Year Ender 2024: ಈ ವರ್ಷ ಇಸ್ರೋ ಮಾಡಿದ ಪ್ರಮುಖ ಸಾಧನೆಗಳ ಪಟ್ಟಿ
2024ರಲ್ಲಿ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ಇಸ್ರೋ) ಹಲವು ಮೈಲಿಗಲ್ಲುಗಳನ್ನು ಸಾಧಿಸಿದೆ. ಬಾಹ್ಯಾಕಾಶ ಜಗತ್ತಿನಲ್ಲಿ ತಾನು ಎಷ್ಟು ಶಕ್ತಿಶಾಲಿ ದೇಶ ಎನ್ನುವುದನ್ನು ಭಾರತ ಸಾಬೀತುಪಡಿಸಿದೆ. ಜಾಗತಿಕವಾಗಿ ಭಾರತ ಈಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಐದನೇ ಸ್ಥಾನದಲ್ಲಿದೆ. ಈ ವರ್ಷ ಜಗತ್ತಿನ ಹಲವು ರಾಷ್ಟ್ರಗಳು ಭಾರತದ ಸಾಧನೆಯನ್ನು ಕೌತುಕದಿಂದಲೇ ನೋಡಿವೆ.
ಇಸ್ರೋ ಮುಂದಿನ ಪೀಳಿಗೆಗಾಗಿ ಹಲವು ಮಹತ್ವಾಕಾಂಕ್ಷೆಯ ಗುರಿ ಹೊಂದಿದೆ. ಬಾಹ್ಯಾಕಾಶಕ್ಕೆ ಗಗನಯಾತ್ರಿಗಳನ್ನು ಕಳಿಸಲು ಈಗಾಗಲೇ ಸಿದ್ಧತೆ ಆರಂಭಿಸಿದೆ. ಮುಂದಿನ ದಿನಗಳಲ್ಲಿ ಚಂದ್ರನ ಮೇಲೂ ಭಾರತೀಯರ ಹೆಜ್ಜೆ ಗುರತು ಮೂಡಿಸುವುದು ಇಸ್ರೋದ ಕನಸಲಾಗಿದೆ. 2024ರಲ್ಲಿ ಇಸ್ರೋ ಹಲವು ಸಾಧನೆಗಳನ್ನು ಮಾಡಿದೆ. ಅಂತಹ ಪ್ರಮುಖ ಸಾಧನೆಗಳ ಹಿನ್ನೋಟ ಇಲ್ಲಿದೆ.

ಎಕ್ಸ್‌ಪೋಸಾಟ್ (XpoSat) ಉಡಾವಣೆ
2024ರ ಹೊಸ ವರ್ಷದ ದಿನವೇ ಇಸ್ರೋ ಶ್ರೀ ಹರಿಕೋಟಾದಿಂದ ಪಿಎಸ್‌ಎಲ್‌ವಿ-ಸಿ58 ಎಕ್ಸ್-ರೇ ಪೋಲಾರಿಮೀಟರ್ (XPoSat) ಉಪಗ್ರವನ್ನು ಉಡಾವಣೆ ಮಾಡಿ ಈ ವರ್ಷವನ್ನು ಭರ್ಜರಿಯಾಗಿ ಆರಂಭಿಸಿತು. ಕಪ್ಪುಕುಳಿಗಳು, ನಕ್ಷತ್ರಗಳು ಸೇರಿದಂತೆ ಖಗೋಳ ವಿದ್ಯಮಾನವನ್ನು ಅಧ್ಯಯನ ಮಾಡಲು ಈ ಉಪಗ್ರಹವನ್ನು ವಿನ್ಯಾಸ ಮಾಡಲಾಗಿತ್ತು. ಈ ಸಾಧನೆ ಮಾಡಿದ ಜಗತ್ತಿನ ಎರಡನೇ ದೇಶ ಭಾರತವಾಗಿದೆ.
ಸೌರ ಮಿಷನ್ ಆದಿತ್ಯ-ಎಲ್1
ಜನವರಿ 6ರಂದು ಭಾರತ ತನ್ನ ಮೊದಲ ಸೌರ ಮಿಷನ್ ಆದಿತ್ಯ - ಎಲ್1 ಭೂಮಿಯಿಂದ 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಎಲ್1 ಗಮ್ಯಸ್ಥಾನವನ್ನು ತಲುಪಿದಾಗ ಇಡೀ ದೇಶವೇ ಸಂಭ್ರಮಿಸಿತು. ಸೆಪ್ಟೆಂಬರ್ 2, 2023 ರಂದು ಉಡಾವಣೆಗೊಂಡ ಬಾಹ್ಯಾಕಾಶ ನೌಕೆ ಎಲ್1 ಬಿಂದುವಿನ ಸುತ್ತ ಇರುವ ಹಾಲೀ ಕಕ್ಷೆಯನ್ನು ಪ್ರವೇಶಿಸಿತ್ತು. ಇದು ಸೂರ್ಯನ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಇಸ್ರೋಗೆ ಸಹಾಯ ಮಾಡುತ್ತದೆ.
ಇನ್ಸಾಟ್- 3ಡಿಎಸ್ ಉಪಗ್ರಹ
ಫೆಬ್ರವರಿ 17ರಂದು ಇಸ್ರೋ ಜಿಎಸ್‌ಎಲ್‌ವಿ-ಎಂಕೆII ರಾಕೆಟ್‌ನಲ್ಲಿ ಇನ್ಸಾಟ್-3ಡಿಎಸ್ (INSAT-3DS) ಹವಾಮಾನ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ಇದು 10 ವರ್ಷಗಳ ಕಾರ್ಯ ನಿರ್ವಹಿಸಲಿದ್ದು, ಭಾರತದ ಹವಾಮಾನ ಮುನ್ಸೂಚನೆ, ಸಮುದ್ರದ ಮೇಲಿನ ಚಂಡಮಾರುತ ಸೇರಿದಂತೆ ಹಲವು ಪ್ರಕೃತಿ ವಿಕೋಪಗಳ ಬಗ್ಗೆ ಮುನ್ಸೂಚನೆ ನೀಡಲಿದೆ.
ಪುಷ್ಪಕ್ (RLV LEX-02)
ಮಾರ್ಚ್ 22ರಂದು ಇಸ್ರೋ ಮತ್ತೊಂದು ಮಹತ್ವದ ಸಾಧನೆ ಮಾಡಿತು. ಆರ್‍ಎಲ್‌ವಿ ಎಲ್‌ಇಎಕ್ಸ್-02 ಪ್ರಯೋಗದ ಮೂಲಕ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಿತು. ಬಾಹ್ಯಾಕಾಶ ನೌಕೆಗಳ ಮರುಬಳಕೆ ಮಾಡುವ ಇಸ್ರೋದ ಮಹತ್ವದ ಕನಸಿಗೆ ಇದು ಮತ್ತಷ್ಟು ಬಲ ತುಂಬಿತು. ಜೂನ್ 23 ರಂದು, ಆರ್‍ಎಲ್‌ವಿ ಲ್ಯಾಂಡಿಂಗ್ ಪ್ರಯೋಗ ಸರಣಿಯಲ್ಲಿ (RLV LEX-03) ಮೂರನೇ ಮತ್ತು ಅಂತಿಮ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ಪೂರ್ಣಗೊಳಿಸಿತು.
ಎಸ್‌ಎಸ್‌ಎಲ್‌ವಿ ಡಿ3 ಯಶಸ್ವಿ ಉಡಾವಣೆ
ಆಗಸ್ಟ್ 16 ರಂದು, ಇಸ್ರೋ ಎಸ್‌ಎಸ್‌ಎಲ್‌ವಿ-ಡಿ3 ಎಂಬ ಸಣ್ಣ ಉಪಗ್ರಹ ಉಡಾವಣಾ ವಾಹನವನ್ನು ಉಡಾವಣೆ ಮಾಡಿತು, ಇದು ಇಒಎಸ್-08 ಭೂ ವೀಕ್ಷಣಾ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತು.
ಪ್ರೋಬಾ-3 ಉಡಾವಣೆ
ಡಿಸೆಂಬರ್ 5 ರಂದು, ಇಸ್ರೋ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಪ್ರೊಬಾ -3 ಉಪಗ್ರಹಗಳನ್ನು ಪಿಎಸ್ಎಲ್ವಿ ಬಳಸಿ ಕಕ್ಷೆಗೆ ಯಶಸ್ವಿಯಾಗಿ ಉಡಾವಣೆ ಮಾಡಿತು. 2026ರ ಅಂತ್ಯದ ವೇಳೆಗೆ ಗಗನಯಾನ್ ಮಿಷನ್ ಸಾಕಾರಗೊಳಿಸಲು ಇಸ್ರೋ ಕೆಲಸ ಮಾಡುತ್ತಿದೆ. ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳಿಸುವ ಮಹತ್ವದ ಯೋಜನೆ ಇದಾಗಿದೆ.












Click it and Unblock the Notifications