Union Budget 2025: 5 ಲಕ್ಷ ಎಸ್‌ಸಿ, ಎಸ್‌ಟಿ ಮಹಿಳೆಯರಿಗೆ ಹೊಸ ಯೋಜನೆ
Union Budget 2025: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆಬ್ರವರಿ 1) ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಈ ವೇಳೆ 5 ಲಕ್ಷ ಎಸ್‌ಸಿ ಎಸ್‌ಟಿ ಮಹಿಳೆಯರಿಗೆ ಹೊಸ ಯೋಜನೆಗಳನ್ನು ರೂಪಿಸಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಬಜೆಟ್ ಮಂಡನೆ ವೇಳೆ ಎಸ್‌ಸಿ/ಎಸ್‌ಟಿ ಸಮುದಾಯಗಳ 5 ಲಕ್ಷ ಮಹಿಳೆಯರಿಗೆ 5 ವರ್ಷಗಳ ಅವಧಿಯೊಂದಿಗೆ ಟರ್ಮ್ ಲೋನ್‌ಗಳನ್ನು ನೀಡಲು ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಘೋಷಣೆ ಮಾಡಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 3ನೇ ಅವಧಿಯ ಎರಡನೇ ಬಜೆಟ್ ಮಂಡಿಸುತ್ತಿದ್ದಾರೆ. ಅಲ್ಲದೆ, ಅವರು ಸತತ 8ನೇ ಬಾರಿಗೆ ಬಜೆಟ್ ಮಂಡಿಸಿದ ದಾಖಲೆ ನಿರ್ಮಿಸುತ್ತಿದ್ದಾರೆ. 2019ರಲ್ಲಿ ಮೋದಿ ಸರ್ಕಾರದ ಎರಡನೇ ಅವಧಿಯಲ್ಲಿ ಪೂರ್ಣಾವಧಿ ಹಣಕಾಸು ಸಚಿವೆಯಾಗಿ ನೇಮಕವಾದ ನಿರ್ಮಲಾ ಸೀತಾರಾಮನ್ ಅವರು ಒಟ್ಟು 7 ಪೂರ್ಣಾವಧಿ 2024ರ ಫೆಬ್ರವರಿಯಲ್ಲಿ ಒಂದು ಮಧ್ಯಂತರ ಬಜೆಟ್ ಮಂಡಿಸಿದ್ದರು.
ಅಷ್ಟೇ ಅಲ್ಲದೆ, ಕಾರ್ಮಿಕ- ವಲಯಗಳ ಉತ್ಪಾದಕತೆಯನ್ನು ಹೆಚ್ಚಿಸಲು ಸರ್ಕಾರವು ಹಲವು ಸೌಲಭ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೇಳಿದರು. ಉದ್ಯಮ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರನ್ನು ಉತ್ತೇಜಿಸುವ ಸಲುವಾಗಿ ಹೊಸ ಯೋಜನೆ ಜಾರಿಗೊಳಿಸಲಾಗುವುದು. 5 ಲಕ್ಷ ಮಹಿಳೆಯರು, ಎಸ್‌ಸಿ, ಎಸ್‌ಟಿ ಉದ್ಯಮಿಗಳಿಗೆ ಸರ್ಕಾರವು 2 ಕೋಟಿ ರೂಪಾಯಿಗಳ ಅವಧಿ ಸಾಲವನ್ನು ಪ್ರಾರಂಭಿಸಲಿದೆ.
ಇದರಿಂದ 22 ಲಕ್ಷ ಉದ್ದಿಮೆದಾರರಿಗೆ ಅನುಕೂಲ ಆಗಲಿದೆ. ಚರ್ಮೋದ್ಯಮನ್ನು ಉತ್ತೇಜಿಸಿ ರಫ್ತು ಹೆಚ್ಚಿಸುವತ್ತ ಗಮನ ಹರಿಸಲಾಗುವುದು. ಆ ಮೂಲಕ ಮೇಡ್ ಇನ್ ಇಂಡಿಯಾ ಬ್ರ್ಯಾಂಡ್ ಉತ್ತೇಜಿಸಲಾಗುವುದು. ಮೊದಲ ಬಾರಿಗೆ ಉದ್ಯಮ ಶುರು ಮಾಡುವವರಿಗೆ ಸಹಕಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕ್ರೆಡಿಟ್ ಗ್ಯಾರಂಟಿ ಕವರ್ ಅನ್ನು 20 ಕೋಟಿ ರೂ.ಗಳಿಗೆ ದ್ವಿಗುಣಗೊಳಿಸಲಾಗುತ್ತದೆ, ಗ್ಯಾರಂಟಿ ಶುಲ್ಕವನ್ನು ಶೇಕಡಾ 1ಕ್ಕೆ ಇಳಿಸಲಾಗುತ್ತದೆ ಎಂದು ಅವರು ಹೇಳಿದರು. ಬಿಹಾರದಲ್ಲಿ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣೆಯ ರಾಷ್ಟ್ರೀಯ ಸಂಸ್ಥೆಯನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.
ದ್ವಿದಳ ಧಾನ್ಯಗಳಲ್ಲಿ ಸ್ವಾವಲಂಬನೆ ಸಾಧಿಸುವ ಯೋಜನೆಯಲ್ಲಿ, ತೊಗರಿ ಕಾಳು, ಉದ್ದಿನ ಬೇಳೆ ಹಾಗೂ ಮಸೂರ್ ಬೇಳೆಗಳಿಗೆ ವಿಶೇಷ ಗಮನ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.












Click it and Unblock the Notifications