HMPV: ಕೋವಿಡ್-19 ರೀತಿ ಈ ವೈರಸ್ ಅಪಾಯಕಾರಿಯೇ? ವೈದ್ಯರು ಹೇಳಿದ್ದೇನು
ಚೀನಾದಲ್ಲಿ ಕಾಣಿಸಿಕೊಂಡಿರುವ ವೈರಸ್ ಇದೀಗ ಬೇರೆ ರಾಷ್ಟ್ರಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಪ್ರಕರಣ ಇದೀಗ ಭಾರತದಲ್ಲೂ ಕಾಣಿಸಿಕೊಂಡಿದ್ದು ಒಂದಷ್ಟು ಆತಂಕ ಮೂಡಿಸಿದೆ. ಇದನ್ನು ಕೋವಿಡಡ್-19 ಸಾಂಕ್ರಾಮಿಕ ಪರಿಸ್ಥಿತಿಗೆ ಕೂಡ ಹೋಲಿಕೆ ಮಾಡಲಾಗುತ್ತಿದೆ.
ಸೋಮವಾರ ಬೆಂಗಳೂರಿನಲ್ಲಿ ಎರಡು ಎಚ್‌ಎಂಪಿವಿ ಪ್ರಕರಣಗಳು ಪತ್ತೆಯಾಗಿದ್ದರೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಭಾರತದಲ್ಲೂ ವೈರಸ್ ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಕೋವಿಡ್ -19 ಕೊಟ್ಟಿರುವ ಹೊಡೆತದಿಂದ ಇನ್ನೂ ಸುಧಾರಿಸಿಕೊಳ್ಳದ ಜನತೆ ಸಹಜವಾಗಿಯೇ ಭಯಗೊಂಡಿದ್ದಾರೆ.

ನಿಜಕ್ಕೂ ಎಚ್‌ಎಂಪಿವಿ ಆತಂಕಕಾರಿಯಾ?
ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಕೋವಿಡ್-19 ರೀತಿಯ ರೋಗಲಕ್ಷಣಗಳನ್ನು ಹೊಂದಿದ್ದರೂ ಇದು ಹೊಸ ವೈರಸ್ ಏನೂ ಅಲ್ಲ. ಈ ವೈರಸ್ ಜ್ವರ, ಕೆಮ್ಮು, ನೆಗಡಿ, ಗಂಟಲು ನೋವು ಮತ್ತು ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತದೆ. ದೇಹದಲ್ಲಿ ಇಮ್ಯುನಿಟಿ ಕಡಿಮೆ ಇರುವವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
ಎಚ್ಮತ್ತು ಕೊರೊನಾ ಬೇರೆ ಬೇರೆ ವೈರಲ್ ಕುಟುಂಬಗಳಿಂದ ಬಂದಿದ್ದರೂ, ಹಲವು ಹೋಲಿಕೆಗಳನ್ನು ಹೊಂದಿವೆ. ಎರಡೂ ವೈರಸ್ ಉಸಿರಾಟದ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತವೆ. ಎರಡೂ ರೋಗಗಳಿಗೆ ಇರುವ ಪ್ರಮುಖ ವ್ಯತ್ಯಾಸವೆಂದರೆ ಕೋವಿಡ್‌ಗೆ ಲಸಿಕೆ ಕಂಡುಹಿಡಿಯಲಾಗಿದೆ. ಆದರೆ ಎಚ್‌ಎಂಪಿವಿಗೆ ಇನ್ನೂ ನಿರ್ಧಿಷ್ಟ ಲಸಿಕೆ ಮತ್ತು ಚಿಕಿತ್ಸೆ ಲಭ್ಯವಿಲ್ಲ.
ಎಚ್‌ಎಂಪಿವಿ ಕೋವಿಡ್ ರೀತಿಯ ರೋಗ ಲಕ್ಷಣಗಳನ್ನು ಹೊಂದಿದ್ದರೂ ಅದು ಸಾಂಕ್ರಾಮಿಕವಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಅಹಮದಾಬಾದ್‌ನ ಶಾಲ್ಬಿ ಆಸ್ಪತ್ರೆಯ ಕನ್ಸಲ್ಟೆಂಟ್ ಕ್ರಿಟಿಕಲ್ ಕೇರ್ ಡಾ ಮಿನೇಶ್ ಮೆಹ್ತಾ ಎಚ್‌ಎಂಪಿವಿ ಬಗ್ಗೆ ಮಾಹಿತಿ ನೀಡಿದ್ದು, ಇದು ಹೊಸ ವೈರಸ್ ಅಲ್ಲ, 2001ರಲ್ಲೇ ಇದು ಪತ್ತೆಯಾಗಿತ್ತು, ಅಂದಿನಿಂದ ಇದು ಎಲ್ಲೆಡೆ ಹರಡುತ್ತಿದೆ ಎಂದು ಹೇಳಿದ್ದಾರೆ.
ಕೋವಿಡ್ ಎಚ್‌ಎಂಪಿವಿಗಿಂತ ಬೇರೆ ರೀತಿಯಲ್ಲಿ ಹರಡುವ ಲಕ್ಷಣವನ್ನು ಹೊಂದಿದೆ. ಎಚ್‌ಎಂಪಿವಿ ಸೋಂಕಿತ ಜನರ ಜೊತೆ ನಿಕಟ ಸಂಪರ್ಕದ ಮೂಲಕ ಹರಡುತ್ತದೆ. ಇದು ಕೋವಿಡ್ ರೀತಿ ವೇಗವಾಗಿ ಹರಡುವುದಿಲ್ಲ ಎಂದು ಹೇಳಿದ್ದಾರೆ.
ದುರ್ಬಲ ವ್ಯಕ್ತಿಗಳಲ್ಲಿ ಎಚ್‌ಎಂಪಿವಿ ಶ್ವಾಸಕೋಶದ ಸೋಂಕು ಉಂಟುಮಾಡಬಹುದು. ಆದರೆ ಕೋವಿಡ್-19 ರೀತಿ ಹೆಚ್ಚಿನ ಸಾವಿನ ಪ್ರಮಾಣ ಹೊಂದಿಲ್ಲ. ಹೆಚ್ಚಿನ ಎಚ್‌ಎಂಪಿವಿ ಸೋಂಕುಗಳು ಸೌಮ್ಯವಾಗಿರುತ್ತವೆ. ಯಾವುದೇ ಒತ್ತಡವಿಲ್ಲದೆ ಕಾಯಿಲೆಗೆ ಚಿಕಿತ್ಸೆ ನೀಡಬಹುದು ಎಂದಿದ್ದಾರೆ.
ಬೆಂಗಳೂರಿನ ಆಸ್ಟರ್ ವೈಟ್‌ಫೀಲ್ಡ್ ಆಸ್ಪತ್ರೆಯ ಇಂಟರ್ವೆನ್ಷನಲ್ ಪಲ್ಮನಾಲಜಿ ಮತ್ತು ಶ್ವಾಸಕೋಶದ ಕಸಿ ವಿಭಾಗದ ಮುಖ್ಯಸ್ಥ ಡಾ.ಶ್ರೀವತ್ಸ ಲೋಕೇಶ್ವರನ್ ಕೂಡ ಈ ವೈರಸ್ ಹಲವು ವರ್ಷಗಳಿಂದ ಅಸ್ತಿತ್ವದಲ್ಲಿದ್ದು, ಐದು ವರ್ಷದೊಳಗಿನ ಮಕ್ಕಳು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಮೇಲೆ ಮಾತ್ರ ಪರಿಣಾಮ ಉಂಟುಮಾಡುತ್ತದೆ ಎಂದು ಹೇಳಿದ್ದಾರೆ.
ಎಚ್‌ಎಂಪಿವಿ ವೈರಸ್ ಹರಡುವಿಕೆ, ಸಂತಾನೋತ್ಪತ್ತಿ ಸಾಮರ್ಥ್ಯದ ಬಗ್ಗೆ ಅಷ್ಟು ಮಾಹಿತಿ ಇಲ್ಲ. ಸಂಭಾವ್ಯ ಹರಡುವಿಕೆಯನ್ನು ತಪ್ಪಿಸಲು ಮುನ್ನೆಚ್ಚರಿಕೆ ವಹಿಸುವುದು ಉತ್ತಮವಾಗಿರುತ್ತದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ (ಎನ್‌ಸಿಡಿಸಿ) ನಿರ್ದೇಶಕ ಡಾ ಅತುಲ್ ಗೋಯಲ್, ಎಚ್‌ಎಂಪಿವಿ ಸಾಮಾನ್ಯ ಶೀತದ ವೈರಸ್‌ಗಳನ್ನು ಹೋಲುತ್ತದೆಯಾದರೂ, ಆತಂಕ ಪಡುವಂತಹ ಪರಿಸ್ಥಿತಿ ಇಲ್ಲ ಎಂದು ಹೇಳಿದ್ದಾರೆ.
ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮಾಡುವುದರಿಂದ ಎಚ್ಚರಿಕೆ ವಹಿಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.












Click it and Unblock the Notifications