26/11ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯ್ಯದ್‌ಗೆ 31 ವರ್ಷ ಜೈಲುಶಿಕ್ಷೆ
ಕರಾಚಿ, ಏಪ್ರಿಲ್ 8: ಕಳೆದ 26/11ರ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯ್ಯದ್‌ಗೆ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು 31 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಸಯ್ಯದ್‌ಗೆ ಎರಡು ಪ್ರಕರಣಗಳಲ್ಲಿ ಈ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಇದರ ಜೊತೆಗೆ ಅವರ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಕೋರ್ಟ್ ಆದೇಶಿಸಿದೆ.
ಹಫೀಜ್ ಸಯ್ಯದ್‌ಗೆ ನಿರ್ಮಿಸಿದ್ದು ಎಂದು ಹೇಳಲಾದ ಮಸೀದಿ ಮತ್ತು ಮದರಸಾವನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಸೂಚಿಸಲಾಗಿದೆ. ಅಲ್ಲದೇ ಭಯೋತ್ಪಾದನೆಯ ಮಾಸ್ಟರ್‌ಮೈಂಡ್‌ಗೆ 3,40,000 ದಂಡವನ್ನೂ ವಿಧಿಸಲಾಗಿದೆ.

ಹಫೀಜ್ ಸಯ್ಯದ್‌ಗೆ 15 ವರ್ಷಗಳ ಜೈಲು ಶಿಕ್ಷೆ:
ಭಯೋತ್ಪಾದನೆಗೆ ಹಣ ಒದಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರಲ್ಲಿ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಹಫೀಜ್ ಸಯ್ಯದ್‌ಗೆ 15 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ಹಿಂದೆ ಪಾಕಿಸ್ತಾನದಲ್ಲಿ ಹಲವು ರೀತಿಯಲ್ಲಿ ಬಂಧನಕ್ಕೆ ಒಳಗಾಗಿರುವ ಹಫೀಜ್, ಕೆಲವೊಮ್ಮೆ ಗೃಹಬಂಧನಕ್ಕೆ ಒಳಗಾಗಿದ್ದರು. ಅದಾಗ್ಯೂ, ಭಾರತದ ವಿರುದ್ಧ ಮುಕ್ತವಾಗಿ ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಾ ಓಡಾಡುತ್ತಿದ್ದನು.

2019ರಲ್ಲಿ ಹಫೀಜ್ ಸಯ್ಯದ್ ಬಂಧನ:
ಕಳೆದ 2019ರಲ್ಲಿ ಪಾಕಿಸ್ತಾನದಲ್ಲಿ ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಸಯ್ಯದ್ ಅನ್ನು ಬಂಧಿಸಲಾಗಿತ್ತು. ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ಮುಂದೆ ಹಾಜರಾಗಲು ಲಾಹೋರ್‌ನಿಂದ ಗುಜ್ರಾನ್‌ವಾಲಾಗೆ ಸಯ್ಯದ್ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಪಂಜಾಬ್‌ನ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಅವನನ್ನು ಬಂಧಿಸಿತ್ತು. ಇದಕ್ಕೂ ಮೊದಲು 2001 ರಿಂದ ಎಂಟು ಬಾರಿ ಸಯ್ಯದ್ ಅನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ ಎಂದು ಯುಎಸ್ ಹೌಸ್ ವಿದೇಶಾಂಗ ವ್ಯವಹಾರಗಳ ಸಮಿತಿ ಹೇಳಿದೆ. ನವೆಂಬರ್ 26, 2008ರಂದು ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 166 ಜನರು ಸಾವನ್ನಪ್ಪಿದ ಘಟನೆಗೆ ಹಫೀಜ್ ಸಯ್ಯದ್ ಕಾರಣ ಎಂದು ಹೇಳಲಾಗಿದೆ.
2017ರಲ್ಲಿ ಹಫೀಜ್ ಸಯೀದ್ ಮತ್ತು ಅವರ ನಾಲ್ವರು ಸಹಾಯಕರನ್ನು ಪಾಕಿಸ್ತಾನವು ಬಂಧಿಸಿತು. ಆದರೆ ಪಂಜಾಬ್‌ನ ನ್ಯಾಯಾಂಗ ಪರಿಶೀಲನಾ ಮಂಡಳಿಯು ಅವರ ಬಂಧನವನ್ನು ವಿಸ್ತರಿಸಲು ನಿರಾಕರಿಸಿದಾಗ ಸುಮಾರು 11 ತಿಂಗಳ ನಂತರ ಅವರನ್ನು ಬಿಡುಗಡೆ ಮಾಡಲಾಯಿತು.












Click it and Unblock the Notifications