Union Budget 2025: ಬಜೆಟ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಹತ್ವದ ಘೋಷಣೆ
Union Budget 2025: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೇಂದ್ರ ಬಜೆಟ್‌ನಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ. ಮುಂದಿನ ವರ್ಷದಿಂದ ವೈದ್ಯಕೀಯ ಕಾಲೇಜಿನಲ್ಲಿ 10 ಸಾವಿರ ಸೀಟುಗಳನ್ನು ಹೆಚ್ಚಳ ಮಾಡಲಾಗುವುದು ಎಂದು ಹೇಳಿದ್ದಾರೆ.
ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಮುಂದಿನ ವರ್ಷ ವೈದ್ಯಕೀಯ ಕಾಲೇಜುಗಳಲ್ಲಿ ಹತ್ತು ಸಾವಿರ ಹೆಚ್ಚುವರಿ ಸೀಟುಗಳನ್ನು ಸೇರಿಸಲಾಗುವುದು ಮತ್ತು ಮುಂದಿನ 5 ವರ್ಷಗಳಲ್ಲಿ 75,000 ಸೀಟುಗಳನ್ನು ಸೇರಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2025ಅನ್ನು ಮಂಡಿಸುವಾಗ ಘೋಷಣೆ ಮಾಡಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಎರಡನೇ ಬಜೆಟ್ ಮಂಡಿಸಿದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ದಾಖಲೆಯ 8ನೇ ಕೇಂದ್ರ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಿದರು. ಈ ಮೂಲಕ ಸತತ 8 ಬಾರಿ ಕೇಂದ್ರ ಬಜೆಟ್ ಮಂಡಿಸಿದ ಏಕೈಕ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ವಿಕಸಿತ ಭಾರತವು ಬಡತನದಿಂದ ಮುಕ್ತ ಆಗಲಿದೆ. ಮೌಲ್ಯಯುತ ಶಿಕ್ಷಣ, ಕೈಗೆಟುಕ ದರದಲ್ಲಿ ಆರೋಗ್ಯ ಸೇವೆ ಒದಗಿಸಲಿದ್ದೇವೆ ಎಂದು ಭರವಸೆ ನೀಡಿದ್ದಾರೆ.
ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ಕೇಂದ್ರಗಳನ್ನು ಆರಂಭಿಸಲಾಗುವುದು. ಇದರಿಂದ ಕ್ಯಾನ್ಸರ್ ರೋಗಿಗಳಿಗೆ ಬೇರೆ ಬೇರೆ ಜಿಲ್ಲೆಗಳಿಗೆ ಅಲೆದಾಡುವ ಅಗತ್ಯ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ವಿಮಾ ವಲಯದಲ್ಲಿ ವಿದೇಶಿ ನೇರ ಹೂಡಿಕೆ (ಎಪ್ಡಿಐ) ಮಿತಿ ಹೆಚ್ಚಳ ಮಾಡಲಾಗವುದು. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಡೇ ಕೇರ್ ಕೇಂದ್ರಗಳನ್ನು ತೆರೆಯಲಾಗುವುದು. ಜೀವ ಉಳಿಸುವ ಔಷಧಿಗಳ ದರಗಳು ಇಳಿಕೆಯಾಗಲಿವೆ. ಜೀವ ರಕ್ಷಕ ಔಷಧಿಗಳ ಮೇಲಿನ ಕಸ್ಟಮ್ ಸುಂಕ ಕಡಿತಗೊಳಿಸಲಾಗುವುದು. ಅದನ್ನು ಶೇಕಡಾ 6ಕ್ಕೆ ಇಳಿಸಲಾಗುತ್ತದೆ. ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದ ಔಷಧಗಳು ಅಗ್ಗವಾಗುತ್ತವೆ. 36 ಜೀವ ರಕ್ಷಕ ಔಷಧಗಳ ಮೇಲಿನ ಕಸ್ಟಮ್ ಸುಂಕ ರದ್ದು ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ನಮ್ಮ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ. ಕಳೆದ 10 ವರ್ಷಗಳಲ್ಲಿ ನಮ್ಮ ಅಭಿವೃದ್ಧಿ ದಾಖಲೆ ಮತ್ತು ರಚನಾತ್ಮಕ ಸುಧಾರಣೆಗಳು ಜಾಗತಿಕ ಗಮನ ಸೆಳೆದಿವೆ. ಭಾರತದ ಸಾಮರ್ಥ್ಯ ಮತ್ತು ಸಾಮರ್ಥ್ಯದ ಮೇಲಿನ ವಿಶ್ವಾಸವು ಈ ಅವಧಿಯಲ್ಲಿ ಮಾತ್ರ ಬೆಳೆದಿದೆ. ಮುಂದಿನ 5 ವರ್ಷಗಳನ್ನು ಎಲ್ಲಾ ಪ್ರದೇಶಗಳ ಸಮತೋಲಿತ ಬೆಳವಣಿಗೆ ಉತ್ತೇಜಿಸುವ, ಸಬ್ಕಾ ವಿಕಾಸ್ ಅನ್ನು ಸಾಕಾರಗೊಳಿಸುವ ಒಂದು ಅನನ್ಯ ಅವಕಾಶವಾಗಿ ನಾವು ನೋಡುತ್ತೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.












Click it and Unblock the Notifications