Vijay: ನರೇಂದ್ರ ಮೋದಿ, ರಾಹುಲ್‌ಗಾಂಧಿಗೆ ಶಾಕ್ ಕೊಟ್ಟ ತಮಿಳುನಾಡಿನ ಸಿಎಂ ಸಿ.ಜೋಸೆಫ್ ವಿಜಯ್: ಪ್ರಧಾನಿ ರೇಸ್ 3ನೇ ಸ್ಥಾನ!
Vijay: ಭಾರತದಲ್ಲಿ ದಕ್ಷಿಣ ಭಾರತದಿಂದ ಪ್ರಧಾನಿಯಾದವರು ಅತ್ಯಂತ ವಿರಳಾತಿ ವಿರಳ. ಕರ್ನಾಟಕದಿಂದ ಎಚ್.ಡಿ ದೇವೇಗೌಡ ಅವರು ಪ್ರಧಾನಿ ಆಗಿದ್ದರು. ಅವರೂ ಸಹ ಪೂರ್ಣ 5 ವರ್ಷ ಅಧಿಕಾರವನ್ನು ನಡೆಸಲು ಸಾಧ್ಯವಾಗಿರಲಿಲ್ಲ. ತಮಿಳುನಾಡಿ ಮಾಜಿ ಮುಖ್ಯಮಂತ್ರಿಗಳಾದ, ದಿವಂಗತ ಎಂ. ಕರುಣಾನಿಧಿ ಹಾಗೂ ಜೆ. ಜಯಲಲಿತಾ ಅವರು ಸಹ ಇಂತಹ ಕನಸುಗಳನ್ನು ಕಂಡಿದ್ದರು. ಆದರೆ, ಅದು ಕೈಗೂಡಿರಲಿಲ್ಲ.
ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದಿಂದ ಯಾವುದೇ ರಾಜಕಾರಣಿಯೂ ಪ್ರಧಾನ ಮಂತ್ರಿ ಆಗಿಲ್ಲ. ಪ್ರಧಾನ ಮಂತ್ರಿ ರೇಸ್‌ನಲ್ಲಿ ಕಾಣಿಸಿಕೊಂಡಿದ್ದು ಸಹ ಅತ್ಯಂತ ವಿರಳವೇ. ದಕ್ಷಿಣ ಭಾರತೀಯರಿಗೆ ಕೇಂದ್ರ ಮಟ್ಟದ ಆಡಳಿತದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ ಎನ್ನುವ ಚರ್ಚೆಗಳ ನಡುವೆಯೇ ಪ್ರಧಾನಿ ರೇಸ್‌ನಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರ ಹೆಸರು ಕೇಳಿ ಬಂದಿದೆ.

2024ರಲ್ಲಿ ರಾಜಕೀಯ ಪ್ರವೇಶಿಸಿದ ನಟ, ರಾಜಕಾರಣಿ ವಿಜಯ್ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ಸಿ ಜೋಸೆಫ್ ವಿಜಯ್ ಅವರು ಕೆಲವೇ ವರ್ಷಗಳಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಹುದ್ದೆಗೇರಿದ್ದಾರೆ. ಇದೀಗ ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್ (MOTN) ನಡೆಸಿದ ಸಮೀಕ್ಷೆಯಲ್ಲಿ ಭಾರತದ ಮುಂದಿನ ಪ್ರಧಾನಿ ನಿಮ್ಮ ಆಯ್ಕೆ ಯಾರು ಎನ್ನುವ ಪ್ರಶ್ನೆಗೆ ದೇಶದ ಪ್ರಮುಖ ರಾಜಕಾರಣಿಗಳಲ್ಲಿ ಮೂರನೇ ಅತ್ಯಂತ ಆದ್ಯತೆಯ ಆಯ್ಕೆಯನ್ನಾಗಿ ಜನ ವಿಜಯ್ ಅವರ ಆಯ್ಕೆ ಮಾಡಿದ್ದಾರೆ. ರಾಜಕೀಯ ಪಕ್ಷ ಪ್ರಾರಂಭಿಸಿದ ಕೇವಲ 2.5 ವರ್ಷಗಳಲ್ಲಿ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಇದೀಗ ದೇಶದ ಮುಂದಿನ ಪ್ರಧಾನ ಮಂತ್ರಿಗೆ ಯಾರು ಸೂಕ್ತ ಆಯ್ಕೆ ಎನ್ನುವುದಕ್ಕೆ ಜನ ವಿಜಯ್ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ.
ರಾಜಕೀಯ ಪ್ರವೇಶ ಮಾಡಿದ ಕೆಲವೇ ದಿನಗಳಲ್ಲಿ ದೇಶದಾದ್ಯಂತ ವಿಜಯ್ ಅವರು ಇಷ್ಟೊಂದು ಮನ್ನಣೆ ಗಳಿಸಿರುವುದು ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ, ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರು ಮುಂದಿನ ಪ್ರಧಾನಿ ಆಗಬೇಕು ಎಂದು ಶೇ. 9.2% ರಷ್ಟು ಜನ ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಶೇ. 48.7% ಜನ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮುಂದಿನ ಪ್ರಧಾನಿ ಆಗಿ ಆಯ್ಕೆಯಾಗಬೇಕು ಎಂದು ಶೇ. 27.1% ರಷ್ಟು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರಕ್ಕೆ ಕಾಂಗ್ರೆಸ್ ಪಕ್ಷ ಬೆಂಬಲವಿದೆ.
ಇನ್ನೂ ಮುಂದಿನ ಪ್ರಧಾನಿ ಯಾರು ಆಗಬೇಕು ಎನ್ನುವುದಕ್ಕೆ ಹಲವರು ಅಚ್ಚರಿಯ ರಾಜಕಾರಣಿಗಳ ಹೆಸರು ತೆಗೆದುಕೊಂಡಿದ್ದಾರೆ. ಅದರಲ್ಲಿ ಪಶ್ವಿಮ ಬಂಗಾಳದ ಮಾಜಿ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (2%), ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (1.7%), ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸ್ಥಾಪಕ ಮತ್ತು ಸಂಚಾಲಕ ಅಭಿಜಿತ್ ದಿಪ್ಕೆ (1.3%) ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (1.2%) ಹೆಸರು ಇದ್ದಾರೆ. ಇವರೆಲ್ಲರಿಗಿಂತಲೂ ಹೆಚ್ಚು ಜನ ವಿಜಯ್ ಮುಂದಿನ ಪ್ರಧಾನ ಮಂತ್ರಿ ಆಗಬೇಕು ಅಂತ ಅಭಿಪ್ರಾಯಪಟ್ಟಿದ್ದಾರೆ.
ಮೂಡ್ ಆಫ್ ದಿ ನೇಷನ್ ಎಂಬುದು ಇಂಡಿಯಾ ಟುಡೇ ಗ್ರೂಪ್ ಸುಮಾರು ಎರಡು ದಶಕಗಳಿಂದ ನಡೆಸುತ್ತಿರುವ ದ್ವೈವಾರ್ಷಿಕ ಸಮೀಕ್ಷೆಯಾಗಿದೆ. ಆಗಸ್ಟ್ 2026 ರ ಆವೃತ್ತಿಯನ್ನು ಜುಲೈ 1 ರಿಂದ ಆಗಸ್ಟ್ 25 ರವರೆಗೆ ನೇರವಾಗಿ ಸಮೀಕ್ಷೆ ಮಾಡಿದ 25,184 ಜನರ ಮಾದರಿಯೊಂದಿಗೆ ಸಿವೋಟರ್ ನಡೆಸಿತು.
ಇನ್ನು ಪ್ರಧಾನ ಮಂತ್ರಿ ಮಾತ್ರವಲ್ಲ ದೇಶದ ವಿರೋಧ ಪಕ್ಷದ ನಾಯಕ ಯಾರು ಆಗಬೇಕು ಎನ್ನುವುದಕ್ಕೂ ಹಲವರು ವಿಜಯ್ ಅವರ ಹೆಸರನ್ನು ಹೇಳಿದ್ದಾರೆ. ವಿರೋಧ ಪಕ್ಷದ ಮೈತ್ರಿಕೂಟವನ್ನು ಮುನ್ನಡೆಸಲು ಪ್ರಸ್ತುತ ಯಾವ ವಿರೋಧ ಪಕ್ಷದ ನಾಯಕ ಸೂಕ್ತ ಎನ್ನುವ ಪ್ರಶ್ನೆಗೆ ಹಲವರು ವಿಜಯ್ ಅವರು ಸೂಕ್ತ ಎಂದಿದ್ದಾರೆ. ಶೇ 12.2% ರಷ್ಟು ಜನ ವಿರೋಧ ಪಕ್ಷದ ನಾಯಕನಾಗುವುದಕ್ಕೆ ವಿಜಯ್ ಅವರು ಸೂಕ್ತ ಎಂದಿದ್ದಾರೆ.


Click it and Unblock the Notifications
