Haryana: ಹರಿಯಾಣದಲ್ಲಿ ಚುನಾವಣೆ ಮುಕ್ತಾಯ, ಮತ ಹಾಕಿ ಮದುವೆಗೆ ತೆರಳಿದ ಗಂಡು!
ಹರಿಯಾಣದಲ್ಲಿ ಇಂದು ವಿಧಾನಸಭೆ ಚುನಾವಣೆಯ ಮತದಾನ ಯಶಸ್ವಿಯಾಗಿ ಸಂಪನ್ನಗೊಂಡಿದೆ. 90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಎಲ್ಲ ಮತ ಕೇಂದ್ರಗಳಲ್ಲಿ ಮತದಾನ ಪ್ರಕ್ರಿಯೆ ಮುಗಿದಿದ್ದು, ಸಂಜೆ 5 ಗಂಟೆವರೆಗೆ ಶೇ 61ರಷ್ಟು ಮತದಾನ ಆಗಿರುವುದಾಗಿ ವರದಿಯಾಗಿದೆ. ಮತದಾನ ಮಹತ್ವ ಅರಿತ ವರನೊಬ್ಬ ತನ್ನ ಮದುವೆ ಇದ್ದರೂ ಮೊದಲು ಮತದಾನ ಮಾಡಿ ಬಳಿಕ ಮದುವೆ ಮಂಟಪಕ್ಕೆ ತೆರಳಿರುವ ಪ್ರಸಂಗ ನಡೆದಿದೆ.
ಕುರುಕ್ಷೇತ್ರ ಜಿಲ್ಲೆಯ ಲಡ್ವಾ ವಿಧಾನಸಭೆ ಕ್ಷೇತ್ರದಲ್ಲಿ ಈ ಅಪರೂಪದ ಸಂಗತಿ ನಡೆದಿದ್ದು, ಸುನೀಲ್ ಎಂಬ ಮತದಾರ ಇದೇ ದಿನ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮತ್ತೊಂದೆಡೆ ಇದೇ ದಿನ ಮತದಾನ ಇದ್ದಿದ್ದರಿಂದ ತಪ್ಪದೆ ಮತದಾನ ಮಾಡಿ ಜವಾಬ್ದಾರಿ ನಿರ್ವಹಿಸಿದ್ದಾರೆ.

ಇಂದು ಮದುವೆ ಮಂಟಪಕ್ಕೆ ಹೋಗುವ ಮುನ್ನ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ನಂತರ ಮದುವೆ ಮಂಟಪದ ಕಡೆಗೆ ತೆರಳಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಸುನೀಲ್ ಅವರು ಮತದಾರರಿಗೆ ಮಾದರಿಯಾಗಿದ್ದಾರೆ.
ಮತ ಚಲಾಯಿಸುವುದು ಎಲ್ಲರ ಕರ್ತವ್ಯ. ಅದರಿಂದ ಯಾರೂ ತಪ್ಪಿಸಿಕೊಳ್ಳಬಾರದು. ನನ್ನ ಹಕ್ಕನ್ನು ಚಲಾಯಿಸಿ ಮದುವೆಗೆ ಹೊರಟಿದ್ದೇನೆ. ನನ್ನ ಮದುವೆಗೆ ಸ್ವಲ್ಪ ತಡವಾಗಬಹುದು. ಆದರೆ, ಮತ ಚಲಾಯಿಸುವುದು ಮುಖ್ಯ. ಹರಿಯಾಣದ ಜನರೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಸುನೀಲ್ ಮನವಿ ಮಾಡಿಕೊಂಡರು.

ಕೈತಾಲ್ ಎಸ್‌ಪಿ ರಾಜೇಶ್ ಕಾಲಿಯಾ ಮಾತನಾಡಿ, ಇಲ್ಲಿನ ಮತದಾನದ ಬಗ್ಗೆ ನನಗೆ ತಿಳಿದಿಲ್ಲ, ಆದರೆ ಇದು ಹರಿಯಾಣದಲ್ಲೇ ಎರಡನೇ ಅತಿ ಹೆಚ್ಚು ಮತದಾನವಾಗಿದೆ ಎನ್ನುವುದಾದರೆ ಅದರ ಶ್ರೇಯಸ್ಸು ಮತದಾರರಿಗೆ ಹಾಗೂ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಿದವರಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.
ಹರಿಯಾಣ ವಿಧಾನಸಭಾ ಚುನಾವಣೆಯ ಕುರಿತು ಮಾತನಾಡಿದ ಹರಿಯಾಣ ಮುಖ್ಯ ಕಾರ್ಯದರ್ಶಿ ಟಿವಿಎಸ್‌ಎನ್ ಪ್ರಸಾದ್, ನಾನು ಇಂದಿನ ಘಟನೆಗಳನ್ನು ದೊಡ್ಡದು ಎಂದು ಪರಿಗಣಿಸುತ್ತೇನೆ. ಇದು ಮತದಾನದ ಕಾರ್ಯವಿಧಾನದ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಸಣ್ಣ ಘಟನೆಗಳು ವರದಿಯಾಗಿವೆ. ಆಡಳಿತವು ಅಂತಹ ವಿಷಯಗಳ ಮೇಲೆ ಕಣ್ಣಿಟ್ಟಿದೆ. ಆದರೆ, ಇಲ್ಲಿ ಯಾವುದೇ ದೊಡ್ಡ ಘಟನೆ ನಡೆದಿಲ್ಲ. ಮತ್ತು ಮತದಾನದ ಪ್ರಕ್ರಿಯೆಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಿಎಂ ಭೂಪಿಂದರ್ ಹೂಡಾ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಭಾರಿ ಬಹುಮತದೊಂದಿಗೆ ಸರ್ಕಾರ ರಚಿಸುತ್ತದೆ. ಬಿಜೆಪಿ ಹೋಗಲಿದೆ, ಕಾಂಗ್ರೆಸ್ ಬರಲಿದೆ ಎಂದು ಘೋಷಿಸಿದ್ದಾರೆ.
ಕಾಂಗ್ರೆಸ್ ಚುನಾವಣಾ ರ್ಯಾಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರಿಗೆ ಕಿರುಕುಳ ನೀಡಲಾಗಿದೆ ಎಂಬ ಆರೋಪ ಇಂದು ಮತದಾನದ ವೇಳೆ ಸಖತ್ ಸದ್ದು ಮಾಡಿದೆ. ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಸಂಸದೆ ಕುಮಾರಿ ಸೆಲ್ಜಾ, ನಾನು ಅವಳೊಂದಿಗೆ ಮಾತನಾಡಿದ್ದೇನೆ. ಕೆಲವರು ತನ್ನನ್ನು ಸ್ಪರ್ಶಿಸಿ ವೇದಿಕೆಯಿಂದ ಹೊರಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಿದೆ. ಮಹಿಳೆಗೆ ಈ ರೀತಿಯಾಗಿ ಏನಾದರೂ ಸಂಭವಿಸಿದರೆ, ಅದು ಅತ್ಯಂತ ಖಂಡನೀಯ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದು ಖಚಿತ ಎಂದು ಹೇಳಿದ್ದಾರೆ.












Click it and Unblock the Notifications