ಟಿ.ನರಸೀಪುರ ಗಣೇಶೋತ್ಸವ ವಿವಾದ: ಆಚರಣೆಗೆ ಹಿಂದುಗಳು ಗೋಗರೆಯುವ ಸ್ಥಿತಿ ಇದೆ: ಜೋಶಿ, ಧರ್ಮ ರಾಜಕಾರಣವೆಂದ ಖರ್ಗೆ
ಬೆಂಗಳೂರು: ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ಮೈಸೂರಿನ ಟಿ.ನರಸೀಪುರ ಇದೀಗ ಕೇಂದ್ರಬಿಂದುವಾಗಿದೆ. ಇಲ್ಲಿನ ಇನ್‌ಸ್ಪೆಕ್ಟರ್ ನೀಡಿದ ಎಚ್ಚರಿಕೆಯು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೆ ಧರ್ಮ ರಾಜಕಾರಣ, ಕಾನೂನು ಸುವ್ಯವಸ್ಥೆ ಮೂಲಕ ಹಿಂದೂಗಳ ಆಚರಣೆಗೆ ಸರ್ಕಾರ ಬ್ರೇಕ್ ಹಾಕಲು ಮುಂದಾಗಿದೆ ಎಂಬ ದೂರುಗಳು ಕೇಳಿ ಬಂದಿವೆ. ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ವಾಗ್ದಾಳಿ ನಡೆಸಿದರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಧರ್ಮ ರಾಜಕಾರಣ ವಿರುದ್ಧ ಆರ್.ಅಶೋಕ್ ವಿರುದ್ಧ ಕಿಡಿ ಕಾರಿದ್ದಾರೆ.
ಪ್ರಹ್ಲಾದ್ ಜೋಶಿಯವರು, ನಮ್ಮದೇ ದೇಶದಲ್ಲಿ, ನಮ್ಮದೇ ಹಿಂದೂ ನೆಲದಲ್ಲಿ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಲು ಹಿಂದೂಗಳು ಗೋಗರೆಯಬೇಕಾದ ಪರಿಸ್ಥಿತಿ ರಾಜ್ಯದಲ್ಲಿದೆ ಎಂದರೆ ಇದಕ್ಕಿಂತ ದುರ್ದೈವದ ಸಂಗತಿ ಇನ್ನೊಂದಿಲ್ಲ! ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಟಿ. ನರಸೀಪುರದ ಇನ್ಸ್‌ಪೆಕ್ಟರ್, ಗಣೇಶ ಸಮಿತಿಯ ಯುವಕರಿಗೆ ಸಾರ್ವಜನಿಕವಾಗಿ ಧಮ್ಕಿ ಹಾಕುವಷ್ಟು ಧೈರ್ಯ ನೀಡಿದವರು ಯಾರು?. ಇದು ಪೊಲೀಸ್ ಇಲಾಖೆಗೆ ಗೃಹ ಸಚಿವರು ನೀಡಿದ ಅಧಿಕಾರವೋ ಅಥವಾ ಡಿ.ಕೆ. ಶಿವಕುಮಾರ್ ಅವರ ಕಾಂಗ್ರೆಸ್ ಸರ್ಕಾರದ ತುಷ್ಟಿಕರಣ ರಾಜಕಾರಣದ ಫರ್ಮಾನಾ? ಎಂದು ಪ್ರಶ್ನಿಸಿದರು.
ಸುವ್ಯವಸ್ಥೆ ಕಾಪಾಡಬೇಕಾದ ಅಧಿಕಾರಿಯೇ ಒಂದು ಸಮುದಾಯದ ಏಜೆಂಟ್‌ನಂತೆ ವರ್ತಿಸಿ, ಬೆದರಿಸುತ್ತಿರುವುದು ಅಕ್ಷಮ್ಯ ಅಪರಾಧ. ಭಕ್ತಿಭಾವದಿಂದ ಹಬ್ಬ ಆಚರಿಸಲು ಬಂದ ಯುವಕರಿಗೆ ಬೆದರಿಕೆ ಹಾಕಿರುವ ಇನ್ಸ್‌ಪೆಕ್ಟರ್ ಧನಂಜಯ್ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತು ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆಯ ನೆಪವೊಡ್ಡಿ ಹಿಂದೂ ಹಬ್ಬಗಳ ಆಚರಣೆಯನ್ನೇ ಹತೋಟಿ ಮಾಡಲು ಹೊರಟಿರುವುದು ಈ ಸರ್ಕಾರದ ಹಿಂದೂ ವಿರೋಧಿ ಧೋರಣೆಗೆ ಹಿಡಿದ ಕನ್ನಡಿ. ನಮ್ಮ ಸನಾತನ ಸಂಸ್ಕೃತಿ, ಆಚರಣೆ ಹಾಗೂ ಭಕ್ತಿಭಾವದ ಮೇಲೆ ಧಕ್ಕೆ ತರಲು ಯತ್ನಿಸಿದರೆ ಅದನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ! ಎಂದು ಎಚ್ಚರಿಸಿದರು.
ಬಿಜೆಪಿಗರಿಗೆ ಧರ್ಮ ರಾಜಕಾರಣಕ್ಕೆ ಅನುಕೂಲ: ಖರ್ಗೆ
ಎಕ್ಸ್ ಪೋಸ್ಟ್‌ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು, 'ಧರ್ಮದ ವಿಚಾರದಲ್ಲಿ ಹಿಂದೂ ನಾಯಕರು ಭಾಷಣದಲ್ಲಿ ಮುಸ್ಲಿಮರ ಬಗ್ಗೆ ಮಾತನಾಡಬೇಕು ಎಂದಿರುವ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಯ' ವಿಡಿಯೋ ಹಂಚಿಕೊಂಡಿದ್ದಾರೆ. ಅಹಿತಕರ ಘಟನೆಗಳಾಗದಂತೆ ಮುಂಜಾಗ್ರತಾ ಕ್ರಮವಾಗಿ ಅನುಮತಿ ನೀಡಲಾದ ರೂಟ್ ಮ್ಯಾಪ್ ನಂತೆಯೇ ಗಣಪತಿ ಮೆರವಣಿಗೆ ಸಾಗಬೇಕು ಎಂಬ ಪೊಲೀಸರ ನಿರ್ದೇಶನವೇ ಬಿಜೆಪಿಗರಿಗೆ ಧರ್ಮ ರಾಜಕಾರಣದ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ ಭಾವಿಸಿದ್ದಾರೆ ಎಂದು ಖರ್ಗೆ ಟೀಕಿಸಿದ್ದಾರೆ.
'ಪ್ರತಿಭಟನೆ ಎಂಬ ಸದಾರಮೆ ನಾಟಕ ಮಾಡಲು ಹಿಂದುತ್ವದ ವೇಷ ತೊಟ್ಟು ಮೈಸೂರಿನ ಟಿ. ನರಸೀಪುರಕ್ಕೆ ತೆರಳುತ್ತಿರುವ ಆರ್. ಅಶೋಕ್ ಅವರೇ, ಈ ಹಿಂದೆ ನಿಮ್ಮದೇ ಬಾಯಿಯಿಂದ ಉದುರಿದ ಅಣಿಮುತ್ತುಗಳನ್ನು ಒಮ್ಮೆ ಕೇಳಿಸಿಕೊಂಡು ಆತ್ಮವಿಮರ್ಶೆ ಮಾಡಿಕೊಳ್ಳಿ! ಎಂದು ವಿಡಿಯೋದೊಂದಿಗೆ ಬರೆದುಕೊಂಡಿದ್ದಾರೆ.
"ಧರ್ಮ ರಾಜಕಾರಣ" ಶುರು..
ನಿಮ್ಮದೇ ಹೇಳಿಕೆಯಂತೆ, ನೀವೀಗ "ಧರ್ಮ ರಾಜಕಾರಣ" ಶುರು ಮಾಡಿರುವುದು ನಾಯಕ ಎನಿಸಿಕೊಳ್ಳುವುದಕ್ಕಾ ಅಥವಾ ಅಭದ್ರತೆಯಲ್ಲಿರುವ ವಿಪಕ್ಷ ನಾಯಕನ ಸ್ಥಾನವನ್ನು ಉಳಿಸಿಕೊಳ್ಳುವುದಕ್ಕಾ?. ಅಶೋಕ್ ಅವರೇ, ಕಾನೂನು ಸುವ್ಯವಸ್ಥೆ ಕಾಪಾಡುವ ವಿಚಾರದಲ್ಲಿ ಮತ್ತು ರಾಜ್ಯದಲ್ಲಿ ಕೋಮು ಸಂಘರ್ಷ ನಿಗ್ರಹಿಸುವ ವಿಷಯದಲ್ಲಿ ನಾನು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಪೊಲೀಸರ ಮೇಲೆ ನಿಮ್ಮ ದರ್ಪ ದೌರ್ಜನ್ಯಗಳನ್ನು ಸಹಿಸುವುದೂ ಇಲ್ಲ ಎಂದು ಅವರು ಹೇಳಿದ್ದಾರೆ.
ಟಿ.ನರಸೀಪುರದ ಘಟನೆ ಏನು? ಹೈಡ್ರಾಮಾ!
ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಗಣೇಶೋತ್ಸವ ವೇಳೆ ಮಸೀದಿ ಮುಂದೆ ಪಟಾಕಿ ಸಿಡಿಸಿದರೆ, ಮೆರಣವಣಿಗೆ ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಗಣೇಶ ಸಮಿತಿಗಳಿಗೆ ಸೂಚನೆ ನೀಡಿದ್ದಾರೆ. ಇದು ಇದೀಗ ಭಾರೀ ವಿವಾದ ಸೃಷ್ಟಿಸಿದೆ. ಇತರ ಧರ್ಮದವರು ತಮ್ಮ ಆಚರಣೆ ಮಾಡುವಾಗ ಇರದ ಕಟ್ಟಳೆಗಳು ಹಿಂದೂಗಳ ಆಚರಣೆ ವೇಳೆ ಹೇರುವುದೇಕೆ? ಎಂದು ಹಿಂದೂಗಳು ಪ್ರಶ್ನಿಸಿದ್ದಾರೆ. ಸರ್ಕಾರ ಕಾನೂನು ಸುವ್ಯವಸ್ಥೆ ಹೆಸರನಲ್ಲಿ ಹಿಂದುಗಳ ಮೇಲೆ ಹೇರಿಕೆ ಹೇರುತ್ತಿದೆ ಎಂದು ದೂರಿದ್ದಾರೆ. ಗಣೇಶೋತ್ಸವ, ಮೆರವಣಿಗೆ ಮಾಡಿಯೇ ತೀರುತ್ತೇವೆ ಎಂದು ಕೆಲವು ಸಂಘಟನೆಯವರು ಹೇಳಿದ್ದಾರೆ.
ಇತ್ತ ಬಿಜೆಪಿ ನಾಯಕರು ಟಿ.ನರಸೀಪುರಕ್ಕೆ ತೆರಳಿದ್ದಾರೆ. ಸ್ಥಳದಲ್ಲಿನ ವಾಸ್ತವ ಸ್ಥಿತಿ ಪರಿಶೀಲಿಸಲಿದ್ದಾರೆ. ಪ್ರತಿಭಟನಾ ಮೆರಣಿಗೆ ನಡೆಸಿದ್ದು, ಹೆದರದೇ ಗಣೇಶೋತ್ಸವ ಮಾಡುವಂತೆ ತಿಳಿಸಿದ್ದಾರೆ. ಟೀ ನರಸೀಪುರದಲ್ಲಿ ದೊಡ್ಡ ಹೈಡ್ರಾಮಾ ಕ್ರಿಯೇಟ್ ಆಗಿದ್ದು, ಗಣೇಶೋತ್ಸವ ವೇಳೆ ಕೇಂದ್ರ ಬಿಂದುವಾಗಿದೆ.


Click it and Unblock the Notifications
