ವಿಡಿಯೋ : ಮೋದಿ ಸರಕಾರದ 30 ದಿನಗಳ ಅವಲೋಕನ
ನವದೆಹಲಿ, ಜೂ. 26 : ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡು ಕೇವಲ ಮೂವತ್ತು ದಿನಗಳು ಸಂದಿವೆ. ರಾಷ್ಟ್ರದ ಒಬ್ಬ ಸಮರ್ಥ ದಂಡನಾಯಕನಾಗಿ ಒಬ್ಬ ಪ್ರಧಾನಿ ಏನೇನು ಮಾಡಲು ಸಾಧ್ಯ? ಭಾರತದ ವಿಕಾಸವನ್ನು ಗಮನದಲ್ಲಿಟ್ಟುಕೊಂಡು ಮೋದಿ ಅವರು ಸರಿಯಾದ ಹೆಜ್ಜೆ ಇಟ್ಟಿದ್ದಾರಾ? ಇಲ್ಲಿದೆ ಒಂದು ವಿಡಿಯೋ ಅವಲೋಕನ.
ತಮ್ಮ ಜೊತೆಯಲ್ಲಿ ಜೊತೆಯಾಗಿ, ತಮ್ಮ ವೇಗಕ್ಕೆ ತಕ್ಕಂತೆ ದುಡಿಯುವ ಮಂತ್ರಿಗಳನ್ನು ಮತ್ತು ಮೈಬಗ್ಗಿಸಿ ಕೆಲಸ ಮಾಡುವ ಅಧಿಕಾರಿಗಳನ್ನು ಸಜ್ಜುಗೊಳಿಸಿದ್ದು ಮತ್ತು ಅವರಿಗೆ ಮುಕ್ತಹಸ್ತ ನೀಡಿ, ಸ್ವತಃ ಅಧಿಕಾರಿಗಳ ಕೈಕುಲುಕಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದು, ನರೇಂದ್ರ ಮೋದಿ ಅವರು ತೆಗೆದುಕೊಂಡಿರುವ ಮಹತ್ತರ ಹೆಜ್ಜೆ.
ಪದಗ್ರಹಣದ ಸಂದರ್ಭದಲ್ಲಿ ಸಾರ್ಕ್ ರಾಷ್ಟ್ರಗಳ ನಾಯಕರತ್ತ ಸ್ನೇಹಹಸ್ತ ಚಾಚಿ ನರೇಂದ್ರ ಮೋದಿ ಅವರು ವಿರೋಧಿಗಳ ವಿಶ್ವಾಸ ಕೂಡ ಗೆದ್ದಿದ್ದಾರೆ. ನೆರೆರಾಷ್ಟ್ರಗಳು ಮಾತ್ರವಲ್ಲ ವಿಶ್ವದ ಇತರ ರಾಷ್ಟ್ರದ ನಾಯಕರು ಕೂಡ ನರೇಂದ್ರ ಮೋದಿ ಅವರಲ್ಲಿ ಒಬ್ಬ ಸಮರ್ಥ ನಾಯಕತ್ವವನ್ನು ಕಂಡು ಶ್ಲಾಘಿಸಿದ್ದಾರೆ. ಜೊತೆಗೆ, ಕಪ್ಪು ಹಣವನ್ನು ಭಾರತಕ್ಕೆ ವಾಪಸ್ ತರುವ ಯತ್ನ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ.

ಮೂವತ್ತು ದಿನಗಳಲ್ಲಿ ಏನು ಮಾಡಲು ಸಾಧ್ಯವಿಲ್ಲ? ಸರಿಯಾದ ನಿರ್ಣಯಗಳಿಂದ ಸರಿಯಾದ ಪ್ರತಿಫಲ ಪಡೆಯಲು ಸಾಧ್ಯವೆಂದು ಇಡೀ ದೇಶಕ್ಕೆ ನರೇಂದ್ರ ಮೋದಿ ಅವರು ತೋರಿಸಿದ್ದಾರೆ. ಇದಕ್ಕಾಗಿ ಸಮರೋಪಾದಿಯಲ್ಲಿ ಬದಲಾವಣೆಗಳನ್ನು ತರುತ್ತಿದ್ದಾರೆ. ಸಮರ್ಥ ತಂಡವನ್ನು ಕಟ್ಟಿಕೊಂಡಿದ್ದಾರೆ, ಜನರ ಹೃದಯಕ್ಕೆ ಮುಟ್ಟುವಂತೆ ಕೆಲಸ ಮಾಡಿರೆಂದು ಹುರಿದುಂಬಿಸುತ್ತಿದ್ದಾರೆ.
ಆಡಳಿತದಲ್ಲಿ ಸುನಾಮಿಯಂತೆ ಬದಲಾವಣೆಗಳನ್ನು ತಂದಿದ್ದು, ಉತ್ತಮ ಮತ್ತು ಸ್ಮಾರ್ಟ್ ಆಡಳಿತದ ಮಂತ್ರ ಜಪಿಸುವಂತೆ ಮಾಡಿದ್ದಾರೆ. ನವದೆಹಲಿಯಲ್ಲಿ ಪೇಪರ್ ಕೆಲಸವನ್ನು ರದ್ದಿಗೆ ಬಿಸಾಕಿ, ಸರಳವಾಗಿ ಮತ್ತು ಸ್ಮಾರ್ಟ್ ಆಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಹಚ್ಚಿದ್ದಾರೆ. ಮಂತ್ರಿಗಳು ಮಾತ್ರವಲ್ಲ ಅಧಿಕಾರಿಗಳು ಕೂಡ ಸೂರ್ಯ ಹುಟ್ಟುವ ಮುನ್ನವೇ ಕೆಲಸಕ್ಕೆ ಹಾಜರಾಗುವಂತೆ ಮಾಡುತ್ತಿದ್ದಾರೆ.
ಕೆಲಸಕ್ಕೆ ಬಾರದ ನಿಮಯಗಳನ್ನು ತರಬೇಡಿ, ಹೊಸ ಐಡಿಯಾಗಳನ್ನು ಜಾರಿಗೆ ತನ್ನಿ, ಚರ್ಚೆ ಕಡಿಮೆ ಮಾಡಿ, ಹೆಚ್ಚು ಕೆಲಸ ಮಾಡಿ ಎಂದು ತಾಕೀತು ಮಾಡಿದ್ದಾರೆ. ಸಂಪುಟದಲ್ಲಿ ಆರು ಮಹಿಳೆಯರಿಗೆ ಸ್ಥಾನ ನೀಡಿದ್ದು, ಮಹಿಳಾ ಸಬಲೀಕರಣತತ್ತ ಮೋದಿ ಇಟ್ಟಿರುವ ದಿಟ್ಟ ಹೆಜ್ಜೆ. ಎಲ್ಲಕ್ಕಿಂತ ಹೆಚ್ಚಾಗಿ ಗಂಗೆಯನ್ನು ಶುದ್ಧ ಮಾಡುವ ಮುಖಾಂತರ ಭ್ರಷ್ಟಾಚಾರವನ್ನೂ ತೊಳೆದು ಹಾಕೋಣ ಎಂಬ ಸಂದೇಶ ಸಾರಿದ್ದಾರೆ.
ಮೊದಲ ಮೂವತ್ತು ದಿನಗಳು ಮುಂಬರುವ ಐದು ವರ್ಷಗಳಲ್ಲಿ ನರೇಂದ್ರ ಮೋದಿ ಮಾಡಲಿರುವ ಕೆಲಸಕ್ಕೆ ದಿಕ್ಸೂಚಿಯಾಗಿದೆ. ಆರ್ಥಿಕ ಸುಧಾರಣೆ ತರಲು ಕೆಲ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದರೂ ಮುಂದೆ ಭಾರತ ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗಲಿದೆ ಎಂಬ ಸುಳಿವು ಇಡೀ ವಿಶ್ವಕ್ಕೆ ನೀಡಿದ್ದಾರೆ. ಭಾರತದ ಭವ್ಯ ಭವಿಷ್ಯಕ್ಕಾಗಿ ಇಟ್ಟಿರುವ ಆರಂಭಿಕ ಹೆಜ್ಜೆಯನ್ನು ಐದು ನಿಮಿಷಗಳ ವಿಡಿಯೋದಲ್ಲಿ ಕ್ರೋಢೀಕರಿಸಲಾಗಿದೆ.
ಬ್ಲಾಗಿನಲ್ಲಿ ಸಂಸತ ಹಂಚಿಕೊಂಡ ಮೋದಿ : ತಮ್ಮ ಬ್ಲಾಗಿನಲ್ಲಿ ಒಂದು ತಿಂಗಳು ಆಡಳಿತದಲ್ಲಿ ಅನುಭವಿಸಿದ ಕ್ಷಣಗಳನ್ನು ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ. ಕಳೆದ ಒಂದು ತಿಂಗಳಲ್ಲಿ ನಮ್ಮ ಇಡೀ ತಂಡ ಜನರ ಅಭ್ಯದಯಕ್ಕಾಗಿ ಪ್ರತಿಕ್ಷಣವನ್ನು ಮುಡಿಪಾಗಿಟ್ಟಿದೆ. ಈ ಒಂದು ತಿಂಗಳ ಆಡಳಿತದ ಮುಂದೆ 67 ವರ್ಷಗಳ ಹಿಂದಿನ ಆಡಳಿತ ಏನೇನೂ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬ್ಲಾಗಿನಲ್ಲಿ ಮತ್ತೇನು ಹೇಳಿದ್ದಾರೆ ಇಲ್ಲಿ ಓದಿರಿ.












Click it and Unblock the Notifications