ಮೌನ ಪ್ರಧಾನಿಯ ವಿದೇಶ ಪ್ರವಾಸಗಳು ಇನ್ನೂ ಎಷ್ಟೋ!?
ಬೆಂಗಳೂರು, ಅ.23: ದಿವ್ಯ ಮೌನಿ, ಪ್ರಧಾನಿ ಮನಮೋಹನ್ ಸಿಂಗ್ ಅವರು 2004 ರಿಂದೀಚೆಗೆ ಸತತವಾಗಿ ಅನೇಕ ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದು ತತ್ಸಂಬಂಧ ಅವರ ಪ್ರವಾಸದ ಖರ್ಚು 640 ಕೋಟಿ ರೂ ರೂ ಮೀರಿದೆ.
Flying Sikh: ವಾಸ್ತವವಾಗಿ ಪ್ರಧಾನಿ ಸಿಂಗ್ ಅವರಿಗೆ ಪ್ರವಾಸವೆಂದರೆ ಅಲರ್ಜಿ. ಆದರೂ ಯುಪಿಎ 2ನೇ ಅವಧಿಯಲ್ಲಿ ಸಂಸತ್ತಿನಲ್ಲಿ ಮಹತ್ವದ ಅಧಿವೇಶನಗಳು ನಡೆಯುತ್ತಿರುವಾಗಲೂ ಪ್ರಧಾನಿ ಸಿಂಗ್ ಅವರು 15 ವಿದೇಶ ಪ್ರವಾಸಗಳನ್ನು ಮಾಡಿಬಂದಿದ್ದಾರೆ. ಮತ್ತು ಈಗಲೂ ವಿದೇಶದಲ್ಲೇ (ಮಾಸ್ಕೋ) ಇದ್ದಾರೆ. ಆಂತರಿಕವಾಗಿ ಭಾರತವು ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾಗಲೂ ಪ್ರಧಾನಿ ಸಿಂಗ್ ವಿದೇಶಕ್ಕೆ ತೆರಳಿದ್ದಾರೆ.
ನೆಹರೂ, ಇಂದಿರಾ ಗಾಂಧಿ ಅಥವಾ ವಾಜಪೇಯಿ ಅವರುಗಳು ಸಂಸತ್ತು ಅಧಿವೇಶನ ನಡೆಯುತ್ತಿರುವಾಗ ಎಂದಿಗೂ ವಿದೇಶ ಪ್ರವಾಸ ಕೈಗೊಂಡ ನಿದರ್ಶನಗಳಿಲ್ಲ ಎನ್ನುತ್ತಾರೆ ಬಿಜೆಪಿ ಹಿರಿಯ ವಕ್ತಾರ ರವಿಶಂಕರ್ ಪ್ರಸಾದ್. ಸಂಸತ್ತಿನಲ್ಲಿ ಮಾತನಾಡಲು ಅವರಿಗೆ ಅವಕಾಶ ಇಲ್ಲದ ಕಾರಣ ಪಲಾಯನವಾದವಾಗಿ ಪ್ರಧಾನಿ ಸಿಂಗ್ ಹೆಚ್ಚಾಗಿ ವಿದೇಶಕ್ಕೆ ತೆರಳುತ್ತಾರೆ ಎಂದೂ ಅವರು ಆರೋಪಿಸುತ್ತಾರೆ.
ಮೌನಿ ಮನಮೋಹನ್ ಸಿಂಗ್ ಅವರ ಪ್ರವಾಸದ ಬಗ್ಗೆ ಮತ್ತೊಂದಿಷ್ಟು ಕುತೂಹಲಕಾರಿ ವಿವರ ಹೀಗಿದೆ: ಪ್ರಧಾನಿ ಮನಮೋಹನ್ ಸಿಂಗ್ ಎಂದಿಗೂ ರಾತ್ರಿ ವೇಳೆ ವಿಮಾನದಲ್ಲಿ ಸಂಚರಿಸಲು ಒಪ್ಪುವುದಿಲ್ಲ. ಭೂರಿ ಭೋಜನಕ್ಕೆ ಒಪ್ಪದ ಸಿಂಗ್, ಸಾತ್ವಿಕ ಆಹಾರ ಪ್ರಿಯರು. ಪ್ರಧಾನಿ ಸಿಂಗ್ ವಿಮಾನವೇರಿದರೆ ಸಾಕು ಪುಸ್ತಕ ತೆರೆದಿಟ್ಟುಕೊಂಡು ಓದತೊಡಗುತ್ತಾರೆ.

ಪ್ರಾನ್ ಅಂದರೆ ವಾಜಪೇಯಿಗೆ ಪ್ರಾಣ:
ಆದರೆ ಹಿಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇದಕ್ಕೆ ತದ್ವಿರುದ್ಧ. ಹುರಿದ ಪ್ರಾನ್ ಅಂದರೆ ವಾಜಪೇಯಿಗೆ ಪ್ರಾಣ. ವಿಮಾನದಲ್ಲಿ ಬಾಲಿವುಡ್ ಸಿನಿಮಾಗಳನ್ನು ನೋಡುವುದೆಂದರೆ ಅವರಿಗೆ ಪಂಚಪ್ರಾಣ. 1999 ರಿಂದ 2004ರವರೆಗೆ ಪ್ರಧಾನಿಯಾಗಿದ್ದಾಗ 35 ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದ ವಾಜಪೇಯಿ ಅವರ ವಿದೇಶ ಪ್ರವಾಸ ಖರ್ಚು 185 ಕೋಟಿ ರೂ. ಗೆ ತಲುಪಿತ್ತು.

Roaming PM Singh:
2004 ರಿಂದೀಚೆಗೆ ಒಂದೇ ವಿದೇಶ ಪ್ರವಾಸಗಳನ್ನು ಮಾಡುತ್ತಿರುವ ಪ್ರಧಾನಿ ಸಿಂಗ್ ಅವರು ಅತಿಹೆಚ್ಚು ವಿದೇಶ ಪ್ರವಾಸ ಮಾಡಿರುವ ಪ್ರಧಾನಿ ಎಂಬ ಕುಖ್ಯಾತಿಗೂ ಪಾತ್ರರಾಗಿದ್ದಾರೆ. 70ಕ್ಕೂ ಹೆಚ್ಚು ಬಾರಿ ಅವರು ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದಾರೆ. ಇದಕ್ಕಾಗಿ 640 ಕೋಟಿ ರೂ. ಸಹ ಖರ್ಚಾಗಿದೆ. ಹಾಗಾಗಿ ಪ್ರಧಾನಿ ಸಿಂಗ್ ಅವರಿಗೆ roaming PM ಅಥವಾ non-resident Prime Minister ಎಂಬ ಅಡ್ಡಹೆಸರೂ ಇದೆ.

ಪ್ರಧಾನಿ ಸಿಂಗ್ ರಿಂದ ಇನ್ನೂ ಅನೇಕ ಪ್ರವಾಸಗಳು
ಪ್ರಸ್ತುತ 5 ದಿನಗಳ ರಷ್ಯಾ ಮತ್ತು ಚೀನಾ ಪ್ರವಾಸಗಳು 73 ನೆಯದ್ದು. ಇಷ್ಟೇ ಅಲ್ಲ ಮುಂದಿನ ವರ್ಷ ಅಧಿಕಾರದಿಂದ ಕೆಳಗಿಳಿಯುವ ವೇಳೆಗೆ ಅವರು ಇನ್ನೂ ಅನೇಕ ವಿದೇಶ ಪ್ರವಾಸಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. ಕೊಲ್ಲಿ ರಾಷ್ಟ್ರವೊಂದಕ್ಕೆ ಈಗಾಗಲೇ ಅವರ ಪ್ರವಾಸ ನಿಗದಿಯಾಗಿದೆ.

ಪ್ರಧಾನಿ ಸಿಂಗ್ ಅವರದ್ದು ಔಪಚಾರಿಕ ಪ್ರವಾಸಗಳಷ್ಟೇ
ರಾಜಕೀಯ ಅರ್ಥಶಾಸ್ತ್ರಜ್ಞರ ಪ್ರಕಾರ ಪ್ರಧಾನಿ ಸಿಂಗ್ ಅವರ ಈ ವಿದೇಶ ಪ್ರವಾಸಗಳ ಫಲಶ್ರುತಿ ಹೇಳಿಕೊಳ್ಳುವಷ್ಟೇನೂ ಇಲ್ವಂತೆ. ಇವುಗಳಲ್ಲಿ ಬಹುತೇಕವು ಔಪಚಾರಿಕ ಪ್ರವಾಸಗಳಾಗಿವೆ. ಪ್ರಧಾನಿ ಸಿಂಗ್ ಅವರಿಗೆ ಅಮೆರಿಕವೇ ಅಚ್ಚುಮೆಚ್ಚು ಅನ್ನಿಸುತ್ತದೆ. ಹಾಗಾಗಿ 10 ಬಾರಿ ಅಮೆರಿಕಕ್ಕೆ ಭೇಟಿ ನೀಡಿಬಂದಿದ್ದಾರೆ. Next, ರಷ್ಯಾ. ಕಳೆದ 9 ವರ್ಷಗಳಲ್ಲಿ 9 ಬಾರಿ ರಷ್ಯಾಕ್ಕೆ ಹೋಗಿದ್ದಾರೆ.

ಪ್ರಧಾನಿ ಸದನದಲ್ಲಿರುವುದು ಭೂಷಣವಷ್ಟೇ ಅಲ್ಲ!
ಅಧಿವೇಶನ ನಡೆಯುತ್ತಿರುವಾಗ ಪ್ರಧಾನಿಯಾದವರು ಸದನದಲ್ಲಿರುವುದು ಭೂಷಣವಷ್ಟೇ ಅಲ್ಲ- ಅಗತ್ಯವೂ ಹೌದು; ಸಂಪ್ರದಾಯವೂ ಇದೆ. ಗುಜರಾತ್ ಗಲಭೆಗಳು ನಡೆದಾಗ ಅಂದಿನ ಪ್ರಧಾನಿ ವಾಜಪೇಯಿ ಅವರು ವಿದೇಶ ಪ್ರವಾಸಕ್ಕೆ ತೆರಳಬೇಕಿತ್ತು. ಆದರೆ ಆಗ ಅವರು ತಮ್ಮ ಬದಲಿಗೆ ವಿದೇಶಾಂಗ ಸಚಿವ ಯಶವಂತ್ ಸಿನ್ಹಾ ಅವರನ್ನು ಆಸ್ಟ್ರೇಲಿಯಾಕ್ಕೆ ತಮ್ಮ ಪ್ರತಿನಿಧಿಯಾಗಿ ಕಳುಹಿಸಿಕೊಟ್ಟಿದ್ದರು. (ಚಿತ್ರ:www.rediff.com/)












Click it and Unblock the Notifications