Pralhad Joshi: ನನಗೆ ಸಹೋದರಿಯೇ ಇಲ್ಲ! ಕಾಂಗ್ರೆಸ್ ಆರೋಪಕ್ಕೆ ಪ್ರಲ್ಹಾದ್ ಜೋಶಿ ತಿರುಗೇಟು
ತಮ್ಮ ವಿರುದ್ಧ ಕಾಂಗ್ರೆಸ್ ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ನನಗೆ ಸಹೋದರಿಯೇ ಇಲ್ಲ, ವಿಜಯಲಕ್ಷ್ಮಿ ಯಾರು ಎನ್ನುವುದೇ ನನಗೆ ಗೊತ್ತಿಲ್ಲ, ಇನ್ನು ಗೋಪಾಲ್ ಜೋಶಿ ವಿರುದ್ಧದ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಬೌದ್ಧಿಕ ದಿವಾಳಿತನ ತೋರಿಸಿದೆ ಎಂದು ಕಿಡಿಕಾರಿದ್ದಾರೆ.
ತಮ್ಮ ವಿರುದ್ಧ ಕೇಳಿಬಂದ ಆರೋಪಗಳಿಗೆ ಸ್ಪಷ್ಟನೆ ಕೊಡಲು ದೆಹಲಿಯಲ್ಲಿ ಸುದ್ಧಿಗೋಷ್ಠಿ ನಡೆಸಿದ ಅವರು, ಬೆಂಗಳೂರಿನಲ್ಲಿ ದಾಖಲಾಗಿರುವ ಬಿಜೆಪಿ ಟಿಕೆಟ್ ವಂಚನೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

ಸಹೋದರಿ ಬಗೆಗಿನ ಗೊಂದಲದ ಬಗ್ಗೆ ಸ್ಪಷ್ಟನೆ ಕೊಟ್ಟ ಅವರು, ನನ್ನ ತಾಯಿಗೆ ಗೋಪಾಲ್ ಜೋಶಿ ಸೇರಿ ನಾಲ್ವರು ಮಕ್ಕಳು, ನನಗೆ ಯಾವುದೇ ಸಹೋದರಿ ಇಲ್ಲ. ಗೋಪಾಲ್ ಜೋಶಿ ಅವರ ಜೊತೆ ಕಳೆದ 32 ವರ್ಷಗಳಿಂದ ನನಗೆ ಸಂಪರ್ಕವಿಲ್ಲ, ಸಂಬಂಧವಿಲ್ಲ ಎಂದು ಹೇಳಿದರು.
ಗೋಪಾಲ್ ಜೋಶಿ ಮಾತ್ರವಲ್ಲ ಯಾರೇ ಆದರೂ ತಮ್ಮ ಕೆಲಸಗಳಿಗೆ ನನ್ನ ಹೆಸರು ದುರುಪಯೋಗಪಡಿಸಿಕೊಳ್ಳುತ್ತಿದ್ದರೆ ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. ಯಾರೊಮದಿಗೂ ನನ್ನ ಹೆಸರು ಉಲ್ಲೇಖಿಸದಂತೆ 2013ರಲ್ಲೇ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ದಾಖಲೆಗಳ ಸಮೇತ ಸ್ಪಷ್ಟನೆ ಕೊಟ್ಟರು.
ನನಗೆ ಸಹೋದರಿಯೇ ಇಲ್ಲ
ಬೆಂಗಳೂರಿನಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ವಿಜಯಲಕ್ಷ್ಮಿ ನನ್ನ ಸಹೋದರಿ ಎಂದು ಉಲ್ಲೇಖಿಸಿದ್ದಾರೆ. ನನಗೆ ಸಹೋದರಿಯೇ ಇಲ್ಲ. ಇದನ್ನೆಲ್ಲ ನೋಡಿದರೆ ಎಲ್ಲ ಬೋಗಸ್ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಎಂದರು. ಈ ಪ್ರಕರಣದಲ್ಲಿ ನನಗೂ, ನನ್ನ ಕುಟುಂಬಕ್ಕೂ ಹಾಗೂ ಬಿಜೆಪಿಗೂ ಸಂಬಂಧವಿಲ್ಲ, ಗೋಪಾಲ್ ಜೋಶಿ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಿ ಎಂದರು.
ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಗೋಪಾಲ್ ಜೋಶಿ ಹಣ ಪಡೆದಿದ್ದಾರೋ ಇಲ್ಲವೋ ಗೊತ್ತಿಲ್ಲ. ತನಿಖೆಯಾದ ಬಳಿಕವೇ ನಿಜ ಏನೆಂದು ಗೊತ್ತಾಗಲಿದೆ. ಈ ಪ್ರಕರಣದಲ್ಲಿ ಕಾಂಗ್ರೆಸ್ ತನ್ನ ಬೌದ್ಧಿಕ ದಿವಾಳಿತನ ಪ್ರದರ್ಶನ ಮಾಡುತ್ತಿದೆ ಎಂದು ಜೋಶಿ ಕಿಡಿ ಕಾರಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿಯನ್ನು ಬಂಧಿಸಬೇಕೆನ್ನುವ ಮೂಲಕ ಕಾಂಗ್ರೆಸ್ ಮುಠ್ಠಾಳತನ ತೋರುತ್ತಿದೆ. ಸತ್ಯಾಸತ್ಯತೆ ವಿಮರ್ಶೆ ಮಾಡದೆ ರೀತಿ ಹುಂಬತನ ಪ್ರದರ್ಶಿಸುತ್ತಿದೆ ಎಂದರು.
ಕಳೆದ 25 ವರ್ಷಗಳಿಂದ ನಾನು ರಾಜಕೀಯ ಜೀವನದಲ್ಲಿ ಇದ್ದೇನೆ. ಒಂದು ಕಾಲದಲ್ಲಿ ಕೋಲ್ ಎಂದರೆ ಭ್ರಷ್ಟಾಚಾರ, ಹಗರಣದ್ದೇ ಸದ್ದು ಮಾಡುತ್ತಿತ್ತು, ಅಂತಹ ಖಾತೆಯನ್ನು ನಿರ್ವಹಿಸಿದರೂ ನಾನು ಕೈ ಮಸಿ ಮಾಡಿಕೊಂಡಿಲ್ಲ, ಅಂದಿನಿಂದ ಇಂದಿನವರೆಗೂ ಶುದ್ಧ ಹಸ್ತನಾಗಿದ್ದೇನೆ ಎಂದು ಹೇಳಿದರು.












Click it and Unblock the Notifications