AI ಎಷ್ಟೇ ಬೆಳೆದರೂ ದೇವರು, ಧರ್ಮ ಮರೆಯಬೇಡಿ; ಆಧುನಿಕ ಸಮಾಜಕ್ಕೆ ಹಳೆಯ ನಂಬಿಕೆಗಳೇ ದಾರಿ; ಶ್ರೀಧರ್ ವೆಂಬು
ಇದು AI ಯುಗ. ಎಲ್ಲಾ ಕ್ಷೇತ್ರಗಳಲ್ಲಿಯೂ ಎಐನದ್ದೇ ದರ್ಬಾರು. ಈ ಎಐ ಅಥವಾ ಕೃತಕ ಬುದ್ಧಿಮತ್ತೆ ಅನ್ನೋದು ಜಗತ್ತನ್ನು ಬಹಳ ವೇಗವಾಗಿ ಬದಲಾಯಿಸ್ತಾ ಇದೆ. ಮನುಷ್ಯರ ಕೆಲಸವನ್ನು ಮೆಷಿನ್ ಮಾಡುತ್ತಿದೆ. ಗಂಟೆಗಳ ಕೆಲಸ ಸೆಕೆಂಡುಗಳಲ್ಲಿ ಮುಗಿತಾ ಇದೆ. ಮನುಷ್ಯರನ್ನು ಮೆಷಿನ್ ರಿಪ್ಲೇಸ್ ಮಾಡುವ ಹಂತಕ್ಕೆ ನಾವು ಬಂದು ನಿಂತಿದ್ದೇವೆ. ಮನುಷ್ಯರು ಮಾತ್ರ ಮಾಡಬಹುದಾಗಿದ್ದ ಅದೆಷ್ಟೋ ಕೆಲಸವನ್ನು ಈಗ ಮೆಷಿನ್ ಮಾಡಿ ಮುಗಿಸುತ್ತಿದೆ. ಮೆಷಿನ್ ಜೊತೆಗೆನೇ ಹೆಚ್ಚಿನ ಸಮಯ ಕಳೆಯುವುದಿಂದ ನಮ್ಮೊಳಗಿನ ಇಮೋಶನ್ ಕೂಡಾ ಕಡಿಮೆಯಾಗುತ್ತಿದೆಯೋ ಏನೋ ಎಂದು ತುಂಬಾ ಸಲ ಅನ್ನಿಸಿಬಿಡುತ್ತದೆ.
ಇದೆಲ್ಲದರ ಮಧ್ಯೆ, ಜೊಹೋ ಸಹ-ಸಂಸ್ಥಾಪಕ ಶ್ರೀಧರ್ ವೆಂಬು ಎಐ ಅವಲಂಬನೆ ಹೆಚ್ಚಾಗ್ತಾ ಇರುವ ಬಗ್ಗೆ ಮಾತಾಡಿದ್ದಾರೆ. ಎಐ ಎಷ್ಟೇ ನಮ್ಮನ್ನು ಆವರಿಸಿದರೂ ಮುಂದಿನ ದಿನಗಳಲ್ಲಿ ಧರ್ಮ ಮತ್ತು ನಂಬಿಕೆಯ ಪ್ರಾಮುಖ್ಯತೆ ಹೆಚ್ಚಾಗಬಹುದು ಎನ್ನುವುದು ಅವರ ಅಭಿಪ್ರಾಯ.

ಮನುಷ್ಯ ಮೆಷಿನ್ ಭಿನ್ನವಾಗುವುದು ಹೇಗೆ?
ಎಐ ಮನುಷ್ಯರಂತೆಯೇ ಯೋಚಿಸುತ್ತದೆ, ವರ್ತಿಸುತ್ತದೆ. ಆದರೂ ಎಐ ಮೆಷಿನ್ ಅನ್ನುವುದನ್ನು ಮರೆಯಬಾರದು. ಮನುಷ್ಯ ಮತ್ತು ಮೆಷಿನ್ ಒಂದೇನಾ? ಮನುಷ್ಯ ಮೆಷಿನಿಗಿಂತ ಭಿನ್ನವಾಗಿ ಕಾಣುವುದು ಹೇಗೆ? ಯಾವ ವಿಚಾರದಲ್ಲಿ ಎನ್ನುವುದು ಯೋಚಿಸಬೇಕಾದ ವಿಷಯ. ಪ್ರಕೃತಿ, ಪಾಲನೆ, ಸಂಸ್ಕೃತಿ ಮತ್ತು ಧರ್ಮದಲ್ಲಿ ಈ ಪ್ರಶ್ನೆಗೆ ಉತ್ತರ ಇದೆ ಎನ್ನುವುದು ವೆಂಬು ಅವರ ವಾದ ಮತ್ತು ನಂಬಿಕೆ. ಅವರು ಈ ವಿಷಯವನ್ನು ಸನಾತನ ಧರ್ಮದೊಂದಿಗೆ ಜೋಡಿಸಿದ್ದಾರೆ.
ಆಧುನಿಕ ಸಮಾಜದಲ್ಲಿ ಧರ್ಮ ಮತ್ತು ನಂಬಿಕೆ ಬಿಡಬಾರದು
ನಾವು ಎಷ್ಟೇ ಬೆಳೆಯಲಿ, ತಂತ್ರಜ್ಞಾನ ಅದೆಷ್ಟೇ ಮುಂದುವರಿಯಲಿ ಧರ್ಮ ಮತ್ತು ನಂಬಿಕೆಯನ್ನು ಯಾವತ್ತೂ ಮರೆಯಬಾರದು ಎನ್ನುತ್ತಾರೆ ಶ್ರೀಧರ್ ವೆಂಬು. ಇಂದು ಜನ ಆಧುನೀಕತೆಯತ್ತ ವಾಲುತ್ತಿದ್ದಾರೆ. ಇದು ಖಂಡಿತಾ ತಪ್ಪಲ್ಲ, ಆದರೆ ಧರ್ಮದಿಂದ ದೂರ ಸರಿಯುತ್ತಿದ್ದಾರೆ ಎನ್ನುವುದು ಬೇಸರ. ಅವರ ಪ್ರಕಾರ, ಹಳೆಯ ಪೀಳಿಗೆಯ ನಂಬಿಕೆ ಇವತ್ತಿನ ಸಮಾಜ ಮುಂದೆ ಸಾಗುವುದಕ್ಕೆ ಸಹಾಯ ಮಾಡಿದೆ. ಎಐ ಯುಗದಲ್ಲಿ, ಜನ ಜೀವನವನ್ನು ಅರ್ಥ ಮಾಡಿಕೊಳ್ಳಲು, ಜೀವನದ ನಿಜವಾದ ಅರ್ಥ ತಿಳಿಯಲು, ತಮ್ಮನ್ನು ತಾವು ಗುರುತಿಸಿಕೊಳ್ಳಲು ಧರ್ಮದ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಬಹುದು.
ಧರ್ಮದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ
ಸೋಶಿಯಲ್ ಮಿಡಿಯಾದಲ್ಲಿ ಕೆಲವರು ವೆಂಬು ಅವರ ಅಂಶವನ್ನು ಒಪ್ಪಿಕೊಂಡಿದ್ದಾರೆ. ಆದರೆ ಇನ್ನು ಕೆಲವರು ಇದನ್ನು ಒಪ್ಪಲಿಲ್ಲ. ಕಾಲಕ್ಕೆ ತಕ್ಕಂತೆ ಸಮಾಜ ಬದಲಾಗುತ್ತದೆ. ಕಾಲ ಬದಲಾಗುತ್ತಾ ಇದ್ದ ಹಾಗೆ ಹೊಸ ಹೊಸ ಟೆಕ್ನಾಲಜಿ ಪರಿಚಯ ಆಗ್ತಾ ಇದ್ದ ಹಾಗೆ ಜನರು ಹಳೆಯ ನಂಬಿಕೆಯನ್ನು ಪ್ರಶ್ನಿಸುತ್ತಾರೆ. ಇದು ಸಹಜ ಎನ್ನುವುದು ಕೆಲವರ ಅಭಿಪ್ರಾಯ.
ಯಾವುದೇ ಧರ್ಮ ಇರಲಿ ಪ್ರಶ್ನೆಗಳನ್ನು ಕೇಳುವ ಮತ್ತು ಮುಕ್ತವಾಗಿ ಮಾತನಾಡುವ ಸ್ವಾತಂತ್ರ್ಯ ಇರಬೇಕು ಎಂದು ಒಬ್ಬರು ಹೇಳಿದ್ಧಾರೆ. ಎಐ ಅಥವಾ ಕೃತಕ ಬುದ್ಧಿಮತ್ತೆ ಯುಗದಲ್ಲಿ ಧರ್ಮದ ಪಾತ್ರದ ಬಗ್ಗೆ ಮಾತನಾಡುವುದು ಅಗತ್ಯ ಎನ್ನುವುದನ್ನು ತುಂಬಾ ಮಂದಿ ಒತ್ತಿ ಹೇಳಿದ್ಧಾರೆ.
ಎಐಯೊಂದಿಗೆ ಭವಿಷ್ಯದಲ್ಲಿ ಒಂದಷ್ಟು ಬದಲಾವಣೆ
ಮುಂಬರುವ ದಿನಗಳಲ್ಲಿ ಎಐಯಿಂದಾಗಿಯೇ ಅನೇಕ ವಿಷಯಗಳನ್ನು ಬದಲಾಯಿಸಬಹುದು ಎನ್ನುವುದು ಶ್ರೀಧರ್ ವೆಂಬು ನಂಬಿಕೆ. ಹವಾಮಾನ ಬದಲಾವಣೆ, ಕ್ಯಾನ್ಸರ್ ಚಿಕಿತ್ಸೆ ಮತ್ತು ದುಬಾರಿ ಮನೆಯ ಸಮಸ್ಯೆ ಪರಿಹರಿಸಲು ಇದು ಸಹಾಯ ಮಾಡುತ್ತದೆ. ಎಐ ಹೊಸ ತಂತ್ರಜ್ಞಾನ ರಚನೆ ಸುಲಭವಾಗಿಸುತ್ತದೆ. ಆದರೆ ಇದು ಮಾನವ ಜೀವನ ಮತ್ತು ಧರ್ಮದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಇನ್ನೂ ಹೇಳಲು ಸಾಧ್ಯವಿಲ್ಲ.


Click it and Unblock the Notifications
