Telangana Assembly Election : ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಖಚಿತ: ಹಲವು ಸಮೀಕ್ಷೆಗಳ ವರದಿ
ಪಂಚರಾಜ್ಯಗಳ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಜಿದ್ದಾ ಜಿದ್ದಿನ ಪೈಪೋಟಿಗೆ ಸಾಕ್ಷಿಯಾಗಿದೆ. ಐದು ರಾಜ್ಯಗಳಲ್ಲಿ ಕನಿಷ್ಠ ಮೂರು ರಾಜ್ಯಗಳಲ್ಲಿ ಗೆಲ್ಲುವ ವಿಶ್ವಾಸದಲ್ಲಿ ಕಾಂಗ್ರೆಸ್ ಇದ್ದರೆ, ಬಿಜೆಪಿ ಕೂಡ ಮೂರು ರಾಜ್ಯಗಳಲ್ಲಿ ಗೆಲ್ಲುವ ಕನಸು ಕಾಣುತ್ತಿದೆ.
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಭದ್ರ ನೆಲೆ ಇರುವುದು ಕರ್ನಾಟಕದಲ್ಲಿ ಮಾತ್ರ, 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲುವ ಮೂಲಕ ಮುಖಭಂಗ ಅನುಭವಿಸಿದೆ. ಕಾಂಗ್ರೆಸ್ ಸರ್ಕಾರ ರಚನೆ ಮಾಡಿದ್ದು, ಸದ್ಯ ಕರ್ನಾಟಕ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಐದು ರಾಜ್ಯಗಳಲ್ಲಿ ಪ್ರಚಾರ ಮಾಡುತ್ತಿದೆ.

ಪಕ್ಕದ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಆರ್‍ಎಸ್ ಪಕ್ಷದ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಇಲ್ಲಿ ಬಿಜೆಪಿ ವ್ಯಾಪಕ ಪ್ರಚಾರ ಮಾಡಿದರು, 5 ಸೀಟುಗಳನ್ನು ಕೂಡ ಗೆಲ್ಲಲು ಸಾಧ್ಯವಿಲ್ಲ ಎಂದು ಸಮೀಕ್ಷೆಗಳು ಹೇಳಿವೆ.
ಕರ್ನಾಟಕದ ಸಚಿವರು, ಸಿಎಂ, ಡಿಸಿಎಂ ಕೂಡ ತೆಲುಗು ನಾಡಿನಲ್ಲಿ ಅಬ್ಬರದ ಪ್ರಚಾರ ಮಾಡಿದ್ದಾರೆ. ಡಿಕೆ ಶಿವಕುಮಾರ್ ತೆಲಂಗಾಣದಲ್ಲೇ ಠಿಕಾಣಿ ಹೂಡಿದ್ದು, ಬಿರುಸಿನ ಪ್ರಚಾರಕ್ಕೆ ರಣತಂತ್ರ ರೂಪಿಸಿದ್ದಾರೆ. ನವೆಂಬರ್ 28 ರಂದು ಬಹಿರಂಗ ಪ್ರಚಾರ ಅಂತ್ಯವಾಗಲಿದ್ದು, ನವೆಂಬರ್ 30ರಂದು 119 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬಹುತೇಕ ಸಮೀಕ್ಷೆಗಳು ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿವೆ.
ವಿವಿಧ ಸಮೀಕ್ಷೆಗಳು ಹೇಳಿದ್ದೇನು?
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಲೋಕ್ ಪೋಲ್ ನೀಡಿದ್ದ ಸಮೀಕ್ಷೆ ಬಹುತೇಕ ನಿಜವಾಗಿತ್ತು, ಇದೇ ಸಂಸ್ಥೆ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಯಲ್ಲಿ ಭವಿಷ್ಯ ನುಡಿದಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ 69-72 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಿದ್ದು, ಆಡಳಿತಾರೂಢ ಬಿಆರ್‍ಎಸ್ 36-39 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಲಿದೆ ಎಂದು ಹೇಳಿದೆ. ಇನ್ನು ಎಐಎಂಐಎಂ 5-6, ಬಿಜೆಪಿ 2-3, ಇತರೆ 0-1 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಹೇಳಿದೆ.
ಸೌತ್ ಫಸ್ಟ್ ಮಾಡಿರುವ ಸರ್ವೆಯಲ್ಲಿ ಕೂಡ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ 57-62 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ, ಬಿಆರ್‍ಎಸ್ 41-46 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಲಿದೆ ಎಂದು ಹೇಳಿದೆ. ಇನ್ನು ಎಐಎಂಐಎಂ 6-7, ಬಿಜೆಪಿ 3-6, ಇತರೆ 1-2 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಸೌಥ್‌ಫಸ್ಟ್ ಸಮೀಕ್ಷೆ ಹೇಳಿದೆ.
ಪಲ್ಸ್ ಆಫ್ ತೆಲಂಗಾಣ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 68-79, ಬಿಆರ್‍ಎಸ್ 37-51, ಎಐಎಂಐಎಂ 3-6, ಬಿಜೆಪಿ 1-4, ಇತರೆ 0-2 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ತಿಳಿಸಿದೆ.
ನವೆಂಬರ್ 30ರಂದು ತೆಲಂಗಾಣದಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications