ಉನ್ನಾವೋ ಅತ್ಯಾಚಾರ ಪ್ರಕರಣ: ಬಿಜೆಪಿ ಶಾಸಕನನ್ನು ವಶಕ್ಕೆ ಪಡೆದ ಸಿಬಿಐ
ಲಕ್ನೋ, ಏಪ್ರಿಲ್ 13: ಉನ್ನಾವೋ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆಂಗಾರ್ ರನ್ನು ಸಿಬಿಐ ವಶಕ್ಕೆ ಪಡೆದಿದೆ. ದೇಶದಾದ್ಯಂತ ಭಾರೀ ಸದ್ದು ಮಾಡಿರುವ ಉನ್ನಾವೋ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರನ್ನು ವಶಕ್ಕೆ ಪಡೆಯಲಾಗಿದೆ. ಅವರ ಮೇಲೆ ಮೂರು ಪ್ರಕರಣಗಳನ್ನು ಸಿಬಿಐ ದಾಖಲಿಸಿದೆ ಮತ್ತು ವಿಚಾರಣೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಯುಪಿ ಸರಕಾರದ ನಡವಳಿಕೆಯನ್ನು ಗುರುವಾರ ಅಲಹಾಬಾದ್ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಇದಾದ ನಂತರ ಈ ಬೆಳವಣಿಗೆಗಳು ನಡೆದಿವೆ. ಇನ್ನು ಪ್ರಕರಣದ ಸಂಬಂಧ ಗುರುವಾರ ವಿಚಾರಣೆಯೂ ನಡೆದಿದ್ದು ಇಂದು ಕೋರ್ಟ್ ತನ್ನ ತೀರ್ಪು ನೀಡಲಿದೆ.
ಗುರುವಾರ ಉನ್ನಾವೋ ಅತ್ಯಾಚಾರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ ಆದೇಶ ಹೊರಡಿಸಿತ್ತು. ಅದಕ್ಕೂ ಮೊದಲು ಈ ಪ್ರಕರಣವನ್ನು ಎಸ್ಐಟಿ ತಂಡ ತನಿಖೆ ಮಾಡುತ್ತಿತ್ತು.

ಆರಂಭದಲ್ಲಿ ಅತ್ಯಾಚಾರ ಸಂತ್ರಸ್ತೆ ದೂರು ನೀಡಿದರೂ ಪೊಲೀಸರು ಎಫ್ಐಆರ್ ದಾಖಲಿಸಿರಲಿಲ್ಲ. ಇದರ ಮಧ್ಯೆಯೇ ಅತ್ಯಾಚಾರ ಸಂತ್ರಸ್ತೆಯ ಕುಟುಂಬಸ್ಥರು ಯೋಗಿ ನಿವಾಸದ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದರು.
ಈ ವೇಳೆ ಸಂತ್ರಸ್ತೆಯ ತಂದೆಯನ್ನು ಬಂಧಿಸಲಾಗಿತ್ತು. ಅವರು ಕಸ್ಟಡಿಯಲ್ಲೇ ಏಟು ತಿಂದ ಸಾವನ್ನಪ್ಪಿದ್ದರು. ಹೀಗೆ ಪ್ರಕರಣದ ನಾಟಕೀಯ ಬೆಳವಣಿಗೆಗಳು ಮುಂದುವರಿದಿವೆ.












Click it and Unblock the Notifications