ಖಾಸಗಿ ಶಾಲೆ ಮಾಲೀಕರಿಗೆ ಪಾರ್ಸೆಲ್ ನಲ್ಲಿ ಗಿಫ್ಟ್ ಬಂದಿದ್ದು ಬಾಂಬ್
ರಾಜ್ ಕೋಟ್ (ಗುಜರಾತ್), ಅಕ್ಟೋಬರ್ 17: ಖಾಸಗಿ ಶಾಲೆಯ ಮಾಲೀಕರೊಬ್ಬರಿಗೆ ಬುಧವಾರ 'ಪಾರ್ಸೆಲ್ ಬಾಂಬ್' ಗಿಫ್ಟ್ ಬಾಕ್ಸ್ ನಲ್ಲಿ ಬಂದಿದೆ. ಅದನ್ನು ನಾಶಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದೀಗ ಆ ಪಾರ್ಸೆಲ್ ಕಳುಹಿಸಿದ ಅಪರಿಚಿತರ ಪತ್ತೆ ಕಾರ್ಯಕ್ಕೆ ತನಿಖೆ ಶುರುವಾಗಿದೆ.
ಜಿಲೆಟಿನ್ ಕಡ್ಡಿಗಳಿಂದ ಬಾಂಬ್ ಮಾಡಲಾಗಿದೆ. ಇದರ ಜತೆಗೆ ಡಿಟೊನೇಟರ್ ಸ್ವಿಚ್ ಇದ್ದು, ಅದನ್ನು ಗಿಫ್ಟ್ ಬಾಕ್ಸ್ ನಲ್ಲಿ ಇರಿಸಿದ್ದರು. ರಾಜ್ ಕೋಟ್ ನಿಂದ ಮುನ್ನೂರಾ ಇಪ್ಪತ್ತು ಕಿ.ಮೀ. ದೂರದಲ್ಲಿ ಶ್ರೀಕೃಷ್ಣ ಶಾಲೆ ನಡೆಸುವ ವಿಠ್ಠಲ್ ದೊಬಾರಿಯಾ ಹೆಸರಿಗೆ ಪಾರ್ಸೆಲ್ ಕೊರಿಯರ್ ನಲ್ಲಿ ಬಂದಿದೆ. ಬಾಕ್ಸ್ ನಲ್ಲಿರುವ ವಸ್ತುವಿನ ಬಗ್ಗೆ ಅನುಮಾನಗೊಂಡ ಅವರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಗಿಫ್ಟ್ ನೀಡಿದವನು ಕೊರಿಯರ್ ಬಾಯ್ ಅಲ್ಲ ಎಂಬ ಸಂದೇಹ ಇದೆ. ಏಕೆಂದರೆ ಕೊರಿಯರ್ ಕೊಡಬೇಕಾದರೆ ಅನುಸರಿಸಬೇಕಾದ ಯಾವ ನಿಯಮವನ್ನೂ ಪಾಲಿಸಿಲ್ಲ. ಆ ಗಿಫ್ಟ್ ಕಳಿಸಿದವರ ಹೆಸರು ಅದೇ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಯದಾಗಿದ್ದು, ಓದುವ ವೇಳೆ ನೀಡಿದ ಬೆಂಬಲಕ್ಕೆ ಧನ್ಯವಾದ ತಿಳಿಸಿ, ದೊಬಾರಿಯಾ ಹೆಸರಿಗೆ ಕಳುಹಿಸಿರುವುದಾಗಿದೆ.

ಪಾರ್ಸೆಲ್ ಕಳಿಸಿದ ವ್ಯಕ್ತಿ ಅಕ್ಟೋಬರ್ ಹದಿನಾಲ್ಕರಂದು ಬಾಕ್ಸ್ ತೆರೆಯುವಂತೆ ಮನವಿ ಮಾಡಿದ್ದಾನೆ. ಆದರೆ ದೊಬಾರಿಯಾ ಅದನ್ನು ಅದಾದ ಎರಡು ದಿನಕ್ಕೆ ತೆರೆದಿದ್ದಾರೆ. ಅದನ್ನು ಕಂಡು ಅನುಮಾನದಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಂಬ್ ಮಾಡಲು ಬಳಸಿರುವ ವಸ್ತುಗಳು ಸಾಮಾನ್ಯವಾಗಿ ಸುರಂಗವನ್ನು ಸ್ಫೋಟಿಸಲು ಬಳಸುವಂಥದ್ದು ಎಂದು ಪೊಲೀಸರು ಹೇಳಿದ್ದಾರೆ.
ಅದೃಷ್ಟ ಏನೆಂದರೆ, ಬಾಂಬ್ ಸ್ಫೋಟವಾಗಿಲ್ಲ. ಅದನ್ನು ಕಳುಹಿಸಿದ ವ್ಯಕ್ತಿ ಅನನುಭವಿ ಎಂಬುದು ಗೊತ್ತಾಗುತ್ತದೆ. ಆದರೆ ಆತನಿಗೆ ದೊಬಾರಿಯಾ ಗುರಿಯಾಗಿದ್ದರು. ಈ ಕೃತ್ಯದ ಹಿಂದೆ ಯಾರ ಕೈ ಇರಬಹುದು ಎಂಬ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿಲ್ಲ. ಆದರೆ ಆರೋಪಿಗಳ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ.












Click it and Unblock the Notifications