Donald Trump: ಸೈಡಿಗ್ ಹೋಗು.. ಸೈಡಿಗ್ ಹೋಗು... ಡೊನಾಲ್ಡ್ ಟ್ರಂಪ್ ಬರ್ತಾವ್ರೆ!
ಅಮೆರಿಕ ಎಂಬ ಬೃಹತ್ ದೇಶದ & ಜಗತ್ತಿನ ಶಕ್ತಿಶಾಲಿ ರಾಷ್ಟ್ರದ ನೂತನ ಅಧ್ಯಕ್ಷರಾಗಿ ಈಗ ಡೊನಾಲ್ಡ್ ಟ್ರಂಪ್ ಎಂಟ್ರಿ ಕೊಡುತ್ತಿದ್ದಾರೆ. ಹೀಗೆ, ಡೊನಾಲ್ಡ್ ಟ್ರಂಪ್ ಅವರ ಎಂಟ್ರಿಗೂ ಮೊದಲು ಸಾಕಷ್ಟು ಸಂಚಲನ ಸೃಷ್ಟಿ ಆಗಿದೆ. ಒಂದು ಕಡೆ ಇಸ್ರೇಲ್ & ಹಮಾಸ್ ಯುದ್ಧ ನಿಂತು ಹೋಗಿದೆ. ಇನ್ನೊಂದು ಕಡೆ ರಷ್ಯಾ & ಉಕ್ರೇನ್ ವಾರ್ ಕೂಡ ನಿಲ್ಲುವ ನಿರೀಕ್ಷೆಗಳು ದಟ್ಟವಾಗಿವೆ. ಹಾಗಾದ್ರೆ ಹೇಗೆ ನಡೆದಿದೆ ಟ್ರಂಪ್ ಎಂಟ್ರಿಗೆ ಸಿದ್ಧತೆ? ಮುಂದೆ ಓದಿ.
ಡೊನಾಲ್ಡ್ ಟ್ರಂಪ್ 2016 ರಲ್ಲಿ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಂಡರು. ಆ ನಂತರ 2020 ರಲ್ಲಿ ಡೊನಾಲ್ಡ್ ಟ್ರಂಪ್ ಅವರು ಜೋ ಬೈಡನ್ ಎದುರು ಸೋಲು ಕಂಡು ಅಧಿಕಾರ ಕಳೆದುಕೊಂಡರು. ಆದರೆ 2024 ರಲ್ಲಿ ಡೊನಾಲ್ಡ್ ಟ್ರಂಪ್ ಮತ್ತೆ ಪುಟಿದೆದ್ದು, ಭಾರತ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಅವರ ವಿರುದ್ಧವೇ ಗೆದ್ದು ಬೀಗಿದರು. ಹೀಗೆ ಭರ್ಜರಿ ಬಹುಮತ ಪಡೆದು ಗೆದ್ದಿರುವ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಅಧಿಕಾರ ಸ್ವೀಕಾರ ಮಾಡುತ್ತಿದ್ದಾರೆ.

ಸೋಮವಾರ ಟ್ರಂಪ್ ಎಂಟ್ರಿ ಗ್ಯಾರಂಟಿ!
ಜನವರಿ 20, 2025 ಅಂದ್ರೆ ಇದೇ ಸೋಮವಾರ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಾರೆ. ಜಗತ್ತಿನ ಶಕ್ತಿಶಾಲಿ ದೇಶವಾದ ಅಮೆರಿಕದ ಅಧಿಕಾರ ಹಿಡಿಯುವುದು ಸಾಮಾನ್ಯವಾದ ಮಾತು ಅಲ್ಲ. ಹೀಗೆ ಅಮೆರಿಕದ ಅಧ್ಯಕ್ಷ ಸ್ಥಾನ ಪಡೆಯಲು ಮುಂದೆ ನುಗ್ಗುತ್ತಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಎಲ್ಲಾ ರೀತಿಯ ಬೆಂಬಲ & ಖುಷಿ ಹಂಚುತ್ತಿದ್ದಾರೆ ಅಮೆರಿಕನ್ನರು. ಇಷ್ಟೆಲ್ಲದರ ನಡುವೆ ಹಿಂಸಾಚಾರದ ಭಯ ಕೂಡ ಈಗ ಅಮೆರಿಕದಲ್ಲಿ ಆವರಿಸಿದೆ!
ಅಮೆರಿಕದ ಗಡಿಯಲ್ಲಿ ಭಾರಿ ಕಟ್ಟೆಚ್ಚರ
ಡೊನಾಲ್ಡ್ ಟ್ರಂಪ್ ತಾವು ಅಧಿಕಾರಕ್ಕೆ ಬರುವ ಮೊದಲೇ ಹವಾ ಎಬ್ಬಿಸಿದ್ದಾರೆ. ಅಕ್ಕಪಕ್ಕದ ದೇಶಗಳಿಗೆ ಡೊನಾಲ್ಡ್ ಟ್ರಂಪ್ ಬಗ್ಗೆ ಭಯ ಶುರುವಾಗಿದೆ. ಈಗ ಇಷ್ಟೆಲ್ಲಾ ಬೆಳವಣಿಗೆ ನಡುವೆ ಟ್ರಂಪ್ ಎಂಟ್ರಿಗೆ ಮೊದಲು ಅಮೆರಿಕದಲ್ಲಿ ಹಿಂಸಾಚಾರ ನಡೆಯುವ ಆತಂಕವು ಆವರಿಸಿದೆ. ಈ ಬಗ್ಗೆ ಈಗಾಗಲೇ ಅಮೆರಿಕದ ಭದ್ರತಾ ಸಂಸ್ಥೆಗಳು ಮಾಹಿತಿ ಪಡೆದಿವೆ ಎನ್ನಲಾಗಿದೆ. ಮತ್ತೊಂದು ಕಡೆ ಅಮೆರಿಕದ ಗಡಿ ಪ್ರದೇಶದಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಇನ್ನೊಂದು ಕಡೆ, ಟ್ರಂಪ್ ಅವರ ಪದಗ್ರಹಣ ನಡೆಯುವ ಪ್ರದೇಶ & ಸುತ್ತಮುತ್ತಲಿನ ಜಾಗದಲ್ಲಿ ಹದ್ದಿನ ಕಣ್ಣಿಡಲಾಗಿದೆ.
ಒಟ್ನಲ್ಲಿ ಅಮೆರಿಕದಲ್ಲಿ ಸಂಭ್ರಮದ ಜೊತೆಗೆ ಆತಂಕ ಕೂಡ ಮನೆ ಮಾಡಿದೆ, ಹಾಗೇ ಟ್ರಂಪ್ ಅವರು ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಸಜ್ಜಾಗಿದ್ದಾರೆ. ಮತ್ತೊಂದು ಕಡೆ ಜಗತ್ತಿನಲ್ಲಿ ಈಗ ನಡೆಯುತ್ತಿರುವ ಯುದ್ಧಗಳನ್ನು ನಿಲ್ಲಿಸಲು ಟ್ರಂಪ್ ತಮ್ಮದೇ ಅಸ್ತ್ರಗಳನ್ನು ಕೂಡ ರೆಡಿ ಮಾಡಿ ಇಟ್ಟುಕೊಂಡಿದ್ದಾರೆ. ಹೀಗಾಗಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.












Click it and Unblock the Notifications