ಉತ್ತರಾಖಂಡ ಚುನಾವಣೆ; ಅಖಿಲೇಶ್, ಜಯಾ ಬಚ್ಚನ್ ಸಮಾಜವಾದಿ ಪಕ್ಷದ ಸ್ಟಾರ್ ಪ್ರಚಾರಕರು
ಡೆಹ್ರಾಡೂನ್, ಜನವರಿ 26: ಮುಂದಿನ ತಿಂಗಳು ನಡೆಯುವ ಉತ್ತರಾಖಂಡ ವಿಧಾನಸಭಾ ಚುನಾವಣೆಗೆ 15 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಸಮಾಜವಾದಿ ಪಕ್ಷ (ಎಸ್‌ಪಿ) ಮಂಗಳವಾರ ಪ್ರಕಟಿಸಿದೆ.
ಈ ಪಟ್ಟಿಯಲ್ಲಿ ಸಮಾಜವಾದಿ ಪಕ್ಷ ಮುಖ್ಯಸ್ಥ ಅಖಿಲೇಶ್ ಯಾದವ್, ಪಕ್ಷದ ಉಪಾಧ್ಯಕ್ಷ ಕಿರಣ್ಮಯ್ ನಂದಾ, ನಟಿ-ರಾಜಕಾರಣಿ ಜಯಾ ಬಚ್ಚನ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರಾಖಂಡ ರಾಜ್ಯ ಉಸ್ತುವಾರಿ ರಾಜೇಂದ್ರ ಚೌಧರಿ ಹೆಸರು ಸೇರಿದೆ.
ಇತರ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸುರೇಶ್ ಪರಿಹಾರ್, ಹುಸೇನ್ ಅಹ್ಮದ್, ಶೋಯೆಬ್ ಅಹ್ಮದ್, ಕುಲದೀಪ್ ಭುಲ್ಲರ್ ಮತ್ತು ರಾಕೇಶ್ ಪಾಠಕ್ ಸೇರಿದ್ದಾರೆ.

ಮುಂಬರುವ ಚುನಾವಣೆಗೆ ಉತ್ತರಾಖಂಡದ 30 ವಿಧಾನಸಭಾ ಸ್ಥಾನಗಳ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಮಾಜವಾದಿ ಪಕ್ಷವು ಈಗಾಗಲೇ ಬಿಡುಗಡೆ ಮಾಡಿದೆ. 30 ಅಭ್ಯರ್ಥಿಗಳ ಪೈಕಿ ಮೂವರು ಮಹಿಳಾ ಅಭ್ಯರ್ಥಿಗಳಿದ್ದಾರೆ. ಬಾಗೇಶ್ವರ ಕ್ಷೇತ್ರದಿಂದ ಲಕ್ಷ್ಮೀದೇವಿ ಕಣಕ್ಕಿಳಿದಿದ್ದಾರೆ. ಸುನೀತಾ ರಿಖಾರಿ ರಾಣಿಖೇತ್ ಕ್ಷೇತ್ರದಿಂದ ಮತ್ತು ಮನೀಶಾ ಬಾಜ್‌ಪುರ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧಿಸಲಿದ್ದಾರೆ.
ಫೆ.14ರಂದು ಚುನಾವಣೆ
ಉತ್ತರಾಖಂಡದಲ್ಲಿ ಜನವರಿ 21ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಸಲು ಜನವರಿ 21ರಿಂದ ಜ.28ರವರೆಗೆ ಅವಕಾಶವಿರುತ್ತದೆ. ಜನವರಿ 29ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಜನವರಿ 31 ಕೊನೆಯ ದಿನಾಂಕವಾಗಿದೆ.
ಉತ್ತರಾಖಂಡ ರಾಜ್ಯದ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಫೆ.14ರಂದು ಮತದಾನ ನಡೆಯಲಿದೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟ ಆಗಲಿದೆ. ಉತ್ತರಾಖಂಡ ಅಭ್ಯರ್ಥಿಗಳ ವೆಚ್ಚದ ಮಿತಿ 40 ಲಕ್ಷ ರೂ. ಇರಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. 2017ರ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 70 ಸ್ಥಾನಗಳ ಪೈಕಿ ಬಿಜೆಪಿ 57 ಸ್ಥಾನಗಳನ್ನು ಗೆದ್ದಿತ್ತು.












Click it and Unblock the Notifications