1997ರ ಕ್ವಾಂಟಮ್ ಗಣಿತದ ಸೂತ್ರ ಭೇದಿಸಿದ 18ರ ಪೋರಿ: 1 ಲಕ್ಷ ಡಾಲರ್ ಬಹುಮಾನ ಗೆದ್ದ ರೇಚೆಲ್ ಚೆನ್
ವಿಜ್ಞಾನ ಮತ್ತು ಗಣಿತ ಎಂದ್ರೆ ಎಲ್ಲರ ಕಬ್ಬಿಣಕಡಲೇ ಎನ್ನುತ್ತೇವೆ. ಶಾಲಾ ದಿನಗಳಲ್ಲಿ ಈ ಗಣಿತದ ಸೂತ್ರಗಳನ್ನ ಬಿಡಿಸುವುದೇ ಒಂದು ದೊಡ್ಡ ತಲೆ ನೋವು ಎಂದು ನಮ್ಮಲ್ಲಿ ಬೈದುಕೊಂಡವರೇ ಹೆಚ್ಚು. ಈ ಸೂತ್ರಗಳನ್ನ ಬಿಡಿಸಲು ಎಲ್ಲರ ಕೈಯಲ್ಲಿಆಗುವ ಕೆಲಸವಲ್ಲ. ಆದರೆ, ಇದೀಗ ಲಾಸ್ ಏಂಜಲೀಸ್‌ನ 18 ವರ್ಷದ ವಿದ್ಯಾರ್ಥಿನಿ ರೇಚೆಲ್ ಚೆನ್ ತಮ್ಮ ಅದ್ಭುತ ಗಣಿತ ಜ್ಞಾನದ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದಾರೆ.
1997ರ ಹಿಂದಿನ ಅತ್ಯಂತ ಕಷ್ಟದ ಕ್ವಾಂಟಮ್ ಗಣಿತದ ಸಮಸ್ಯೆಯೊಂದನ್ನ ಅತ್ಯಂತ ಸರಳವಾಗಿ ವಿವರಿಸುವ ಮೂಲಕ ಇವರು ಬರೋಬ್ಬರಿ 100,000 ಡಾಲರ್ ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು 83 ಲಕ್ಷ ರೂಪಾಯಿ ಬಹುಮಾನವನ್ನ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಈ ಮೂಲಕ ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನ ಈ ಯುವತಿ ಸಾಬೀತು ಮಾಡಿದ್ದಾರೆ.

ಸೈನ್ಸ್ ಟ್ಯಾಲೆಂಟ್ ಸರ್ಚ್ 2026: ರೇಚೆಲ್ ಚೆನ್ ಐತಿಹಾಸಿಕ ಸಾಧನೆ
ಅಮೆರಿಕದ ಪ್ರತಿಷ್ಠಿತ ವಿಜ್ಞಾನ ಸ್ಪರ್ಧೆಯಾದ '2026 ರಿಜೆನೆರಾನ್ ಸೈನ್ಸ್ ಟ್ಯಾಲೆಂಟ್ ಸರ್ಚ್'ನಲ್ಲಿ ಭಾಗವಹಿಸಿದ್ದ 2,600ಕ್ಕೂ ಹೆಚ್ಚು ಸ್ಪರ್ಧಿಗಳಲ್ಲಿ ಕೇವಲ 40 ಜನ ಮಾತ್ರ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ಈ ಪೈಕಿ ರೇಚೆಲ್ ಚೆನ್ ತಮ್ಮ ವಿಶಿಷ್ಟ ಸಂಶೋಧನಾ ಪ್ರಬಂಧದ ಮೂಲಕ ನಾಲ್ಕನೇ ಸ್ಥಾನ ಪಡೆದು, 1 ಲಕ್ಷ ಡಾಲರ್ ನಗದು ಬಹುಮಾನವನ್ನ ತಮ್ಮದಾಗಿಸಿಕೊಂಡಿದ್ದಾರೆ.
ವಿಜ್ಞಾನ ಕ್ಷೇತ್ರದಲ್ಲಿ ಹೊಸ ಅನ್ವೇಷಣೆಗಳನ್ನ ಮಾಡಲು ಮತ್ತು ಸಾಧನೆ ಮಾಡಬಯಸುವ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಇದೊಂದು ಪ್ರಮುಖ ವೇದಿಕೆ. ಒಟ್ಟು 1.8 ಮಿಲಿಯನ್ ಡಾಲರ್ ಬಹುಮಾನ ಮೊತ್ತವಿದ್ದ ಈ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಕಾನರ್ ಹಿಲ್ ಎಂಬುವವರ ಪಾಲಾಗಿದೆ.
ಕ್ವಾಂಟಮ್ ಗಣಿತ ಮತ್ತು ಸಂಕೀರ್ಣ ಸಮಸ್ಯೆಗಳ ಸಿಂಪ್ಲಿಫೀಕೇಶನ್
ರೇಚೆಲ್ ಅವರ ಪ್ರಮುಖ ಸಂಶೋಧನೆಯು ಕ್ವಾಂಟಮ್ ಕಣಗಳು ಮತ್ತು ಅವುಗಳ ಸ್ಪಿನ್ ಸ್ಥಿತಿಗಳ ಗಣಿತದ ವಿವರಣೆಯನ್ನ ಆಧರಿಸಿದೆ. ಸಾಮಾನ್ಯವಾಗಿ, ಎಲೆಕ್ಟ್ರಾನ್‌ಗಳು 'ಅಪ್ʼ ಮತ್ತು 'ಡೌನ್' ಎಂಬ ಎರಡು ಸ್ಪಿನ್ ಸ್ಥಿತಿಗಳನ್ನ ಹೊಂದಿರುತ್ತವೆ. ಆದರೆ, ಈ ಕಣಗಳು ಮ್ಯಾಗ್ನೆಟಿಕ್ ಫೀಲ್ಡ್‌ಗೆ ಪ್ರತಿಕ್ರಿಯಿಸುವಾಗ ಅಥವಾ ಪರಸ್ಪರ ವರ್ತಿಸುವಾಗ ಅವುಗಳ ಗಣಿತದ ಲೆಕ್ಕಾಚಾರವು ಊಹಿಸಲಾಗದಷ್ಟು ಅತ್ಯಂತ ಕಷ್ಟಕರವಾಗಿರುತ್ತದೆ.
ಈ ಸಮಸ್ಯೆಯನ್ನ ಬಗೆಹರಿಸಲು ರೇಚೆಲ್ 'ಟೆಂಪರ್ಲಿ-ಲೀಬ್'ರೇಖಾಚಿತ್ರಗಳ ಮೊರೆಹೋಗಿದ್ದಾರೆ. ಕೇವಲ ಬಿಂದುಗಳು ಮತ್ತು ರೇಖೆಗಳನ್ನ ಬಳಸಿಕೊಂಡು ಇಡೀ ಕ್ವಾಂಟಮ್ ಕಣಗಳ ವ್ಯವಸ್ಥೆಯ ವರ್ತನೆಯನ್ನ ಅವರು ಅತ್ಯಂತ ಸರಳವಾಗಿ ಮತ್ತು ಅರ್ಥಪೂರ್ಣವಾಗಿ ತಿಳಿಸಿದ್ದಾರೆ.
ತಮ್ಮ ಈ ಅಧ್ಯಯನದಲ್ಲಿ ರೇಚೆಲ್, 'ಲುಸ್ಟಿಗ್ ಡ್ಯುಯಲ್ ಕ್ಯಾನೊನಿಕಲ್ ಬೇಸಿಸ್' ಎಂಬ ಕ್ವಾಂಟಮ್ ವ್ಯವಸ್ಥೆಯ ಪ್ರಮುಖ ರಚನೆಗೆ ಸ್ಪಷ್ಟವಾದ ಸೂತ್ರವೊಂದನ್ನು ಒದಗಿಸಿದ್ದಾರೆ. ಜೊತೆಗೆ ಈ ರೇಖಾಚಿತ್ರಗಳ ಮೂಲಕ ಹೆಕ್ಕೆ ಆಲ್ಜೀಬ್ರಾ ಸೇರಿದಂತೆ ಇತರ ರಚನೆಗಳನ್ನ ವಿಶ್ಲೇಷಿಸಿದ್ದಾರೆ.
ಇದರಿಂದಾಗಿ ಕ್ವಾಂಟಮ್ ಮೆಕ್ಯಾನಿಕ್ಸ್ ರಾತ್ರೋರಾತ್ರಿ ಸಂಪೂರ್ಣವಾಗಿ ಸರಳವಾಗಿದೆ ಎಂದು ಹೇಳಲಾಗದಿದ್ದರೂ, ಭೌತಶಾಸ್ತ್ರಜ್ಞರು ಮತ್ತು ಗಣಿತಶಾಸ್ತ್ರಜ್ಞರಿಗೆ ಕ್ವಾಂಟಮ್ ವ್ಯವಸ್ಥೆಯನ್ನ ಸುಲಭವಾಗಿ ಅಧ್ಯಯನ ಮಾಡಲು ಈ ಸಂಶೋಧನೆ ಹೊಸ ದೃಷ್ಟಿಕೋನವನ್ನು ನೀಡಿದೆ ಎಂಬುದಂತೂ ಸತ್ಯ.
ಚೆಸ್, ವಾಲಿಬಾಲ್ ಮತ್ತು ಟೇಲರ್ ಸ್ವಿಫ್ಟ್ ಅಭಿಮಾನಿ
ರೇಚೆಲ್ ಕೇವಲ ಗಣಿತದ ಹುಡಗಿಯಷ್ಟೇ ಅಲ್ಲ, ಆಕೆ ಕ್ರೀಡೆ ಮತ್ತು ಸಂಗೀತದಲ್ಲೂ ಅಪಾರ ಆಸಕ್ತಿ ಹೊಂದಿದ್ದಾಳೆ. ಲಾಸ್ ಏಂಜಲೀಸ್‌ನ ಮಾರ್ಲ್ಬರೋ ಶಾಲೆಯಲ್ಲಿ ಓದುತ್ತಿರುವ ಈಕೆ, ಅಲ್ಲಿಯೇ 'ಮ್ಯಾಥಮೆಟಿಕ್ಸ್ ಕ್ಲಬ್' ಸ್ಥಾಪಿಸಿದ್ದು ಅದರಲ್ಲಿ ಈಗ 100ಕ್ಕೂ ಹೆಚ್ಚು ಸದಸ್ಯರಿದ್ದಾರೆ.
ಇದಲ್ಲದೆ ಆಕೆ ಅಂತಾರಾಷ್ಟ್ರೀಯ ಮಟ್ಟದ ಚೆಸ್ ಆಟಗಾರ್ತಿಯಾಗಿದ್ದು, 2022ರ ಪ್ಯಾನ್-ಅಮೆರಿಕನ್ ಚೆಸ್ ಉತ್ಸವದಲ್ಲಿ ಚಾಂಪಿಯನ್ ಆಗಿದ್ದಳು.
ಗಣಿತದಲ್ಲಿ ಆಸಕ್ತಿ ಇರುವ ಹೆಣ್ಣುಮಕ್ಕಳಿಗೆ ಪ್ರೋತ್ಸಾಹ ನೀಡುವ 'ಅಥೆಮ್ಯಾಥ್' ಎಂಬ ಸಂಸ್ಥೆಯಲ್ಲೂ ಆಕೆ ಕಾರ್ಯನಿರ್ವಹಿಸುತ್ತಿದ್ದಾಳೆ. ಇಷ್ಟೇ ಅಲ್ಲದೆ, ಪ್ರಸಿದ್ಧ ಗಾಯಕಿ ಟೇಲರ್ ಸ್ವಿಫ್ಟ್ ಅವರ ಅಪ್ಪಟ ಅಭಿಮಾನಿಯಾಗಿರುವ ರೇಚೆಲ್, ಆಕೆಯ ಸುಮಾರು 200ಕ್ಕೂ ಹೆಚ್ಚು ಹಾಡುಗಳ ಸಾಹಿತ್ಯವನ್ನು ಬಾಯಿಪಾಠ ಮಾಡಿದ್ದಾಳೆ.
ಕೇವಲ ಪುಸ್ತಕದ ಬದನೆಕಾಯಿ ಆಗದೆ ಬಹುಮುಖ ಪ್ರತಿಭೆಯನ್ನು ಹೊಂದಿರುವ ರೇಚೆಲ್ ಚೆನ್ ಸಾಧನೆ ಇಂದಿನ ಯುವಜನತೆಗೆ ನಿಜಕ್ಕೂ ಸ್ಫೂರ್ತಿ.


Click it and Unblock the Notifications
