Vande Bharat Express: ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಶೀಘ್ರ ಆರಂಭ
ನವದೆಹಲಿ, ಫೆಬ್ರವರಿ 10: ಭಾರತದ ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿಯೊಂದಿದೆ. ವಂದೇ ಭಾರತ್ ಸ್ಲೀಪರ್ ರೈಲುಗಳ ಸಂಚಾರಕ್ಕೆ ಇಲಾಖೆ ತಯಾರಿ ನಡೆಸಿದೆ. ಮೂರು ಪ್ರಾಯೋಗಿಕ ಪರೀಕ್ಷೆಗಳನ್ನು ರೈಲು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ರೈಲ್ವೆ ಸುರಕ್ಷತಾ ಆಯುಕ್ತರ ಒಪ್ಪಿಗೆ ಬಳಿಕ ರೈಲುಗಳ ಸಂಚಾರ ಆರಂಭವಾಗಲಿದೆ. ಆದರೆ ಯಾವ ಮಾರ್ಗದಲ್ಲಿ ಮೊದಲು ರೈಲು ಸಂಚಾರ ನಡೆಸಲಿದೆ? ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.
ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲುಗಳ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. 2027-2030ರಲ್ಲಿ ಬುಲೆಟ್ ರೈಲುಗಳನ್ನು ಓಡಿಸಲು ಈ ಮಾರ್ಗವನ್ನು ರಚನೆ ಮಾಡಲಾಗಿದೆ. ಆದರೆ ಬುಲೆಟ್ ರೈಲು ಬೋಗಿ ಬರುವ ತನಕ ವಂದೇ ಭಾರತ್ ಸ್ಲೀಪರ್ ರೈಲುಗಳು ಸಂಚಾರ ನಡೆಸಲಿವೆ.

16 ಬೋಗಿಯ ವಂದೇ ಭಾರತ್ ಸ್ಲೀಪರ್ ರೈಲು ಅತಿ ವೇಗದಲ್ಲಿ ಸಂಚಾರ ನಡೆಸಲಿದೆ. ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಆರ್‌ಡಿಎಸ್‌ಒ) ಮತ್ತು ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿದ ಬಳಿಕ ವಾಣಿಜ್ಯ ಸಂಚಾರಕ್ಕೆ ಅನುಮತಿ ಸಿಗಲಿದೆ.
ಪ್ರಮಾಣ ಪತ್ರದ ಅಗತ್ಯವಿದೆ: ದೇಶದ ಮೊದಲ ವಂದೇ ಭಾರತ್ ರೈಲು ಸಂಚಾರ ಆರಂಭವಾಗುವ ಮೊದಲು ಆರ್‌ಡಿಎಸ್ಒ ಪ್ರಮಾಣ ಪತ್ರದ ಅಗತ್ಯವಿದೆ. ರೈಲು ಸಂಚಾರದ ವಿವಿಧ ಪರೀಕ್ಷೆಗಳನ್ನು ಪರಿಶೀಲನೆ ನಡೆಸಿ ಈ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ರೈಲ್ವೆ ಸುರಕ್ಷತಾ ಆಯುಕ್ತರು ರೈಲು ಎಷ್ಟು ವೇಗದಲ್ಲಿ ಚಲಿಸಬೇಕು ಎಂದು ಪ್ರಮಾಣ ಪತ್ರವನ್ನು ನೀಡಲಿದ್ದಾರೆ.
ಸ್ಲೀಪರ್ ಮಾದರಿ ರೈಲು ಬೋಗಿಗಳ ಸಂಯೋಜನೆ ಹೀಗಿದೆ. 16 ಬೋಗಿಯ ರೈಲನ್ನು ಎಸಿ ಮೊದಲ ದರ್ಜೆ, ಎಸಿ 2 ಟೈರ್, ಎಸಿ 3ಟೈರ್ ಇರಲಿದೆ. ಒಂದು ರೈಲಿನ ಪ್ರಯಾಣಿಕರ ಸಂಖ್ಯೆ 1,128. ಸದ್ಯ ಎರಡು ನಗರಗಳ ನಡುವೆ ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ. ವಂದೇ ಭಾರತ್ ಸ್ಲೀಪರ್ ರೈಲುಗಳು ದೂರದ ಮಾರ್ಗದಲ್ಲಿ ಸಂಚಾರ ನಡೆಸಲಿದೆ.
ಎರಡು ದೂರದ ನಗರಗಳನ್ನು ವೇಗವಾಗಿ, ಆರಾಮದಾಯಕವಾಗಿ, ಅತ್ಯಾಧುನಿಕ ವ್ಯವಸ್ಥೆಗಳ ಜೊತೆ ಸಂಪರ್ಕಿಸಲು ವಂದೇ ಭಾರತ್ ಸ್ಲೀಪರ್ ಮಾದರಿ ರೈಲುಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ರೈಲುಗಳ ಸಂಚಾರವನ್ನು ಎರಡು ಮಾರ್ಗದಲ್ಲಿ ಪ್ರಾಯೋಗಿಕವಾಗಿ ಪೂರ್ಣಗೊಳಿಸಲಾಗಿದೆ. ಆದರೆ ಅಧಿಕೃತವಾಗಿ ಯಾವಾಗ? ಆರಂಭ ಎಂಬುದು ಇನ್ನೂ ಖಚಿತವಾಗಿಲ್ಲ.
ತುರ್ತು ಸಂದರ್ಭದಲ್ಲಿ ಪ್ರಯಾಣಿಕ ಮತ್ತು ರೈಲು ವ್ಯವಸ್ಥಾಪಕ/ ಲೋಕೋಪೈಲಟ್ ನಡುವಿನ ಸಂವಹನಕ್ಕಾಗಿ ತುರ್ತು ಟಾಕ್-ಬ್ಯಾಕ್ ಘಟಕವಿದೆ. ಕೇಂದ್ರೀಯವಾಗಿ ನಿಯಂತ್ರಿತ ಸ್ವಯಂಚಾಲಿತ ಪ್ಲಗ್ ಬಾಗಿಲುಗಳು ಮತ್ತು ಸಂಪೂರ್ಣವಾಗಿ ಮುಚ್ಚಿದ ಅಗಲವಾದ ಗ್ಯಾಂಗ್‌ವೇಗಳನ್ನು ರೈಲು ಹೊಂದಿದೆ. ಮೇಲಿನ ಬರ್ತ್‌ಗಳಿಗೆ ಸುಲಭವಾಗಿ ಹತ್ತಲು ಹೊಸ ಮಾದರಿ ಏಣಿಯ ವಿನ್ಯಾಸವಿದೆ. ಹವಾನಿಯಂತ್ರಣ, ಸಲೂನ್ ಲೈಟಿಂಗ್ ಮುಂತಾದ ಪ್ರಯಾಣಿಕರ ಸೌಲಭ್ಯಗಳ ಉತ್ತಮ ಸ್ಥಿತಿ ಮೇಲ್ವಿಚಾರಣೆಗಾಗಿ ಕೇಂದ್ರೀಕೃತ ಕೋಚ್ ಮಾನಿಟರಿಂಗ್ ವ್ಯವಸ್ಥೆ ಇದೆ, ರೈಲಿನ ಎಲ್ಲಾ ಬೋಗಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಹೊಂದಿದೆ.












Click it and Unblock the Notifications