Wrestlers protest: ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್ ಭೂಷಣ್ ವಿರುದ್ಧ ಎಫ್‌ಐಆರ್ ದಾಖಲಿಸುತ್ತೇವೆ- ದೆಹಲಿ ಪೊಲೀಸರು
ನವದೆಹಲಿ, ಏಪ್ರಿಲ್. 28: ದೇಶದ ಅಗ್ರ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಕುಸ್ತಿ ಒಕ್ಕೂಟದ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸುವುದಾಗಿ ದೆಹಲಿ ಪೊಲೀಸರು ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಮಾಡಿರುವ ಉನ್ನತ ಮಹಿಳಾ ಕುಸ್ತಿಪಟುಗಳು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದ್ದಂತೆ ದೆಹಲಿ ಪೊಲೀಸರು ಎಫ್‌ಐಆರ್ ಕುರಿತು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಏಪ್ರಿಲ್ 26 ರಂದು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವ ಮೊದಲು ಆರೋಪಗಳ ಬಗ್ಗೆ ಪ್ರಾಥಮಿಕ ತನಿಖೆಯ ಅಗತ್ಯವಿದೆ ಎಂದು ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು.

ಹಲವಾರು ಮಹಿಳಾ ಆಟಗಾರ್ತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಸಂಜೆಯೊಳಗೆ ಎಫ್‌ಐಆರ್ ದಾಖಲಿಸಲಾಗುವುದು ಎಂದು ಸಾಲಿಸಿಟರ್ ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರ ಪೀಠವು ಕುಸ್ತಿ ಒಕ್ಕೂಟದ ಮುಖ್ಯಸ್ಥರ ವಿರುದ್ಧ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸುವಂತೆ ಕೋರಿ ದೇಶದ ಅಗ್ರ ಕುಸ್ತಿಪಟುಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿದೆ.
ಏಪ್ರಿಲ್ 23 ರಂದು, ಒಲಿಂಪಿಕ್ ಕಂಚಿನ ಪದಕ ವಿಜೇತರಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಮತ್ತು ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ವಿನೇಶ್ ಫೋಗಟ್ ಸೇರಿದಂತೆ ಹಲವಾರು ಕ್ರೀಡಾಪಟುಗಳು ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿಯ ಜಂತರ್ ಮಂತರ್‌ನಲ್ಲಿ ತಮ್ಮ ಧರಣಿ ಪ್ರತಿಭಟನೆಯನ್ನು ಪುನರಾರಂಭಿಸಿದ್ದಾರೆ. ಅಪ್ರಾಪ್ತ ವಯಸ್ಕರು ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳು ಏಪ್ರಿಲ್ 21 ರಂದು ದೆಹಲಿಯಲ್ಲಿ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಾರೆ.

ಕಳೆದ ನಾಲ್ಕು ತಿಂಗಳಲ್ಲಿ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಎರಡನೇ ಬಾರಿಗೆ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಕುಸ್ತಿಪಟುಗಳು ಈ ಮೊದಲು ಜನವರಿಯಲ್ಲಿ ಬೀದಿಗಿಳಿದಿದು ಪ್ರತಿಭಟನೆ ಆರಂಬಿಸಿದ್ದರು. ಆದರೆ ಸರ್ಕಾರವು ಉತ್ತರ ಪ್ರದೇಶದ ಕೈಸರ್‌ಗಂಜ್‌ನ ಭಾರತೀಯ ಜನತಾ ಪಕ್ಷದ ಸಂಸದರೂ ಆಗಿರುವ ಸಿಂಗ್ ಅವರನ್ನು ಕೆಲವು ವಾರಗಳ ಕಾಲ ಒಕ್ಕೂಟದಿಂದ ದೂರವಿಡುವಂತೆ ಮತ್ತು ಆರೋಪಗಳನ್ನು ಪರಿಶೀಲಿಸಲು ಮೇಲ್ವಿಚಾರಣಾ ಸಮಿತಿಯನ್ನು ರಚಿಸಿದ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿತ್ತು.
ಆದರೆ, ಯಾವುದೇ ಭರವಸೆಯನ್ನು ಈಡೇರಿಸಲಾಗಿಲ್ಲ ಎಂದು ಕುಸ್ತಿಪಟುಗಳು ಏಪ್ರಿಲ್‌ನಲ್ಲಿ ಮತ್ತೆ ದೆಹಲಿಯ ಜಂತರ್ ಮಂತರ್‌ನಲ್ಲಿ ಕುಳಿತು ಬ್ರಿಜ್ ಭೂಷಣ್‌ಗೆ ಶಿಕ್ಷೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಇತ್ತ, ಆರೋಪಿ, ಕೈಸರ್‌ಗಂಜ್ ಸಂಸದ ಬ್ರಿಜ್ ಭೂಷಣ್ ಸಿಂಗ್ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.
ಇನ್ನು, ಬ್ರಿಜ್ ಭೂಷಣ್ ವಿರುದ್ಧದ ಈ ಹೋರಾಟದಲ್ಲಿ ಸರ್ಕಾರ ಮತ್ತು ಕುಸ್ತಿಪಟುಗಳು ಮಾತ್ರವಲ್ಲದೆ ಅಥ್ಲೀಟ್ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿಟಿ ಉಷಾ ಅವರು ಗುರುವಾರ ಪ್ರತಿಭಟನಾಕಾರ ಮೇಲೆ ಕಿಡಿಕಾರಿದ್ದಾರೆ. ಕುಸ್ತಿಪಟುಗಳು ಬೀದಿಗಿಳಿಯುವ ಮೊದಲು ಸ್ವಲ್ಪ ಶಿಸ್ತು ತೋರಿಸಬೇಕಿತ್ತು ಎಂದು ಹೇಳಿ ಭಾರಿ ಟೀಕೆಗೆ ಗುರಿಯಾಗಿದ್ದಾರೆ.












Click it and Unblock the Notifications