UPS: ಸರ್ಕಾರಿ ನೌಕರರ ಆರ್ಥಿಕ ದೃಢತೆಗೆ ಯುಪಿಎಸ್ ಜಾರಿ, ಮೋದಿ
ನವದೆಹಲಿ, ಆಗಸ್ಟ್ 25: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಶನಿವಾರ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್)ಗೆ ಅನುಮೋದನೆ ನೀಡಿದೆ. ಹಳೆ ಪಿಂಚಣಿ ಯೋಜನೆ ಜಾರಿಗೆ ಒತ್ತಾಯ ಮಾಡುತ್ತಿರುವ ಹೊತ್ತಿನಲ್ಲಿಯೇ ಸಚಿವ ಸಂಪುಟ ಸಭೆಯಲ್ಲಿ ಯುಪಿಎಸ್‌ಗೆ ಒಪ್ಪಿಗೆ ನೀಡಲಾಗಿದೆ. ಈ ಯೋಜನೆಯಿಂದ ಸುಮಾರು 23 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ.
ಏಪ್ರಿಲ್ 1, 2025ರಿಂದ ಏಕೀಕೃತ ಪಿಂಚಣಿ ಯೋಜನೆ ಜಾರಿಗೆ ಬರಲಿದೆ. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಅಡಿಯಲ್ಲಿರುವ ಕೇಂದ್ರ ಸರ್ಕಾರಿ ನೌಕರರು ಅದೇ ಯೋಜನೆಯಲ್ಲಿ ಮುಂದುವರೆಯಬಹುದು ಅಥವ ಯುಪಿಎಸ್ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಈ ಯೋಜನೆಯಿಂದ ಸುಮಾರು 23 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗಲಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ನೌಕರರ ಆರ್ಥಿಕ ಭದ್ರತೆ: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಪ್ರಧಾನಿ ನರೇಂದ್ರ ಮೋದಿ, "ಏಕೀಕೃತ ಪಿಂಚಣಿ ಯೋಜನೆ ಸರ್ಕಾರಿ ನೌಕರರಿಗೆ ಗೌರವ ಮತ್ತು ಆರ್ಥಿಕ ದೃಢತೆಯ ಭರವಸೆ ನೀಡುತ್ತದೆ, ನೌಕರರ ಭವಿಷ್ಯವನ್ನು ಸದೃಢಗೊಳಿಸುವ ನಮ್ಮ ಬದ್ಧತೆ ಇದಾಗಿದೆ" ಎಂದು ಹೇಳಿದ್ದಾರೆ.
ಮುಂದಿನ ವರ್ಷದ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಮಾರ್ಚ್ 31, 2025ರ ಒಳಗೆ, ಬಳಿಕ ನಿವೃತ್ತರಾಗುವ ಎಲ್ಲಾ ಕೇಂದ್ರ ಸರ್ಕಾರಿ ನೌಕರರು ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್)ಗೆ ಅರ್ಹರು. ನರೇಂದ್ರ ಮೋದಿ ಮತ್ತೊಂದು ಟ್ವೀಟ್‌ನಲ್ಲಿ, ಕೇಂದ್ರ ಸರ್ಕಾರಿ ನೌಕರರು ಯುಪಿಎಸ್ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಹಣಕಾಸು ಇಲಾಖೆ ಹಣಕಾಸು ಕಾರ್ಯದರ್ಶಿ ಟಿ. ವಿ. ಸೋಮನಾಥನ್ ನೇತೃತ್ವದ ಸಮಿತಿಯನ್ನು ರಚನೆ ಮಾಡಿ, ಸದ್ಯ ಇರುವ ಸರ್ಕಾರಿ ನೌಕರರ ಪಿಂಚಣಿ ವ್ಯವಸ್ಥೆ ಪರಿಷ್ಕರಣೆ ಕುರಿತು ಅಧ್ಯಯನ ಮಾಡಲು ಸೂಚಿಸಿತ್ತು. ಏಪ್ರಿಲ್ 1, 2004ರ ಬಳಿಕ ಸರ್ಕಾರಿ ಸೇವೆಗೆ ಸೇರಿದ ಎಲ್ಲಾ ನೌಕರರು ಎನ್‌ಪಿಎಸ್ ವ್ಯಾಪ್ತಿಯಲ್ಲಿದ್ದಾರೆ.
ಎನ್‌ಪಿಎಸ್ ವ್ಯಾಪ್ತಿಯಲ್ಲಿರುವ ನೌಕರರಿಗೆ ಎರಡು ಪಿಂಚಣಿ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಪ್ರಮುಖವಾಗಿ ಯುಪಿಎಸ್ 25 ವರ್ಷ ಸೇವೆ ಸಲ್ಲಿಸಿದ ಎಲ್ಲಾ ಉದ್ಯೋಗಿಗಳಿಗೆ ಪಿಂಚಣಿಯನ್ನು ಖಚಿತಪಡಿಸುತ್ತದೆ. 10 ವರ್ಷ ಸೇವೆ ಸಲ್ಲಿಸಿದ ಉದ್ಯೋಗಿಗಳು ಪ್ರತಿ ತಿಂಗಳು 10 ಸಾವಿರ ರೂ. ಪಿಂಚಣಿಯನ್ನು ಪಡೆಯಬಹುದು.
ಏಕೀಕೃತ ಪಿಂಚಣಿ ಯೋಜನೆ ಹೆಚ್ಚುವರಿಯಾಗಿ ಸರ್ಕಾರಿ ನೌಕರ ಮರಣ ಹೊಂದಿದರೆ ಮುಂದಿನ ಆರ್ಥಿಕ ವರ್ಷದಿಂದ ಕೌಟುಂಬಿಕ ಪಿಂಚಣಿಯ ಭರವಸೆ ನೀಡುತ್ತದೆ. ನೌಕರನ ಪಿಂಚಣಿಯ ಶೇ 60ರಷ್ಟು ಲೆಕ್ಕಾಚಾರದೊಂದಿಗೆ ಕೌಟುಂಬಿಕ ಪಿಂಚಣಿ ಆತ ಅಥವ ಆಕೆಯ ಮರಣದೊಂದಿಗೆ ಸಿಗುತ್ತದೆ.
ಪಿಟಿಐ ವರದಿಯಂತೆ ಬಿಜೆಪಿ ಆಡಳಿತ ಇರುವ ರಾಜ್ಯಗಳು ಈ ಪಿಂಚಣಿ ಯೋಜನೆಯನ್ನು ಸ್ವಾಗತಿಸಿವೆ. ಹಳೆ ಪಿಂಚಣಿ ಯೋಜನೆ ಮರು ಸ್ಥಾಪನೆಗೆ ಬೇಡಿಕೆ ಇಡುತ್ತಿರುವ ಸಂದರ್ಭದಲ್ಲಿಯೇ ಕೇಂದ್ರ ಸರ್ಕಾರ ಏಕೀಕೃತ ಪಿಂಚಣಿ ಯೋಜನೆಗೆ ಅನುಮೋದನೆ ನೀಡಿದೆ.












Click it and Unblock the Notifications