ಏನಿದು ತ್ರಿವಳಿ ತಲಾಖ್? ಏಕೆ ಇದರ ಬಗ್ಗೆ ಚರ್ಚೆ?
ಬೆಂಗಳೂರು, ಆಗಸ್ಟ್ 22: ವಿವಾದಿತ ತ್ರಿವಳಿ ತಲಾಖ್‌ಗೆ ಸಂಬಂಧಿಸಿದಂತೆ ಬಹು ನಿರೀಕ್ಷಿತ ತೀರ್ಪನ್ನು ಸುಪ್ರೀಂ ಕೋರ್ಟಿನ ಐವರು ಸದಸ್ಯರ ನ್ಯಾಯಪೀಠ ಮಂಗಳವಾರ(ಆಗಸ್ಟ್ 22)ದಂದು ನೀಡಲಿದೆ. ಈ ನಡುವೆ ಇದರ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇದೆ. ಏನಿದು ತ್ರಿವಳಿ ತಲಾಖ್? ಯಾಕೆ ಇಷ್ಟು ಚರ್ಚೆ?
ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೆಹರ್ ನೇತೃತ್ವದ ಐದು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ನ್ಯಾಯಪೀಠ 6 ದಿನಗಳ ಕಾಲ ವಿಚಾರಣೆ ನಡೆಸಿ ಮೇ 18ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಈಗ ಆಗಸ್ಟ್ 22ರಂದು ಈ ಬಗ್ಗೆ ಅಂತಿಮ ತೀರ್ಪು ಹೊರ ಬರಲಿದೆ.
ಉತ್ತರಾಖಂಡ್ ನಿವಾಸಿ ಷಯಾರ ಬಾನು ಅವರು ಹಾಕಿರುವ ಅರ್ಜಿ ಸೇರಿದಂತೆ ಒಟ್ಟು 6 ಅರ್ಜಿಗಳ ವಿಚಾರಣೆ ಬಳಿಕ ತೀರ್ಪು ಹೊರ ಬರುತ್ತಿದೆ. ಮುಸ್ಲಿಂ ಸಮುದಾಯದ ವ್ಯಕ್ತಿ ಕೇವಲ ಮೂರು ಬಾರಿ ತಲಾಖ್ ಎಂದು ಹೇಳಿ ಹೆಂಡ್ತಿಗೆ ವಿಚ್ಛೇದನ ನೀಡುವುದು ಕಾನೂನು ಬಾಹಿರ ಹಾಗೂ ಅಸಂವಿಧಾನಿಕವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ತ್ರಿವಳಿ ತಲಾಕ್ ಎಂಬುದು ಮಹಿಳೆಯರ ಹಕ್ಕನ್ನು ಅವರಿಗೆ ಹಿಂದಿರುಗಿಸುವ ವಿಚಾರ. ಆದ್ದರಿಂದ ಈ ವಿಚಾರಣೆಗೆ ಒಬ್ಬ ಮಹಿಳಾ ಜಡ್ಜ್ ಕೂಡ ಇದ್ದರೆ ಚೆನ್ನಾಗಿತ್ತು ಎಂಬ ಮಾತುಗಳು ಕೇಳಿ ಬಂದಿವೆ.

ತ್ರಿವಳಿ ತಲಾಖ್ : ವಿವಾಹಿತ ಮಹಿಳೆಗೆ ವಿವಾಹ ವಿಚ್ಛೇದನ ನೀಡುವ ಒಂದು ರೀತಿಯ ಪದ್ಧತಿಯಾಗಿದೆ. ಈ ಪದ್ಧತಿಯಂತೆ ವಿವಾಹಿತ ಮುಸ್ಲಿಂ ವ್ಯಕ್ತಿಯು ತನ್ನ ಪತ್ನಿಗೆ ಕಾನೂನು ಮಾನ್ಯ ವಿಚ್ಛೇದನ ನೀದಿದ್ದೇನೆ ಎಂದು ಘೋಷಿಸಬಹುದಾಗಿದೆ.
ಇದು ಮೌಖಿಕವಾಗಿರಬಹುದು ಅಥವಾ ಲಿಖಿತರೂಪದಲ್ಲಿರಬಹುದು ಅಥವಾ ಇ ಮಾಧ್ಯಮದ ಮೂಲಕ ಎಸ್ಎಂಎಸ್, ಟೆಲಿಫೋನ್ ಕಾಲ್, ಇಮೇಲ್ ಅಥವಾ ಫೇಸ್ ಬುಕ್, ವಾಟ್ಸಪ್ ಮೂಲಕ ಕೂಡಾ ತಲಾಖ್ ತಲಾಖ್ ತಲಾಖ್ ಎಂದು ಮೂರು ಬಾರಿ ಕಳಿಸಿ ವಿಚ್ಛೇದನ ನೀಡಿದ ಉದಾಹರಣೆಗಳಿವೆ.
ವಿಚ್ಛೇದನ ನೀಡುವ ವ್ಯಕ್ತಿಯು ಯಾವುದೇ ಕಾರಣ ನೀಡುವ ಅಗತ್ಯವಿಲ್ಲ. ವಿಚ್ಛೇದನ ನೀಡುವ ಸಮಯದಲ್ಲಿ ಹಾಜರಿರಬೇಕು ಎಂಬ ನಿಯಮವಿಲ್ಲ. ಇದ್ದಾತ್ ಅವಧಿಯ ನಂತರ ಪತ್ನಿಯು ಗರ್ಭಿಣಿಯಾಗಿದ್ದಾರೆ ವಿಚ್ಛೇದನದ ವಿಧಾನ ಬದಲಾಗಲಿದೆ.
ಈ ಸಂದರ್ಭದಲ್ಲಿ ದಂಪತಿಗೆ ಸಲಹಾ ಸಮಿತಿಯ ಮುಂದೆ ಹಾಜರಾಗಿ, ಮತ್ತೆ ಒಂದಾಗುವ ಅವಕಾಶವಿರುತ್ತದೆ. ಆದರೆ, ಒಂದೇ ಬಾರಿ ಮೂರು ತಲಾಖ್ ಹೇಳುವ ಪ್ರಕ್ರಿಯೆ ಇನ್ನೂ ಜಾರಿಯಲ್ಲಿದೆ. ಇದಕ್ಕೆ ಯಾವುದೇ ನಿರ್ಬಂಧ ಹೇರಲಾಗಿಲ್ಲ.












Click it and Unblock the Notifications