Delhi Election 2025 Exit Poll: ದೆಹಲಿ ಎಕ್ಸಿಟ್ ಫೋಲ್ ಫಲಿತಾಂಶ, ಮತ್ತೆ ಎಎಪಿಗೆ ಅಧಿಕಾರ
ನವದೆಹಲಿ, ಫೆಬ್ರವರಿ 05: ಬಹುನಿರೀಕ್ಷೆಯ ದೆಹಲಿಯ ವಿಧಾನಸಭಾ ಚುನಾವಣೆ ಮತದಾನ ಅಂತ್ಯಗೊಂಡಿದ್ದು, ಇಂದು ಒಂದೇ ಹಂತದಲ್ಲಿ ಮತದಾನ ನಡೆದಿದೆ. ಚುನಾವಣಾ ಫಲಿತಾಂಶ ಫೆಬ್ರವರಿ 8ರಂದು ಪ್ರಕಟವಾಗಲಿದೆ. ಈ ನಡುವೆ ದೆಹಲಿ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶ (Exit Poll 2025) ಪ್ರಕಟಗೊಂಡಿದ್ದು, ವೀಪ್ರೆಸೈಡ್ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಪ್ರಕಾರ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತೆ ದೆಹಲಿಯ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಅಂದಾಜಿಸಲಾಗಿದೆ.
ವೀಪ್ರೆಸೈಡ್ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಪರವಾಗಿ ಅಧಿಕ ಸಂಖ್ಯೆ ಪ್ರಕಟವಾಗಿದೆ. ಈ ಬಾರಿ ಅರವಿಂದ್ ಕೇಜ್ರಿವಾಲ್ ಅವರ ಎಎಪಿ ಪಕ್ಷಕ್ಕೆ 46 ರಿಂದ 52 ಸ್ಥಾನಗಳು ಸಿಗಲಿದ್ದು, ಬಿಜೆಪಿ 18 ರಿಂದ 25 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಹಾಗೂ ಕಾಂಗ್ರೆಸ್ ಕೂಡ 1 ಸ್ಥಾನವನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ.

ದೆಹಲಿ ವಿಧಾನಸಭೆ ಚುನಾವಣೆ 2025ರ ಅಖಾಡದಲ್ಲಿ ಒಟ್ಟು 699 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ದೆಹಲಿ ವಿಧಾನಸಭೆ ಚುನಾವಣೆಗೆ ನಾಮಪತ್ರ ವಾಪಸ್ ಪಡೆಯಲು ಜನವರಿ 20ರ ಸೋಮವಾರ ಕೊನೆಯ ದಿನವಾಗಿತ್ತು. ಚುನಾವಣಾ ಆಯೋಗದ ಮಾಹಿತಿ ಪ್ರಕಾರ 1522 ನಾಮಪತ್ರಗಳ ಪೈಕಿ 487 ನಾಮಪತ್ರಗಳು ತಿರಸ್ಕಾರವಾಗಿವೆ.
ಈಗಾಗಲೇ 2015, 2020ರಲ್ಲಿ ಸ್ಪಷ್ಟ ಬಹುಮತ ಪಡೆದು ಗೆದ್ದಿರುವ ಆಮ್ ಆದ್ಮಿ ಪಕ್ಷ ಈ ಬಾರಿಯೂ ಗೆದ್ದು ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದ್ದು, ಆಮ್ ಆದ್ಮಿ ಪಕ್ಷದ ಈ ಉತ್ಸಾಹಕ್ಕೆ ವೀಪ್ರೆಸೈಡ್ ಚುನಾವಣೋತ್ತರ ಸಮೀಕ್ಷೆ ಮತ್ತಷ್ಟು ಪುಷ್ಠಿಕೊಟ್ಟಿದೆ.
ದೆಹಲಿಯ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿದ್ದ ಸಮಯದಲ್ಲಿ ಎಎಪಿ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲಿಗೆ ಹೋಗಿ ಬಂದಿದಿದ್ದರು ಹಾಗೂ ಇತರ ರಾಜಕೀಯ ಬೆಳವಣಿಗೆಗಳು ಈ ಬಾರಿ ಮತದಾರರ ಕಣ್ಮುಂದೆ ಇದೆ. ಹೀಗಾಗಿ ಅನುಕಂಪ ಹಾಗೂ ಜನಪ್ರಿಯತೆ ಎರಡೂ ಕೂಡ ಎಎಪಿ ಪಕ್ಷಕ್ಕೆ ಅನುಕೂಲವಾಗುವ ಸಾಧ್ಯತೆಯಿದ್ದು, ಎಎಪಿ ದೆಹಲಿಯಲ್ಲಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications