Weather Forecast: ಈ ಭಾಗಗಳಲ್ಲಿ 2 ದಿನ ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ
Weather Forecast: ಈಗಾಗಲೇ ದೇಶದ ಬಹುತೇಕ ರಾಜ್ಯಗಳಲ್ಲಿ ಮುಂಗಾರು ಮಳೆ ಆರ್ಭಟಿಸಿದೆ. ಇದೀಗ ಚಳಿಗಾಲದ ನಡುವೆಯೂ ಹಲವೆಡೆ ಮಳೆ ಮುಂದುವರೆದಿದೆ. ಹಾಗೆಯೇ ಮುಂದಿನ ಎರಡು ದಿನ ಈ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುಗ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆಯು ಡಿಸೆಂಬರ್ 27 ಮತ್ತು 28ರಂದು ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ಆಲಿಕಲ್ಲು ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಚದುರಿದ ಮಳೆಯೊಂದಿಗೆ ಹಿಮಪಾತ ಆಗುವ ಸಾಧ್ಯತೆಯಿದೆ. ಇನ್ನೂ ಈ ವಾರಂತ್ಯದವರೆಗೂ ಇಲ್ಲಿನ ಪಕ್ಕದ ರಾಜ್ಯಗಳಲ್ಲಿ ಅಲ್ಲಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.

ಮುಂದಿನ ಹಲವು ದಿನಗಳ ಕಾಲ ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಪ್ರತ್ಯೇಕ ಭಾಗಗಳಲ್ಲಿ ಚಳಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಇನ್ನು ಮುಂದಿನ ಒಂದು ವಾರ ಹಿಮಾಚಲ ಪ್ರದೇಶ ಸೇರಿದಂತೆ ಪಂಜಾಬ್, ಹರಿಯಾಣ, ಚಂಡೀಗಢ, ಅಸ್ಸಾಂ, ಮೇಘಾಲಯ, ಒಡಿಶಾ ಮತ್ತು ರಾಜಸ್ಥಾನಗಳಲ್ಲಿ ತಡರಾತ್ರಿ ಮತ್ತು ಮುಂಜಾನೆ ವೇಳೆ ದಟ್ಟವಾದ ಮಂಜು ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಮುಂದಿನ ಹಲವು ದಿನಗಳವರೆಗೆ ದಕ್ಷಿಣ ಭಾರತದ ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಕರ್ನಾಟಕದ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ. ಹಾಗೆಯೇ ವಾಯುವ್ಯ ಭಾರತದಲ್ಲಿ ಮಳೆಯ ಪ್ರಮಾಣ ತುಸು ಹೆಚ್ಚಿರಲಿದೆ ಎಂದು ಮುನ್ಸೂಚನೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಡಿಸೆಂಬರ್ 27ರ ಬೆಳಿಗ್ಗೆ ನವದೆಹಲಿಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ನೋಯ್ಡಾ ಮತ್ತು ಘಾಜಿಯಾಬಾದ್‌ನ ಕೆಲವು ಭಾಗಗಳಲ್ಲಿ ಬೆಳಗ್ಗೆ ತುಂತುರು ಮಳೆಯಾಗಿದ್ದು, ತಾಪಮಾನ ಪ್ರಮಾಣವನ್ನು ಕಡಿಮೆ ಮಾಡಿದೆ.
ಆರೆಂಜ್ ಅಲರ್ಟ್ ಘೋಷಣೆ: ಇಂದು (ಡಿಸೆಂಬರ್ 27) ಭೀಕರ ಚಳಿ ಮುಂದುವರೆಯುವ ಮುನ್ಸೂಚನೆ ಹಿನ್ನೆಲೆ ಹವಾಮಾನ ಇಲಾಖೆಯು ಹಿಮಾಚಲ ಪ್ರದೇಶಕ್ಕೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಇಲ್ಲಿನ ಕೆಲವು ಪ್ರದೇಶಗಳಲ್ಲಿ ತೀವ್ರ ಚಳಿ ಮತ್ತು ಹಿಮಪಾತವಾಗುವ ಸಾಧ್ಯತೆಯಿದೆ. ಮತ್ತೊಂದೆಡೆ ಇದೇ ವೇಳೆ ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್‌ನಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಎರಡು ದಿನ ಮಳೆ: ಡಿಸೆಂಬರ್ 27 ಮತ್ತು 28ರಂದು ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ಚಂಡಮಾರುತದ ಪರಿಣಾಮ ಈ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಹಿಮಾಚಲ ಪ್ರದೇಶದಲ್ಲಿ ತಾಪಮಾನದಲ್ಲಿ ಕುಸಿತ ಉಂಟಾಗಲಿದೆ. ಮತ್ತೆ ಡಿಸೆಂಬರ್ 28ರಂದು ಈ ಭಾಗದಲ್ಲಿ ಶೀತದ ವಾತಾವರಣ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಿದೆ.
ಉತ್ತರ ಭಾರತದ ಹವಾಮಾನ: ಈಗಾಗಲೇ ಭೀಕರ ಚಳಿಗೆ ಉತ್ತರ ಭಾರತವು ತತ್ತರಿಸಿ ಹೋಗಿದೆ. ಕಾಶ್ಮೀರ ಕಣಿವೆಯಲ್ಲಿ ತಾಪಮಾನದಲ್ಲಿ ಕುಸಿತ ಹಿನ್ನೆಲೆ ದಾಲ್ ಸರೋವರದಂತಹ ಜಲಮೂಲಗಳು ಹೆಪ್ಪುಗಟ್ಟುತ್ತಿವೆ.
ಹಿಮಾಚಲ ಪ್ರದೇಶದಲ್ಲಿ ಡಿಸೆಂಬರ್ 27ರಿಂದ ಹೆಚ್ಚಿನ ಹಿಮಪಾತಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ. ಶಿಮ್ಲಾದಲ್ಲಿ ಹಿಮಪಾತದೊಂದಿಗೆ 14.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಆದರೆ ಕುಫ್ರಿಯಲ್ಲಿ 9.8 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ರಾಜಸ್ಥಾನದಲ್ಲಿ ದಟ್ಟ ಮಂಜು ಮತ್ತು ಮಳೆ: ರಾಜಸ್ಥಾನದಲ್ಲಿ ದಟ್ಟ ಮಂಜಿನ ನಡುವೆ ಸಾಧಾರಣ ಮಳೆ ಮುಂದುವರೆದಿದೆ. ಅಲ್ಲದೆ, ಜೈಪುರ್, ಅಜ್ಮೀರ್ ಮತ್ತು ಉದಯಪುರದಂತಹ ನಗರಗಳಲ್ಲಿ ಲಘುವಾಗಿ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪಂಜಾಬ್ ಮತ್ತು ಹರಿಯಾಣದಲ್ಲಿ ಶೀತಗಾಳಿ: ಪಂಜಾಬ್ ಮತ್ತು ಹರಿಯಾಣದಲ್ಲಿ ಕೊರೆಯುವ ಚಳಿಯ ವಾತಾವರಣ ನಿರ್ಮಾಣವಾಗಿದೆ. ಚಂಡೀಗಢದಲ್ಲಿ ಗುರುವಾರ ಕನಿಷ್ಠ ತಾಪಮಾನ 7.3 ಡಿಗ್ರಿ ಸೆಲ್ಸಿಯಸ್ ವರದಿಯಾಗಿದೆ. ಮುಂದಿನ ದಿನಗಳಲ್ಲಿ ಚಳಿ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications