ಲೋಕಸಭೆ ಫಲಿತಾಂಶ : ಮ್ಯಾಜಿಕಲ್ ನಂಬರ್ ದಾಟಿದ ಬಿಜೆಪಿ ಮೈತ್ರಿಕೂಟ
ನವದೆಹಲಿ, ಮೇ 23 : ವಿರೋಧಿಗಳ ಎಲ್ಲ ನಿರೀಕ್ಷೆಗಳನ್ನು ಧೂಳಿಪಟ ಮಾಡಿ, ನರೇಂದ್ರ ಮೋದಿ ಅಲೆಯ ಮೇಲೆ ಮತ್ತೆ ತೇಲುತ್ತಿರುವ ಭಾರತೀಯ ಜನತಾ ಪಕ್ಷ, ಬಹುಮತಕ್ಕೆ ಬೇಕಾಗಿರುವ ಮ್ಯಾಜಿಕಲ್ ನಂಬರ್ 272 ಅನ್ನು ಅತ್ಯಂತ ಸುಲಭವಾಗಿ ದಾಟಿದೆ.
ಸದ್ಯದ ಟ್ರೆಂಡ್ ನಂತೆ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತವಾಗಿದೆ. ರಾಹುಲ್ ಗಾಂಧಿ ನೇತೃತ್ವದ ವಿರೋಧ ಪಕ್ಷಗಳು ಇನ್ನೈದು ವರ್ಷ ವಿರೋಧ ಪಕ್ಷದ ಸೀಟುಗಳಲ್ಲಿ ಆಸೀನರಾಗುವುದು ನಿಕ್ಕಿಯಾಗಿದೆ.
ಬೆಳಿಗ್ಗೆ 9.50ರ ಹೊತ್ತಿಗೆ ಬಿಜೆಪಿ ಮತ್ತು ಅಂಗ ಪಕ್ಷಗಳು 320 ಸ್ಥಾನಗಳಲ್ಲಿ ಮುನ್ನಡೆ ಕಂಡಿದ್ದು, ಕಾಂಗ್ರೆಸ್ ಮೈತ್ರಿಪಕ್ಷಗಳು 90ರ ಆಸುಪಾಸಿನಲ್ಲಿ ಒದ್ದಾಡುತ್ತಿವೆ. ಬಿಜೆಪಿಯನ್ನು ಮೂಲೆಗೆ ಒತ್ತಲು ಭಾರೀ ತಂತ್ರಗಾರಿಕೆ ನಡೆಸಿದ್ದ ಮಹಾಘಟಬಂಧನ್ ಕೂಡ ಭಾರೀ ಮುಖಭಂಗ ಅನುಭವಿಸಲಿದೆ.

ಕಳೆದ 2014ರ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ 282 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ ಕೇವಲ 44ರಲ್ಲಿ ಮಾತ್ರ ಜಯ ಕಂಡಿತ್ತು. ಆದರೆ, ಈಬಾರಿ ಕಾಂಗ್ರೆಸ್ ತನ್ನ ಟ್ಯಾಲಿಯನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆಯಿದೆ. ಬಿಜಿಪಿ ಈಗಿನ ಟ್ರೆಂಡ್ ನಂತೆ ಈಗಾಗಲೆ 280 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಫಲಿತಾಂಶ ಹೀಗೆಯೇ ಮುಂದುವರಿದರೆ ರಾಹುಲ್ ಗಾಂಧಿ ಅವರಿಗೆ ಭಾರೀ ಮುಖಭಂಗವಾಗಲಿದೆ. ನರೇಂದ್ರ ಮೋದಿ ವಿರುದ್ಧ ಅವರು ನಡೆಸಿದ್ದ ದ್ವೇಷದ ಹೋರಾಟ ಯಾವುದೇ ಪ್ರತಿಫಲವನ್ನು ನೀಡಿಲ್ಲ. ಮಹಾಘಟಬಂಧನ್ ಕೂಡ ಜನರ ಮುಂದೆ ತಲೆತಗ್ಗಿಸುವಂತಾಗಿದೆ.












Click it and Unblock the Notifications