Vande Bharat Express: ಪ್ರಯಾಣಿಕರ ಲಗೇಜ್ ವಿಚಾರವಾಗಿ ಸುದ್ದಿಯಾದ 'ವಿಬಿ' ರೈಲು: ವಿಡಿಯೋ
ಬೆಂಗಳೂರು, ಜನವರಿ 18: ಭಾರತದಲ್ಲಿ ಕೇವಲ ನಾಲ್ಕು ವರ್ಷಗಳ ಹಿಂದೆ ಆರಂಭವಾದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು (Vande Bharat Express Train) ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಪಡೆದು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಸದ್ಯ ಈ ರೈಲು ಜಗಳದ ವಿಚಾರವಾಗಿ ಮುನ್ನೆಲೆಗೆ ಬಂದಿದೆ.
ವಂದೇ ಭಾರತ್ ರೈಲು ಅದರಲ್ಲಿನ ಸೌಲಭ್ಯಗಳು ಮತ್ತು ಸೇವೆಗಳಿಗೆ, ಐಶಾರಾಮಿ ವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಇತ್ತೀಚೆಗೆ ರೈಲಿನಲ್ಲಿ ಲಗೇಜ್ ಇಡುವ ವಿಚಾರದಲ್ಲಿ ಇಬ್ಬರು ಪ್ರಯಾಣಿಕರು ಕೈ ಕೈ ಮಿಲಾಯಿಸುವ ಹಂತಕ್ಕೆ ಆದ ಜಗಳದಿಂದ ರೈಲು ಸುದ್ದಿಯಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಗಳದ ವಿಡಿಯೋ ವೈರಲ್
ನೆಟ್ಟಿಗರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಈ ಬಗೆಗಿನ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇಬ್ಬರು ಪುರುಷರು ಲಗೇಜ್ ಇಡಲು ಸ್ಥಳಾವಕಾಶ ಸಿಗದ ಹಿನ್ನೆಲೆಯಲ್ಲಿ ಸೌಲಭ್ಯ ಕೊರತೆ ಕಾರಣಕ್ಕಾಗಿ ಪರಸ್ಪರ ಜೋರು ಧ್ವನಿಯಲ್ಲಿ ಕಿರುಚಾಡಿದ್ದಾರೆ. ಒಂದೇ ಕೋಚ್‌ನಲ್ಲಿ ಕುಳಿತಿರುವ ಇಬ್ಬರು ಲಗೇಜ್ ವಿಚಾರವಾಗಿ ಜಗಳ ಆಡುವುದನ್ನು ವಿಡಿಯೋದಲ್ಲಿ ಗಮನಿಸಬಹುದು.
ಜಗಳದಲ್ಲಿ ಒಬ್ಬರನ್ನು ಬೆಂಬಲಿಸಲು ಬಂದ ಮಹಿಳೆಯು ಸಹ ವಾದಕ್ಕೆ ಇಳಿಯುತ್ತಾರೆ. ಜತೆಗಿದ್ದ ಅದೇ ಬೋಗಿಯ ಇತರ ಕೆಲವು ಪ್ರಯಾಣಿಕರು ಜಗಳ ಶಾಂತಗೊಳಿಸಲು ಪ್ರಯತ್ನಿಸುತ್ತಾರೆ. ರೈಲ್ವೇ ಪೊಲೀಸ್ ಅಧಿಕಾರಿ ಪರಿಸ್ಥಿತಿ ನಿಯಂತ್ರಿಸಲು ಬರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆದರೆ ಇದು ಯಾವ ಮಾರ್ಗದ ರೈಲಿನಲ್ಲಿ ಆದ ಘಟನೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ವಿಮಾನಗಳಂತೆ ಲಗೇಜ್‌ಗೆ ಮಿತಿ ವಿಧಿಸಬೇಕು
ಸಾಮಾಜಿಕ ಜಾಲತಾಣ Xನಲ್ಲಿ ಈ ವಿಡಿಯೋ ಶೇರ್ ಆಗುತ್ತಿದ್ದಂತೆ ವೀಡಿಯೊ 96,000 ವೀಕ್ಷಣೆ ಪಡೆದಿದೆ. ಸಾವಿರಾರು ಲೈಕ್ಸ್‌ಗಳು ಬಂದಿವೆ. ವಂದೇ ಭಾರತ್ ರೈಲುಗಳಲ್ಲಿ ಇಂತಹ ಘಟನೆಗಳು ತುಂಬಾ ಸಾಮಾನ್ಯ ಎಂಬಂತಾಗಿವೆ. ಬ್ಯಾಗ್ ಇಡಲು ಇಂತಹ ಘಟನೆ ನಡೆಯುತ್ತಿರುತ್ತವೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ವಿಮಾನಗಳಲ್ಲಿ ಇರುವಂತೆ ಪ್ರೀಮಿಯಂ ರೈಲುಗಳಲ್ಲಿ ಲಗೇಜ್ ತರುವವರಿಗೆ ಗಾತ್ರ ಮತ್ತು ತೂಕದ ಮಿತಿಯನ್ನು ವಿಧಿಸಬೇಕು ಎಂದು ಇನ್ನೋಬ್ಬರು ಸಲಹೆ ನೀಡಿದ್ದಾರೆ. ವಿಮಾನಗಳು ರೈಲುಗಳಾಗಿ ಮಾರ್ಪಟ್ಟಿರೆ, ರೈಲುಗಳು ಬಸ್‌ಗಳಾಗಿ ಮಾರ್ಪಟ್ಟಿವೆ ಎಂದು ನೆಟ್ಟಿಗರು ಇದೇ ಪೋಸ್ಟ್‌ಗೆ ಕಾಮೆಂಟ್ ಹಾಕಿದ್ದಾರೆ.
ಮೇಕ್ ಇನ್ ಇಂಡಿಯಾಗೆ 'ವಿಬಿ' ಬಲ
ವಂದೇ ಭಾರತ್ ರೈಲು ಪ್ರಧಾನಿ ಮೋದಿಯವರ 'ಮೇಕ್ ಇನ್ ಇಂಡಿಯಾ' ದೃಷ್ಟಿಕೋನದ ಅಡಿಯಲ್ಲಿ ಸರ್ಕಾರದ ಉಪಕ್ರಮವಾಗಿದೆ. ಪ್ರತಿ ರೈಲು ಸೆಟ್‌ನ ಅಂದಾಜು ವೆಚ್ಚ ₹ 110 ಕೋಟಿ ಎನ್ನಲಾಗಿದೆ. ಸೆಮಿ-ಹೈ ಸ್ಪೀಡ್ ಸಂಪೂರ್ಣ ಸ್ವದೇಶಿ ರೈಲು ಉತ್ಕೃಷ್ಟವಾದ ವಾಯು ಬಲವೈಜ್ಞಾನಿಕ ವಿನ್ಯಾಸ, ಕಾರ್ಯಾಚರಣೆಯಲ್ಲಿ ಬದ್ಧತೆ ಹೊಂದಿವೆ. ಇವು ಐಶಾರಾಮಿ ಒಳಾಂಗಣ ಹೊಂದಿದ್ದು ವೇಗದ ರೈಲುಗಳಾಗಿದ್ದು, ಹಲವು ವಿಶೇಷತೆಗಳನ್ನು ಹೊಂದಿವೆ.












Click it and Unblock the Notifications