ಅಯ್ಯಯ್ಯೋ..! ಮನೆಯಲ್ಲೇ ಸಾಕಿದ ಮೊಲ ಕಚ್ಚಿ ಮಹಿಳೆ ಸಾವು
ಇತ್ತೀಚಿಗೆ ತಾವು ಪ್ರೀತಿಯಿಂದ ಸಾಕಿದ ಪ್ರಾಣಿಗಳಿಂದಲೇ ಜನರು ಅಪಾಯಕ್ಕೆ ಸಿಲುಕುವ ಪ್ರಕರಣಗಳು ಹೆಚ್ಚಾಗುತ್ತಿದೆ. ಉದಾಹರಣೆಗೆ ಸಾಕಿದ ನಾಯಿ ಕಚ್ಚಿ ಸಾವು, ಮನೆಯಲ್ಲೇ ಮುದ್ದಿನಿಂದ ಸಾಕಿದ ಬೆಕ್ಕು ಕಡಿದು ಚಿಕಿತ್ಸೆ ಫಲಕಾರಿಯಾಗದೇ ಸಾವು, ಸಾಕು ಪ್ರಾಣಿಯಿಂದಲೇ ಮಾಲೀಕನ ಮೇಲೆ ದಾಳಿ ಹೀಗೆ ಈ ರೀತಿಯ ಅನೇಕ ಪ್ರಕರಣಗಳನ್ನು ನೀವು ನೋಡಿರಬಹುದು, ಕೇಳಿರಬಹುದು. ಆದರೆ ನೀವು ಊಹಿಸದ ಘಟನೆಯೊಂದು ಬೆಳಕಿಗೆ ಬಂದಿದೆ.
ಸಾಕಿದ ನಾಯಿ, ಬೆಕ್ಕು ಕಚ್ಚಿ ಸತ್ತಿರುವ ಪ್ರಕರಣಗಳನ್ನು ನೀವು ಈ ಹಿಂದೆಯೇ ಓದಿರಬಹುದು. ಆದರೆ ಮನೆಯಲ್ಲೇ ಮುದ್ದಿನಿಂದ ಸಾಕಿ ಮೊಲದಿಂದ ಮಹಿಳೆ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಕೇರಳದ ಅಲಪ್ಪುಳದ ತಕಾಝೀಯಲ್ಲಿ ನಡೆದಿದೆ. ಮನೆಯಲ್ಲೇ ಸಾಕಿದ ಮೊಲ ಕಚ್ಚಿ ಮಹಿಳೆ ಜೀವವನ್ನೇ ಕಳೆದುಕೊಂಡಿದ್ದಾರೆ. ತಕಾಝೀಯ ಶಾಂತಮ್ಮ(63) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ಶಾಂತಮ್ಮ ಎನ್ನುವವರಿಗೆ ಅಕ್ಟೋಬರ್ 21ರಂದು ಆಟವಾಡಿಸುವಾಗ ಮನೆಯಲ್ಲೇ ಸಾಕಿದ್ದ ಮೊಲ ಕಚ್ಚಿತ್ತು. ಮೊದಲು ಬೇಡ ಅನಿಸಿದರು ಕೊನೆಗೆ ಮುಂಜಾಗೃತ ಕ್ರಮವಾಗಿ ಅಲಪ್ಪುಳ ವೈದ್ಯಕೀಯ ಕಾಲೇಜು ಆಸ್ಪತ್ರೆಯ ರೇಬಿಸ್ ಲಸಿಕೆ ಹಾಕಿಸಿಕೊಳ್ಳುತ್ತಿದ್ದರು. ಈ ಹಿಂದೆ ಎರಡು ಡೋಸ್‌ಗಳನ್ನು ಪಡೆದಿದ್ದ ಶಾಂತಮ್ಮ ಮೂರನೇ ಡೋಸ್ ಹಾಕಿದ ನಂತರ ಏಕಾಏಕಿ ಕುಸಿದು ಬಿದ್ದಿದ್ದಾರೆ.
ತೀವ್ರ ನಿತ್ರಾಣಗೊಂಡ ಶಾಂತಮ್ಮನನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾದೇ ಶಾಂತಮ್ಮ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ತನಿಖೆ ನಡೆಸುತ್ತಿದ್ದಾರೆ. ಶಾಂತಮ್ಮ ಸಾವಿಗೆ ಮೊಲ ಕಚ್ಚಿದ ಪರಿಣಾಮವೇ ಅಥವಾ ಡೋಸ್ ಪರಿಣಾಮವೇ ಎನ್ನುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬರಬೇಕಿದೆ.
ಶಿವಮೊಗ್ಗ: ಸಾಕು ಬೆಕ್ಕು ಕಚ್ಚಿ ಮಹಿಳೆ ಸಾವು
ಸಾಕು ಬೆಕ್ಕು ಕಚ್ಚಿ ಮಹಿಳೆ ಸಾವನ್ನಪ್ಪಿದ ಘಟನೆ ಕಳೆದ ಮೂರು ತಿಂಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟದಲ್ಲಿ ನಡೆದಿತ್ತು. ಗಂಗೀಬಾಯಿ (50) ಮನೆಯ ಸಾಕು ಬೆಕ್ಕು ಕಚ್ಚಿ ಸಾವನ್ನಪ್ಪಿದ ಮಹಿಳೆ ಎಂದು ಗುರುತಿಸಲಾಗಿದೆ. ತರಲಘಟ್ಟದ ಗಂಗೀಬಾಯಿ ಎನ್ನುವವರಿಗೆ ಎರಡು ತಿಂಗಳ ಹಿಂದೆ ಮನೆಯಲ್ಲೇ ಮುದ್ದಾಗಿ ಸಾಕಿದ್ದ ಬೆಕ್ಕು ಕಚ್ಚಿತ್ತು.
ಬೆಕ್ಕು ಕಚ್ಚಿದ ಪರಿಣಾಮ ಗಂಗೀಬಾಯಿ ರೇಬಿಸ್ ಕಾಯಿಲೆಗೆ ತುತ್ತಾಗಿದ್ದರು. ಬೆಕ್ಕು ಕಚ್ಚಿದ ಬಳಿಕ ಮಹಿಳೆ ಐದು ಇಂಜೆಕ್ಷನ್ ತೆಗೆದುಕೊಳ್ಳಬೇಕಿತ್ತು. ಆದರೆ ಒಂದು ಇಂಜೆಕ್ಷನ್ ಪಡೆದು ಆರೋಗ್ಯವಾಗಿದ್ದೇನೆ ಎಂದುಕೊಂಡ ಗಂಗೀಬಾಯಿ ಉಳಿದ ನಾಲ್ಕು ಇಂಜೆಕ್ಷನ್ ತೆಗೆದುಕೊಳ್ಳದೇ ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗಿದೆ.
ಮೊದಲ ಇಂಜೆಕ್ಷನ್ ಪಡೆದ ಬಳಿಕ ಗಂಗೀಬಾಯಿ ಆರೋಗ್ಯ ಚೇತರಿಸಿಕೊಂಡಿದ್ದು, ಹುಷಾರಾದ ಬಳಿಕ ಗದ್ದೆಗೆ ನಾಟಿ ಮಾಡಲು ಹೋಗಿದ್ದಾರೆ. ನೀರು ಹಾಗೂ ಕೆಸರಿಗೆ ಇಳಿದ ಕಾರಣ ಬೆಕ್ಕು ಕಚ್ಚಿದ ಗಾಯ ಇನ್ನಷ್ಟು ಉಲ್ಬಣಗೊಂಡಿದೆ. ಜೊತೆಗೆ ರೇಬಿಸ್ ಕಾಯಿಲೆಯ ಲಕ್ಷಣಗಳು ಕೂಡ ಹೆಚ್ಚಾಗಿದ್ದು, ತೀವ್ರ ಅನಾರೋಗ್ಯ ಕಾಡಿ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications