ಹೈದರಾಬಾದ್: ಟಾಕ್ಸಿಕ್ ಈವೆಂಟ್‌ನಲ್ಲಿ ಸೌಂಡ್ ಬಾಕ್ಸ್ ಬಿದ್ದು 2 ವಿದ್ಯಾರ್ಥಿಗಳಿಗೆ ಗಾಯ, ಕಾರ್ಯಕ್ರಮ ನಿಲ್ಲಿಸಿದ ರಾಕಿಭಾಯ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇದೇ ಆಗಸ್ಟ್ 26ರಂದು ವಿಶ್ವಾದ್ಯಂತ ಅದ್ದೂರಿಯಾಗಿ ತೆರೆಕಾಣಲಿರುವ ಈ ಚಿತ್ರದ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿವೆ. ಆದರೆ, ಶನಿವಾರ ಸಂಜೆ ಹೈದರಾಬಾದ್‌ನಲ್ಲಿ ನಡೆದ ಟಾಕ್ಸಿಕ್ ಚಿತ್ರದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಅನಿರೀಕ್ಷಿತ ಅವಘಡವೊಂದು ಸಂಭವಿಸಿದೆ.
ಕಾರ್ಯಕ್ರಮ ನಡೆಯುತ್ತಿರುವಾಗ ಬೃಹತ್ ಸೌಂಡ್ ಬಾಕ್ಸ್ ಸೆಟಪ್ ಕುಸಿದು ಬಿದ್ದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಕಾರ್ಯಕ್ರಮವನ್ನು ಕೆಲಕಾಲ ಸ್ಥಗಿತಗೊಳಿಸಲಾಯಿತು.

ಹೈದರಾಬಾದ್‌ನ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದಲ್ಲಿ ಶನಿವಾರ ಸಂಜೆ ಚಿತ್ರತಂಡ ಪ್ರೀ-ರಿಲೀಸ್ ಈವೆಂಟ್ ಆಯೋಜಿಸಿತ್ತು. ತಮ್ಮ ನೆಚ್ಚಿನ ನಟ ಯಶ್ ಅವರನ್ನ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಜಮಾಯಿಸಿದ್ದರು. ಯಶ್ ವೇದಿಕೆ ಮೇಲೆ ನಿಂತು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಿರುವಾಗಲೇ, ಜನಸಂದಣಿಯ ನಡುವೆ ಅಳವಡಿಸಲಾಗಿದ್ದ ಬೃಹತ್ ಸೌಂಡ್ ಬಾಕ್ಸ್ ಏಕಾಏಕಿ ಕುಸಿದು ಬಿದ್ದಿದೆ.
ಈ ಅನಿರೀಕ್ಷಿತ ಘಟನೆಯಿಂದಾಗಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಸೌಂಡ್ ಬಾಕ್ಸ್ ಕೆಳಗೆ ಸಿಲುಕಿ ಇಬ್ಬರು ವಿದ್ಯಾರ್ಥಿಗಳಿಗೆ ಗಂಬೀರ ಗಾಯಗಳಾಗಿವೆ ಎಂದು ವರದಿಯಾಗಿದೆ.
ಅಭಿಮಾನಿಗಳ ಸುರಕ್ಷತೆಗೆ ಯಶ್ ಆದ್ಯತೆ: ಕೆಲಕಾಲ ಈವೆಂಟ್ ಸ್ಥಗಿತ
ವೇದಿಕೆ ಮೇಲಿದ್ದ ನಟ ಯಶ್ ತಕ್ಷಣವೇ ಘಟನೆಯನ್ನ ಗಮನಿಸಿ, ತಮ್ಮ ಭಾಷಣವನ್ನ ನಿಲ್ಲಿಸಿದರು. "ಅವರೆಲ್ಲ ಸುರಕ್ಷಿತವಾಗಿದ್ದಾರೆಯೇ? ದಯವಿಟ್ಟು ಪರಿಶೀಲಿಸಿ" ಎಂದು ಆಯೋಜಕರು ಮತ್ತು ಭದ್ರತಾ ಸಿಬ್ಬಂದಿಗೆ ಮೈಕ್ ಮೂಲಕವೇ ಸೂಚನೆ ನೀಡಿದರು.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳನ್ನ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದೇ ವೇಳೆ, ಯಶ್ ಅವರನ್ನು ಹತ್ತಿರದಿಂದ ನೋಡುವ ಉತ್ಸಾಹದಲ್ಲಿ ಕೆಲ ವಿದ್ಯಾರ್ಥಿಗಳು ಸುತ್ತಮುತ್ತಲಿನ ಎತ್ತರದ ಕಟ್ಟಡಗಳು ಹಾಗೂ ಸ್ಟ್ರಕ್ಚರ್‌ಗಳ ಮೇಲೆ ಹತ್ತಿ ನಿಂತಿದ್ದನ್ನು ಯಶ್ ಗಮನಿಸಿದರು. ಇದು ಅಪಾಯಕಾರಿ ಎಂಬುದನ್ನು ಅರಿತ ಅವರು, "ದಯವಿಟ್ಟು ಕೆಳಗೆ ಇಳಿಯಿರಿ" ಎಂದು ಮನವಿ ಮಾಡಿದರು. "ಎಲ್ಲರೂ ಕ್ಷೇಮವಾಗಿದ್ದೀರಾ? ಎಲ್ಲರೂ ಸುರಕ್ಷಿತವಾಗಿದ್ದೀರಾ?" ಎಂದು ಅಭಿಮಾನಿಗಳಲ್ಲಿ ಖಚಿತಪಡಿಸಿಕೊಂಡ ನಂತರವೇ ಅವರು ಕಾರ್ಯಕ್ರಮವನ್ನ ಮುಂದುವರಿಸಿದರು.
ಅಭಿಮಾನಿಗಳೇ ನನ್ನ ಶಕ್ತಿ ಎಂದು ಪದೇ ಪದೇ ಹೇಳುವ ಯಶ್, ಕೇವಲ ಸಿನಿಮಾ ಪ್ರಚಾರಕ್ಕೆ ಸೀಮಿತವಾಗದೆ ನೆರೆದಿದ್ದ ಜನರ ಸುರಕ್ಷತೆಗೆ ಮೊದಲ ಆದ್ಯತೆ ನೀಡಿದ ಅವರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಟಾಕ್ಸಿಕ್ ಸಿನಿಮಾ: ಆಗಸ್ಟ್ 26ರಂದು ವಿಶ್ವಾದ್ಯಂತ ಅದ್ದೂರಿ ಬಿಡುಗಡೆ
ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರವು ಇನ್ನೇನು ಕೆಲವೇ ದಿನಗಳಲ್ಲಿ (ಆಗಸ್ಟ್ 26, 2026) ಪ್ರೇಕ್ಷಕರ ಮುಂದೆ ಬರಲಿದೆ. ಈ ಚಿತ್ರವು ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಶ್ವಾದ್ಯಂತ ತೆರೆಕಾಣಲಿದೆ. ಚಿತ್ರದಲ್ಲಿ ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ಕನ್ನಡದ ರುಕ್ಮಿಣಿ ವಸಂತ್ ಅವರಂತಹ ಬೃಹತ್ ತಾರಾಗಣವಿದೆ.
ಸೆನ್ಸಾರ್ ಮಂಡಳಿಯು (CBFC) ಈ ಚಿತ್ರಕ್ಕೆ 'ಎ'ಪ್ರಮಾಣಪತ್ರ ನೀಡಿದ್ದು, ಚಿತ್ರವು 3 ಗಂಟೆ 12 ನಿಮಿಷಗಳ ಸುದೀರ್ಘ ರನ್‌ಟೈಮ್ ಹೊಂದಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಈ ಬೃಹತ್ ಬಜೆಟ್ ಚಿತ್ರವನ್ನು ನಿರ್ಮಿಸಿವೆ. ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಲು ರಾಕಿಭಾಯ್ ಸಜ್ಜಾಗಿದ್ದಾರೆ.


Click it and Unblock the Notifications
