Vande Bharat sleeper coach: ಯಾವಾಗ ಬರಲಿದೆ ವಂದೇ ಭಾರತ್ ಸ್ಲೀಪರ್ ಕೋಚ್? ಫೋಟೊಗಳ ಜೊತೆ ಮಾಹಿತಿ ಹಂಚಿಕೊಂಡ ರೈಲ್ವೇ ಸಚಿವ
ನವದೆಹಲಿ, ಅಕ್ಟೋಬರ್ 04: ಭಾರತದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಜನಪ್ರಿಯಗೊಂಡಿರುವುದು ನಮಗೆಲ್ಲ ಗೊತ್ತೇ ಇದೆ. ಈಗ ಕೇಂದ್ರ ಸರ್ಕಾರವು ವಂದೇ ಭಾರತ್ ಸ್ಲೀಪರ್ ಕೋಚ್ ಪರಿಚಯಿಸಲು ಮುಂದಾಗಿದೆ. ಸ್ಲೀಪರ್ ಕೋಚ್ ರೈಲುಗಳು ಯಾವಾಗ ಆರಂಭಗೊಳ್ಳಲಿವೆ? ಅವುಗಳ ವಿನ್ಯಾಸ ಹೇಗಿರುತ್ತದೆ? ಎಂಬುದರ ಕುರಿತು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಫೋಟೊಗಳ ಜೊತೆಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಕುರಿತು ತಿಳಿಯಿರಿ.
ಸ್ಲೀಪರ್ ಕೋಚ್ ಆವೃತ್ತಿಯ ಫೋಟೊಗಳನ್ನು 'ಎಕ್ಸ್' ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು, ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಸ್ಲೀಪರ್ ಆವೃತ್ತಿಯು ಹೊಸ ಪರಿಕಲ್ಪನೆಯಾಗಿದೆ ಎಂದು ತಿಳಿಸಿದ್ದಾರೆ.

ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳು 2024 ರ ಆರಂಭದಲ್ಲಿ ಸಂಚಾರ ಆರಂಭಸಲಿವೆ ಎಂದೂ ಅವರು ತಿಳಿಸಿದ್ದಾರೆ.
ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳ ಮೂಲಕ ರಾತ್ರಿ ಪ್ರಯಾಣಿಸುವ ಯಾತ್ರಿಗಳು ಆದಷ್ಟು ಬೇಗನೇ ತಮ್ಮ ಗಮ್ಯ ಸ್ಥಳಗಳನ್ನು ತಲುಪಬಹುದು ಎಂದು ಅವರು ಹೇಳಿದ್ದಾರೆ.
ಈ ರೈಲುಗಳು ವೇಗವಾಗಿ ಚಲಿಸಲಿದ್ದು, ದೂರ ಪ್ರಯಾಣಿಸುವ ಯಾತ್ರಿಗಳಿಗೆ ಹೇಳಿ ಮಾಡಿಸಿದಂತಿವೆ ಎಂದು ತಿಳಿದುಬಂದಿದೆ.

ಪ್ರತಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ರೈಲನ್ನು ಗಂಟೆಗೆ ಗರಿಷ್ಠ 160 ಕಿಮೀ ವೇಗಕ್ಕೆ ವಿನ್ಯಾಸಗೊಳಿಸಲಾಗಿದೆ. ಈ ರೈಲಿನಲ್ಲಿ 887 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುವ 16 ವಿಶಾಲವಾದ ಬೋಗಿಗಳು ಇರಲಿವೆ ಎಂಬ ಮಾಹಿತಿ ಲಭ್ಯವಾಗಿದೆ.
ವಂದೇ ಭಾರತ್ ಸ್ಲೀಪರ್ ಕೋಚ್‌ಗಳು ವಿಶಾಲವಾದ ಬರ್ತ್‌ಗಳು, ಬೆಳಕಿನಿಂದ ಕೂಡಿದ ಒಳಾಂಗಣಗಳು, ವಿಶಾಲವಾದ ಶೌಚಾಲಯಗಳು, ಕಾಂಪ್ಯಾಕ್ಟ್ ಪ್ಯಾಂಟ್ರಿ ಮತ್ತು ಸುಧಾರಿತ ಸುರಕ್ಷತಾ ನಿಬಂಧನೆಗಳನ್ನು ಒಳಗೊಂಡಿವೆ. ಈ ರೈಲಿನಲ್ಲಿ ಹಲವು ವೈಶಿಷ್ಟ್ಯಗಳನ್ನು ಕಾಣಬಹುದಾಗಿದೆ. ಈ ಹೊಸ ರೈಲುಗಳು ಹೆಚ್ಚಿನ ಇಂಧನ ದಕ್ಷತೆ ಮತ್ತು ಪರಿಸರ ಸ್ನೇಹಿಯಾಗಿ ಇರಲಿವೆ ಎಂಬ ನಿರೀಕ್ಷೆಯಿದೆ.
ಕೇಂದ್ರ ರೈಲ್ವೇ ಸಚಿವ ಹಂಚಿಕೊಂಡ ಫೋಟೋಗಳ ಪ್ರಕಾರ, ಸ್ಲೀಪರ್ ಕೋಚ್‌ಗಳು ಮರದ ವಿನ್ಯಾಸವನ್ನು ಒಳಗೊಂಡಿವೆ. ಬೆಲೆಬಾಳುವ ಆಸನ ವ್ಯವಸ್ಥೆಗಳು, ಸುತ್ತುವರಿದ ಬೆಳಕು ಮತ್ತು ಉತ್ತಮ ಟಾಪ್ ಲೈಟ್‌ಗಳಿಂದ ರೈಲುಗಳು ಕೂಡಿವೆ.

'ಕಾನ್ಸೆಪ್ಟ್ ಟ್ರೈನ್ - ವಂದೇ ಭಾರತ್ (ಸ್ಲೀಪರ್ ಆವೃತ್ತಿ) ಶೀಘ್ರದಲ್ಲೇ ಬರಲಿದೆ. ಇದು 2024 ರ ಆರಂಭದಲ್ಲಿ ಸಂಚಾರ ಆರಂಭಿಸಲಿದೆ' ಎಂದು ಸಚಿವರು ತಿಳಿಸಿದ್ದಾರೆ.
ಭಾರತೀಯ ರೈಲ್ವೆಯು ಚೇರ್ ಕಾರ್ ಆವೃತ್ತಿಯಲ್ಲಿ 75 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಹೊರತರಲು ಯೋಜಿಸಿದೆ. ಉಳಿದವುಗಳನ್ನು ಸ್ಲೀಪರ್ ಆವೃತ್ತಿಗೆ ಯೋಜಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಿಸಲಾದ ಈ ರೈಲುಗಳು 'ಮೇಕ್-ಇನ್-ಇಂಡಿಯಾ' ಉಪಕ್ರಮವನ್ನು ಸಾಕಾರಗೊಳಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಸ್ಥಳೀಯ ಸೆಮಿ-ಹೈ-ವೇಗದ ರೈಲುಗಳನ್ನು ತಯಾರಿಸುವ ಯೋಜನೆಯು 2017 ರ ಮಧ್ಯದಲ್ಲಿ ಪ್ರಾರಂಭವಾಯಿತು.
ಜನವರಿ 2019 ರಲ್ಲಿ, ದೇಶದ ಮೊದಲ ಸೆಮಿ-ಹೈ-ಸ್ಪೀಡ್ ರೈಲಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಎಂದು ನಾಮಕರಣ ಮಾಡಲಾಯಿತು.
ಕರ್ನಾಟಕದಲ್ಲಿ ಸಂಚಾರ ನಡೆಸುತ್ತಿರುವ ವಂದೇ ಭಾರತ್ ರೈಲುಗಳು
ಕರ್ನಾಟಕದಲ್ಲಿ ಒಟ್ಟು ಮೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ನಡೆಸುತ್ತಿವೆ.
1- ಕೆಎಸ್ಆರ್ ಬೆಂಗಳೂರು- ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ( 20661/ 20662 )
2- ಚೆನ್ನೈ- ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ( 20607 / 20608 )
3- ಕಾಚೇಗೌಡ - ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ( 20703 / 20704 )












Click it and Unblock the Notifications