ಉತ್ತರಾಖಂಡ ಚುನಾವಣೆ: 50 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಅಂತಿಮ- ಹರೀಶ್ ರಾವತ್
ನವದೆಹಲಿ, ಜನವರಿ 14: ಉತ್ತರಾಖಂಡ ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸಿದ್ದು, ಆಡಳಿತರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಚುನಾವಣೆ ಎದುರಿಸಲು ಸನ್ನದ್ಧವಾಗುತ್ತಿವೆ. ಅದರಲ್ಲೂ ಕಾಂಗ್ರೆಸ್ ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಗಂಭೀರವಾಗಿ ತೆಗೆದುಕೊಂಡಿದೆ.
ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿಯು ಗುರುವಾರ ಸುಮಾರು 10 ಗಂಟೆಗಳ ಸುದೀರ್ಘ ಸಭೆಯಲ್ಲಿ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ 50 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಚರ್ಚೆ ನಡೆಸಿತು. ಆದರೆ, ಈ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಕುರಿತು ಶನಿವಾರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. 10 ಗಂಟೆಗಳ ಕಾಲ ನಡೆದ ಸಭೆ ಗುರುವಾರ ರಾತ್ರಿ 11:15ಕ್ಕೆ ಮುಕ್ತಾಯವಾಯಿತು.
ಸಭೆಯು ರಾತ್ರಿ 11:15ಕ್ಕೆ ಮುಕ್ತಾಯಗೊಂಡ ನಂತರ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಹರೀಶ್ ರಾವತ್ ಮಾತನಾಡಿ, "ನಾವು ಸುಮಾರು 50 ಸ್ಥಾನಗಳಿಗೆ ಪರಸ್ಪರ ಅಭಿಪ್ರಾಯಗಳನ್ನು ತಲುಪಿಸಿದ್ದೇವೆ. ನಾವು ಶನಿವಾರ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ. ಸಿಇಸಿ ಸಭೆಯು ಶನಿವಾರ ಇದೆ,'' ಎಂದು ಹೇಳಿದರು.

ಸಭೆಯಲ್ಲಿ ಹರೀಶ್ ರಾವತ್ ಜೊತೆಗೆ ಸ್ಕ್ರೀನಿಂಗ್ ಕಮಿಟಿಯ ಅಧ್ಯಕ್ಷ ಅವಿನಾಶ್ ಪಾಂಡೆ, ಪಿಸಿಸಿ ಮುಖ್ಯಸ್ಥ ಗಣೇಶ್ ಗೋಡಿಯಾಲ್ ಉಪಸ್ಥಿತರಿದ್ದರು. ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ, ಪಕ್ಷವು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹರೀಶ್ ರಾವತ್ ಸ್ಪಷ್ಟಪಡಿಸಿದರು.
"ಮೊದಲ ಸ್ಕ್ರೀನಿಂಗ್ ಸಭೆಯ ನಂತರ, ಸ್ವೀಕರಿಸಿದ ಪ್ರತಿಕ್ರಿಯೆಯನ್ನು ನಾವು ಮೌಲ್ಯಮಾಪನ ಮಾಡಿದ್ದೇವೆ ಮತ್ತು ಶನಿವಾರ ಮತ್ತೆ ನಾವು ಎಲ್ಲಾ ಕ್ಷೇತ್ರಗಳ ಮೇಲೆ ಸಭೆ ನಡೆಸಿ ಮೌಲ್ಯಮಾಪನ ಮಾಡಿ, ನಾವು ಅಂತಿಮ ರೂಪವನ್ನು ನೀಡುತ್ತೇವೆ. ಸ್ಕ್ರೀನಿಂಗ್ ಸಮಿತಿಯ ಅಂದಾಜು 50 ಸೀಟು ಒಪ್ಪಂದವನ್ನು ಮಾಡಲಾಗಿದೆ,'' ಅವರು ತಿಳಿಸಿದರು. ಕಾಂಗ್ರೆಸ್ ಪಕ್ಷದ ಮುಂದಿನ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆ ಶನಿವಾರ ನಡೆಯಲಿದೆ.
ಫೆ.14ರಂದು ಮತದಾನ
ಉತ್ತರಾಖಂಡದಲ್ಲಿ ಜನವರಿ 21ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಸಲು ಜನವರಿ 21ರಿಂದ ಜ.28ರವರೆಗೆ ಅವಕಾಶವಿರುತ್ತದೆ. ಜನವರಿ 29ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಜನವರಿ 31 ಕೊನೆಯ ದಿನಾಂಕವಾಗಿದೆ.
ಉತ್ತರಾಖಂಡ ರಾಜ್ಯದ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಫೆ.14ರಂದು ಮತದಾನ ನಡೆಯಲಿದೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟ ಆಗಲಿದೆ. ಉತ್ತರಾಖಂಡ ಅಭ್ಯರ್ಥಿಗಳ ವೆಚ್ಚದ ಮಿತಿ 40 ಲಕ್ಷ ರೂ. ಇರಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. 2017ರ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 70 ಸ್ಥಾನಗಳ ಪೈಕಿ ಬಿಜೆಪಿ 57 ಸ್ಥಾನಗಳನ್ನು ಗೆದ್ದಿತ್ತು.
ಜ.18ರಂದು ಕಾಂಗ್ರೆಸ್‌ನ ಮೊದಲ ಪಟ್ಟಿ ಬಿಡುಗಡೆ
ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ 50 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಜನವರಿ 18ರಂದು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಪಕ್ಷದ ಚುನಾವಣಾ ಸ್ಕ್ರೀನಿಂಗ್ ಸಮಿತಿಯು ದೆಹಲಿಯಲ್ಲಿ ಸಭೆ ನಡೆಸಲಿದ್ದು, ಎಲ್ಲಾ 70 ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿಗೆ ಅಂತಿಮ ರೂಪ ನೀಡಲಿದೆ. ಅಂತಿಮ ಪಟ್ಟಿಯನ್ನು ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಅನುಮೋದನೆಗಾಗಿ ಕಳುಹಿಸಲಾಗುತ್ತದೆ.
"70 ಅಭ್ಯರ್ಥಿಗಳ ಪಟ್ಟಿಗೆ ಅಂತಿಮ ರೂಪ ನೀಡಲು ಚುನಾವಣಾ ಸ್ಕ್ರೀನಿಂಗ್ ಸಮಿತಿಯು ನವದೆಹಲಿಯಲ್ಲಿ ಸಭೆ ಸೇರಲಿದೆ. ಜನವರಿ 21ರಂದು ನಾಮಪತ್ರ ಸಲ್ಲಿಕೆ ಪ್ರಾರಂಭವಾಗುವ ಮೊದಲು ನಾವು ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತೇವೆ,'' ಎಂದು ಪ್ರಧಾನ ಕಾರ್ಯದರ್ಶಿ (ಸಂಘಟನೆ) ಮಥುರಾ ದತ್ ಜೋಶಿ ತಿಳಿಸಿದ್ದಾರೆ.
Recommended Video
ಮೊದಲ ಪಟ್ಟಿಯಲ್ಲಿ ಹಾಲಿ ಶಾಸಕರ ಹೆಸರು ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ 10 ಸಾವಿರಕ್ಕಿಂತ ಕಡಿಮೆ ಮತಗಳ ಅಂತರದಿಂದ ಸೋತವರ ಹೆಸರು ಇರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.












Click it and Unblock the Notifications