Government Employee: ಸರ್ಕಾರಕ್ಕೆ 7 ಪ್ರಮುಖ ಬೇಡಿಕೆ ಮುಂದಿಟ್ಟ ಸರ್ಕಾರಿ ನೌಕರರು
ನವದೆಹಲಿ, ಜುಲೈ 11: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 23ರಂದು 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದ್ದಾರೆ. ಸರ್ಕಾರಿ ನೌಕರರು ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರದ ಮೇಲೆ ಸರ್ಕಾರಿ ನೌಕರರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಂಪುಟ ಕಾರ್ಯದರ್ಶಿಗೆ ಪತ್ರ ಬರೆದಿರುವ ಸರ್ಕಾರಿ ನೌಕರರು 8ನೇ ವೇತನ ಆಯೋಗ ರಚನೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಮನವಿ ಮಾಡಿದ್ದಾರೆ.

7ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಈಗ ಸರ್ಕಾರಿ ನೌಕರರು ವೇತನವನ್ನು ಪಡೆಯುತ್ತಿದ್ದಾರೆ. ಈಗ ನಿಯಮದಂತೆ ಸರ್ಕಾರ 8ನೇ ವೇತನ ಆಯೋಗ ರಚನೆ ಮಾಡಬೇಕಿದೆ. ಈ ಕುರಿತು ಸರ್ಕಾರಿ ನೌಕರರು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಕೆ ಮಾಡಿದ್ದು, ಈಗ ಅದೇ ಬೇಡಿಕೆಯನ್ನು ಹಣಕಾಸು ಸಚಿವರಿಗೆ ಸಲ್ಲಿಸಿದ್ದಾರೆ.
ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳು: ಸರ್ಕಾರಿ ನೌಕರರು 8ನೇ ವೇತನ ಆಯೋಗದ ವರದಿ ಜಾರಿ, ಹಳೆ ಪಿಂಚಣಿ ಯೋಜನೆ ಮರು ಜಾರಿಗೊಳಿಸುವುದು, ಕೋವಿಡ್ ಸಂದರ್ಭದಲ್ಲಿ ತಡೆ ಹಿಡಿದಿದ್ದ 18 ತಿಂಗಳ ತುಟ್ಟಿಭತ್ಯೆ ಬಿಡುಗಡೆ ಮಾಡುವುದು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಬಜೆಟ್‌ನಲ್ಲಿ ಯಾವ ಘೋಷಣೆಯಾಗಲಿದೆ? ಎಂದು ಕಾದು ನೋಡಬೇಕಿದೆ.
ಕೇಂದ್ರ ಸರ್ಕಾರಿ ನೌಕರರ ಒಕ್ಕೂಟ ಕೋವಿಡ್ ಕಾಲದಲ್ಲಿ ತಡೆ ಹಿಡಿದಿದ್ದ 18 ತಿಂಗಳ ತುಟ್ಟಿಭತ್ಯೆಯನ್ನು ಬಿಡುಗಡೆ ಮಾಡಬೇಕು. ಅನುಕಂಪದ ಆಧಾರದ ಮೇಲಿನ ನೇಮಕಾತಿಗೆ ಇರುವ ಶೇ 5ರಷ್ಟು ಗರಿಷ್ಠ ಮಿತಿಯನ್ನು ತೆಗೆದು ಹಾಕಬೇಕು. ಸರ್ಕಾರಿ ನೌಕರ ಸೇವೆಯಲ್ಲಿರುವ ಮೃತಪಟ್ಟರೆ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಸರ್ಕಾರಿ ನೌಕರರು ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಬೇಕು. ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ, ಗುತ್ತಿಗೆದಾರೀಕರಣವನ್ನು ನಿಲ್ಲಿಸಬೇಕು ಎಂದು ಸಹ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಉಳಿದಂತೆ ನೌಕರರು ಜೆಸಿಎಂ ಕಾರ್ಯವಿಧಾನದ ನಿಬಂಧನೆಗಳ ಪ್ರಕಾರ ಒಕ್ಕೂಟ/ ಸಂಘಗಳ ಪ್ರಜಾಸತ್ತಾತ್ಮಕ ಕಾರ್ಯ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಬೇಕು. ಬಾಕಿ ಉಳಿದಿರುವ ಒಕ್ಕೂಟ/ ಸಂಘಗಳಿಗೆ ಮಾನ್ಯತೆ ನೀಡಬೇಕು. ಸೇವಾ ಸಂಘಗಳು/ ಒಕ್ಕೂಟಗಳ ಮೇಲೆ ನಿಯಮ 15 1 (ಸಿ) ಹೇರುವುದನ್ನು ನಿಲ್ಲಿಸಬೇಕು ಎಂದು ಬೇಡಿಕೆ ಇಡಲಾಗಿದೆ.
ಸಾಂದರ್ಭಿಕ, ಗುತ್ತಿಗೆ ಕಾರ್ಮಿಕರು ಮತ್ತು ಜಿಡಿಎಸ್ ನೌಕರರನ್ನು ಕಡ್ಡಾಯಗೊಳಿಸಬೇಕು. ಸ್ವಾಯತ್ತ ಸಂಸ್ಥೆಗಳ ನೌಕರರಿಗೆ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಸಮಾನವಾದ ಸ್ಥಾನಮಾನವನ್ನು ನೀಡಬೇಕು ಎಂದು ನೌಕರರು ಬೇಡಿಕೆ ಇಟ್ಟಿದ್ದಾರೆ.
ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಜುಲೈನಲ್ಲಿ ಮತ್ತೆ ಏರಿಕೆಯಾಗಲಿದೆ. ಈಗಾಗಲೇ ಲೋಕಸಭೆ ಚುನಾವಣೆಗೂ ಮೊದಲು ಕೇಂದ್ರ ಸರ್ಕಾರ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಿತ್ತು. ಈಗ ಮತ್ತೊಮ್ಮೆ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡುವ ಕುರಿತು ಆದೇಶವನ್ನು ಹೊರಡಿಸಲಾಗುತ್ತದೆ. ಇದರ ಜೊತೆಗೆ ಬಜೆಟ್‌ನಲ್ಲಿ ಯಾವ ಕೊಡುಗೆ ಸಿಗಲಿದೆ? ಎಂದು ಕಾದು ನೋಡಬೇಕು.












Click it and Unblock the Notifications