Vande Bharat Sleeper: ಈ ತಿಂಗಳು ಆರಂಭವಾಗಲಿದೆ ವಂದೇ ಭಾರತ್ ಸ್ಲೀಪರ್ ರೈಲು
ನವದೆಹಲಿ, ಮಾರ್ಚ್ 07: ಭಾರತೀಯ ರೈಲ್ವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ಮಾದರಿ ರೈಲುಗಳ ಸಂಚಾರವನ್ನು ಈ ತಿಂಗಳು ಆರಂಭಿಸಲಿದೆ. ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತ (ಸಿಸಿಆರ್‌ಎಸ್) ಸ್ಲೀಪರ್ ಮಾದರಿ ರೈಲುಗಳ ಸಂಚಾರದ ಪರಿಶೀಲನೆ ನಡೆಸಿ, ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ನೀಡಲಿದ್ದಾರೆ. ಈ ಮಾದರಿ ರೈಲುಗಳ ಬೋಗಿಗಳ ವಿನ್ಯಾಸಕ್ಕೆ ಒಪ್ಪಿಗೆ ಸಿಕ್ಕಿದೆ.
ಲಕ್ನೋ ಮೂಲದ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಆರ್‌ಡಿಎಸ್‌ಒ) ವಂದೇ ಭಾರತ್ ಸ್ಲೀಪರ್ ಮಾದರಿ ರೈಲಿನ ಪ್ರಾಯೋಗಿಕ ಸಂಚಾರವನ್ನು ಪರಿಶೀಲನೆ ನಡೆಸಿ ಒಪ್ಪಿಗೆಯನ್ನು ನೀಡಿದೆ. ರೈಲ್ವೆ ಸುರಕ್ಷತೆಯ ಆಯುಕ್ತರು ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ನೀಡಬೇಕಿದೆ.

ವಂದೇ ಭಾರತ್ ಸ್ಲೀಪರ್ ರೈಲು ಬೋಗಿಗಳು ಈಗಾಗಳೇ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಚೆನ್ನೈ ತಲುಪಿವೆ. ರೈಲ್ವೆ ಸುರಕ್ಷತಾ ಆಯುಕ್ತರು ರೈಲು ಸಂಚಾರ ವೀಕ್ಷಣೆ ಮಾಡಲು ಕೆಲವೇ ದಿನಗಳಲ್ಲಿ ಆಹ್ವಾನ ನೀಡಲಾಗುತ್ತದೆ. ಮಾರ್ಚ್ ಅಂತ್ಯದೊಳಗೆ ಪರಿಶೀಲನೆ ಪೂರ್ಣಗೊಂಡು, ವಾಣಿಜ್ಯ ಸಂಚಾರಕ್ಕೆ ಪ್ರಮಾಣ ಪತ್ರವನ್ನು ನೀಡಲಿದ್ದಾರೆ ಎಂಬ ಮಾಹಿತಿ ಇದೆ.
28 ದಿನಗಳ ಕಾಲ ಪ್ರಾಯೋಗಿಕ ಸಂಚಾರ: ರೈಲ್ವೆ ಇಲಾಖೆ ಅಧಿಕಾರಿಗಳ ಮಾಹಿತಿಯಂತೆ ಜನವರಿಯಲ್ಲಿ 28 ದಿನಗಳ ಕಾಲ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರವನ್ನು ನಡೆಸಿ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗಿದೆ. ಬಳಿಕ ಆರ್‌ಡಿಎಸ್‌ಒ ಬೋಗಿಗಳ ಸಂಯೋಜನೆ, ವಿನ್ಯಾಸದ ಕುರಿತು ಪ್ರಾಯೋಗಿಕ ಪರೀಕ್ಷೆಗಳನ್ನು ಮಾಡಿದೆ.
ಜಾನ್ಸಿ ವಿಭಾಗ, ಕೋಟಾ ವಿಭಾಗ, ಪಶ್ಚಿಮ ರೈಲ್ವೆಯ ಅಹಮದಾಬಾದ್-ಮುಂಬೈ ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಓಡಿಸಿ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ನಡೆಸಲಾಗಿದೆ. 2023-24ನೇ ಸಾಲಿನ ಬಜೆಟ್‌ನಲ್ಲಿ ವಂದೇ ಭಾರತ್ ಸ್ಲೀಪರ್ ಮಾದರಿ ರೈಲು ಘೋಷಣೆ ಮಾಡಲಾಗಿತ್ತು. 2025ರಲ್ಲಿ ರೈಲು ಸಂಚಾರ ಪ್ರಾರಂಭವಾಗಲಿದೆ.
ಭಾರತೀಯ ರೈಲ್ವೆ ಯಾವ ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಓಡಿಸಲಿದೆ ಎಂದು ಇನ್ನೂ ಸಹ ಘೋಷಣೆ ಮಾಡಿಲ್ಲ. ಆದರೆ ಅಹಮದಾಬಾದ್-ಮುಂಬೈ ಬುಲೆಟ್ ರೈಲು ಮಾರ್ಗದಲ್ಲಿ ಈ ಮಾದರಿ ರೈಲು ಸಂಚಾರ ಮೊದಲು ಆರಂಭಿಸಲಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.
ದೂರ ಸಂಚಾರದ ಮಾರ್ಗದಲ್ಲಿ ಸುಖಕರ ಪ್ರಯಾಣದ ಅನುಭವ ನೀಡುವ ವಂದೇ ಭಾರತ್ ಸ್ಲೀಪರ್ ಮಾದರಿ ರೈಲುಗಳ ಸಂಚಾರ ಆರಂಭಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ವಿವಿಧ ರಾಜ್ಯಗಳು ತಮ್ಮ ರಾಜ್ಯದಲ್ಲಿ ಸ್ಲೀಪರ್ ರೈಲುಗಳು ಬೇಕು ಎಂದು ಈಗಾಗಲೇ ಬೇಡಿಕೆ ಸಲ್ಲಿಕೆ ಮಾಡಿವೆ.
ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಪ್ರಕಾರ ಈಗಾಗಲೇ 10 ವಂದೇ ಭಾರತ್ ಸ್ಲೀಪರ್ ರೈಲುಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಇದರ ಜೊತೆಗೆ, 200 ವಂದೇ ಭಾರತ್ ಸ್ಲೀಪರ್ ರೇಕ್‌ಗಳ ನಿರ್ಮಾಣ ಒಪ್ಪಂದವನ್ನು ತಂತ್ರಜ್ಞಾನ ಪಾಲುದಾರರಿಗೆ ನೀಡಲಾಗಿದೆ. ಆದರೆ ಯಾವಾಗ ರೈಲು ಸಂಚಾರ ಆರಂಭ ಎಂಬ ಮಾಹಿತಿ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ.
ಭಾರತೀಯ ರೈಲ್ವೆಯ ಬ್ರಾಡ್ ಗೇಜ್ ವಿದ್ಯುದೀಕರಣ ಮಾರ್ಗದಲ್ಲಿ ಚೇರ್‌ಕಾರ್‌ಗಳನ್ನು ಹೊಂದಿರುವ 136ಕ್ಕೂ ವಂದೇ ಭಾರತ್ ರೈಲು ಸೇವೆಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ. ದೇಶದಲ್ಲಿ ದೀರ್ಘ ಮತ್ತು ಮಧ್ಯಮ ದೂರದ ಪ್ರಯಾಣಕ್ಕಾಗಿ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಪರಿಚಯಿಸಲಾಗುತ್ತಿದೆ.












Click it and Unblock the Notifications