30 ದಿನಗಳಲ್ಲಿ ದೇಶದ 75% ಜನರಿಗೆ ಒಂದು ಡೋಸ್ ಲಸಿಕೆಯನ್ನಾದರೂ ನೀಡಲೇಬೇಕು; ಐಸಿಎಂಆರ್
ನವದೆಹಲಿ, ಜುಲೈ 19: ದೇಶದಲ್ಲಿ ಆಗಸ್ಟ್ ತಿಂಗಳ ಕೊನೆಯ ವೇಳೆಗೆ ಕೊರೊನಾ ಮೂರನೇ ಅಲೆ ಕಾಣಿಸಿಕೊಳ್ಳುವ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ. ಮೂರನೇ ಅಲೆ ತಡೆಗೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ. ಕೊರೊನಾ ಲಸಿಕೆ ಈ ಸೋಂಕು ನಿವಾರಣಾ ಕ್ರಮಗಳಲ್ಲಿ ಪ್ರಮುಖವಾಗಿದ್ದು, ಆದಷ್ಟು ಬೇಗನೇ, ಹೆಚ್ಚಿನ ಜನಸಂಖ್ಯೆಗೆ ಲಸಿಕೆ ನೀಡಿದರೆ ಮಾತ್ರ ಮೂರನೇ ಅಲೆ ಸುಧಾರಣೆ ಸಾಧ್ಯ ಎಂದು ಐಸಿಎಂಆರ್ ಹೇಳಿದೆ.
ಈ ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ಸರ್ಕಾರಕ್ಕೆ ಮಾಹಿತಿ ನೀಡಿದ್ದು, ಇನ್ನು ಮೂವತ್ತು ದಿನಗಳಲ್ಲಿ ಭಾರತದ ಒಟ್ಟಾರೆ ಜನಸಂಖ್ಯೆಯ 75%ಗೆ ಕೊರೊನಾ ಲಸಿಕೆ ನೀಡಿದರೆ ಮಾತ್ರ ಕೊರೊನಾ ಮೂರನೇ ಅಲೆಯ ನಿಯಂತ್ರಣ ಸಾಧ್ಯ ಎಂದು ಎಚ್ಚರಿಸಿದೆ. ಮುಂದೆ ಓದಿ...

'ತಿಂಗಳಲ್ಲಿ 75% ಜನಸಂಖ್ಯೆಗೆ ಒಂದು ಡೋಸ್ ಲಸಿಕೆಯನ್ನಾದರೂ ನೀಡಿ"
ಕೊರೊನಾ ಮೂರನೇ ಅಲೆ ಕುರಿತು ಐಸಿಎಂಆರ್ ಅಧ್ಯಯನ ನಡೆಸಿದ್ದು, ಲ್ಯಾನ್ಸೆಟ್‌ನಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ. ಅದರಲ್ಲಿ, "ಇನ್ನು ಮೂವತ್ತು ದಿನಗಳಲ್ಲಿ 75% ಜನಸಂಖ್ಯೆಗೆ ಒಂದು ಡೋಸ್ ಲಸಿಕೆಯನ್ನಾದರೂ ನೀಡಿದರೆ ಮಾತ್ರ ಕೊರೊನಾ ಮೂರನೇ ಅಲೆಯಲ್ಲಿ ಮರಣ ಪ್ರಮಾಣವನ್ನು ತಗ್ಗಿಸಲು ಸಾಧ್ಯ" ಎಂದು ತಿಳಿಸಿದೆ.

ಮರಣ ಪ್ರಮಾಣವನ್ನು 37% ತಗ್ಗಿಸಬಹುದು
ಈ ಒಂದು ತಿಂಗಳ ಅವಧಿಯಲ್ಲಿ ದೇಶದ ಮುಕ್ಕಾಲು ಜನಸಂಖ್ಯೆಗೆ ಒಂದು ಡೋಸ್ ಕೊರೊನಾ ಲಸಿಕೆಯನ್ನು ನೀಡಿದರೆ, ಲಕ್ಷಣಸಹಿತ ಸೋಂಕಿನ ಪ್ರಕರಣದಲ್ಲಿ 37% ಮರಣ ಪ್ರಮಾಣವನ್ನು ತಗ್ಗಿಸಬಹುದು. ಕೊರೊನಾ ಮೂರನೇ ಅಲೆ ಆರಂಭಿಕ ಹಂತದಲ್ಲಿನ ಜಿಲ್ಲೆಗಳಲ್ಲಿ 26% ಮರಣ ಪ್ರಮಾಣವನ್ನು ತುರ್ತಾಗಿ ಲಸಿಕೆ ನೀಡುವುದರಿಂದ ತಗ್ಗಿಸಬಹುದಾಗಿದೆ. ಬೇರೆ ಆಯ್ಕೆಗಳು ಸದ್ಯಕ್ಕೆ ಲಭ್ಯವಿಲ್ಲದಾಗಿದೆ ಎಂದು ತಿಳಿಸಿದೆ.

ಐಸಿಎಂಆರ್ ಸೋಂಕು ತಜ್ಞರ ಎಚ್ಚರಿಕೆ
ಲಸಿಕಾ ಕಾರ್ಯಕ್ರಮವನ್ನು ಚುರುಕುಗೊಳಿಸುವುದಷ್ಟೇ ಈಗಿರುವ ದಾರಿ ಎಂದು ಐಸಿಎಂಆರ್ ಹೇಳಿದ್ದು, ಪಾಸಿಟಿವಿಟಿ ದರ 0.5% ಹೆಚ್ಚಾಗುತ್ತಿದ್ದಂತೆ ಆ ಪ್ರದೇಶಗಳಲ್ಲಿ ಕೊರೊನಾ ಪರೀಕ್ಷೆ ಹಾಗೂ ಲಸಿಕಾ ಕಾರ್ಯಕ್ರಮದ ಮೇಲೆ ನಿಗಾ ವಹಿಸಿ ಕೊರೊನಾ ಹರಡುವಿಕೆ ತಡೆಯಬೇಕು ಎಂದು ಸಲಹೆ ನೀಡಿದೆ.
"ಈ ಮೂವತ್ತು ದಿನಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಹೆಚ್ಚಿನ ಜನಸಂಖ್ಯೆಗೆ ಒಂದು ಡೋಸ್ ಲಸಿಕೆಯನ್ನಾದರೂ ನೀಡಿದರೆ, ಅದರಲ್ಲೂ 18 ವರ್ಷ ಮೇಲ್ಪಟ್ಟವರಿಗೆ ನೀಡಿದರೆ ಮಾತ್ರ ಈ ಅಲೆಯ ಪರಿಣಾಮವನ್ನು ನಿರೀಕ್ಷಿತ ಪ್ರಮಾಣದಲ್ಲಿ ನಿಯಂತ್ರಣಕ್ಕೆ ತರಲು ಸಾಧ್ಯ. ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಇದೊಂದೇ ದಾರಿ" ಎಂದು ಐಸಿಎಂಆರ್ ಸೋಂಕು ತಜ್ಞ ಡಾ. ಸಮೀರನ್ ಪಾಂಡಾ ತಿಳಿಸಿದ್ದಾರೆ.
ದೇಶದಲ್ಲಿ 40 ಕೋಟಿ ಕೊರೊನಾ ಲಸಿಕೆ ವಿತರಣೆ
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 51,01,567 ಕೊರೊನಾ ಲಸಿಕೆಗಳನ್ನು ನೀಡಲಾಗಿದ್ದು, ಇದುವರೆಗೂ 40 ಕೋಟಿ ಡೋಸ್‌ಗಳ ಲಸಿಕೆ ನೀಡಲಾಗಿದೆ. ಆರೋಗ್ಯ ಹಾಗೂ ಕುಟುಂಬ ಇಲಾಖೆ ಮಾಹಿತಿ ಪ್ರಕಾರ, ದೇಶದಲ್ಲಿ 50,46,387 ಸೆಷನ್‌ಗಳಲ್ಲಿ 40,49,31,715 ಕೊರೊನಾ ಲಸಿಕೆಗಳನ್ನು ಪೂರೈಸಲಾಗಿದೆ.












Click it and Unblock the Notifications