, ಮಾರಾಟಗಾರರು ಮತ್ತು ಇತರ ವ್ಯವಹಾರಗಳಲ್ಲಿದ್ದ ಇತರ ಜನರಿಗೆ ಡಿಕ್ಕಿ ಹೊಡೆದಿದೆ" ಎಂದು ಪೋಲಿಸರು ತಿಳಿಸಿದ್ದಾರೆ.
ಟ್ರಕ್ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದು, ಪಾದಚಾರಿಗಳು ಮತ್ತು ಮಾರುಕಟ್ಟೆ ವ್ಯಾಪಾರಿಗಳಿಗೆ ಡಿಕ್ಕಿ ಹೊಡೆದಿದೆ. ರಾತ್ರಿ ರಕ್ಷಣಾ ಕಾರ್ಯಾಚರಣೆ ನಡೆದಿದ್ದು ಭಾರೀ ಮಳೆಯು ಕಾರ್ಯಾಚರಣೆಗೆ ಅಡ್ಡಿಪಡಿಸಿತು. ಇನ್ನೂ ಕೆಲವರು ಧ್ವಂಸಗೊಂಡ ವಾಹನಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಕೀನ್ಯಾ ರೆಡ್‌ಕ್ರಾಸ್ ಸೊಸೈಟಿ ಹೇಳಿದೆ.
ಲೊಂಡಿಯಾನಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದ ಸಂಬಂಧ ಕೀನ್ಯಾದ ಅಧ್ಯಕ್ಷ ವಿಲಿಯಂ ರುಟೊ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ದೇಶವು ಶೋಕಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.












Click it and Unblock the Notifications