2 ಡೋಸ್ ಲಸಿಕೆ ಮರಣ ಸಾಧ್ಯತೆಯನ್ನು 98% ತಗ್ಗಿಸಬಲ್ಲದು
ನವದೆಹಲಿ, ಜುಲೈ 03: ಎರಡು ಡೋಸ್ ಕೊರೊನಾ ಲಸಿಕೆಯು ಸೋಂಕಿನಿಂದ ಸಂಭವಿಸಬಹುದಾದ ಮರಣ ಸಾಧ್ಯತೆಯನ್ನು 98% ತಗ್ಗಿಸಬಲ್ಲದು ಎಂದು ಪಂಜಾಬ್‌ನ ಪೊಲೀಸ್ ಸಿಬ್ಬಂದಿ ಮೇಲೆ ನಡೆಸಿದ ಸಂಶೋಧನೆ ಪ್ರಸ್ತುತಪಡಿಸಿರುವುದಾಗಿ ಸರ್ಕಾರದ ನೀತಿ ಆಯೋಗ ಸದಸ್ಯ ವಿ.ಕೆ. ಪೌಲ್ ಉಲ್ಲೇಖಿಸಿದ್ದಾರೆ.
ಲಸಿಕೆಯ ಒಂದು ಡೋಸ್ ಪಡೆದುಕೊಂಡರೆ, ಈ ಪ್ರಮಾಣ 92% ಇರುತ್ತದೆ ಎಂದು ಹೇಳಿದ್ದಾರೆ. ಚಂಡೀಗಢದ ವೈದ್ಯಕೀಯ ಶಿಕ್ಷಣ, ಸಂಶೋಧನಾ ಸ್ನಾತಕೋತ್ತರ ವಿಭಾಗ ಹಾಗೂ ಪಂಜಾಬ್ ಸರ್ಕಾರ ಒಟ್ಟುಗೂಡಿ ಲಸಿಕೆ ಕುರಿತು ಅಧ್ಯಯನ ಕೈಗೊಂಡಿತ್ತು.

ಈ ಅಧ್ಯಯನದ ಮಾಹಿತಿಯನ್ನು ಹಂಚಿಕೊಂಡ ನೀತಿ ಆಯೋಗ ಸದಸ್ಯ ಡಾ. ವಿ.ಕೆ. ಪೌಲ್, ಪಂಜಾಬ್‌ನಲ್ಲಿ 4868 ಪೊಲೀಸ್ ಸಿಬ್ಬಂದಿಗೆ ಲಸಿಕೆ ನೀಡಲಾಗಿಲ್ಲ ಹಾಗೂ ಅದರಲ್ಲಿ 15 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
35,856 ಪೊಲೀಸ್ ಸಿಬ್ಬಂದಿ ಒಂದು ಡೋಸ್ ಕೊರೊನಾ ಲಸಿಕೆ ಪಡೆದಿದ್ದು, ಅದರಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಇದರ ಪ್ರಮಾಣ ಸಾವಿರಕ್ಕೆ 0.25% ಆಗಿದೆ. ಒಟ್ಟಾರೆ 42,720 ಮಂದಿ ಎರಡು ಡೋಸ್ ಲಸಿಕೆ ಪಡೆದಿದ್ದು, ಈ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ. ಇದರ ಪ್ರಮಾಣ ಸಾವಿರಕ್ಕೆ 0.05% ಆಗಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಸೋಂಕಿನಿಂದ ಹೆಚ್ಚಿನ ಅಪಾಯವಿರುವ ಗುಂಪಿನಲ್ಲಿ ಪೊಲೀಸ್ ಸಿಬ್ಬಂದಿ ಸೇರುತ್ತಾರೆ. ಈ ಅಧ್ಯಯನದಿಂದ, ಒಂದು ಡೋಸ್ ಲಸಿಕೆ 92% ರಕ್ಷಣೆ ನೀಡಿದರೆ, ಎರಡು ಡೋಸ್ ಲಸಿಕೆ 98% ರಕ್ಷಣೆ ನೀಡುತ್ತದೆ ಎಂಬುದು ಸಾಬೀತಾಗಿದೆ ಎಂದು ಪೌಲ್ ಹೇಳಿದ್ದಾರೆ.
"ಲಸಿಕೆಯು ಸೋಂಕು ಗಂಭೀರ ಸ್ವರೂಪ ಪಡೆಯುವುದನ್ನು ತಡೆಯುತ್ತದೆ ಹಾಗೂ ಮರಣದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಎಂಬುದು ಹಲವು ಅಧ್ಯಯನಗಳಿಂದ ಸಾಬೀತಾಗಿದೆ. ಹೀಗಾಗಿ ಲಸಿಕೆ ಮೇಲೆ ನಂಬಿಕೆ ಇಡಿ. ಅದರ ಪರಿಣಾಮಕಾರಿ ಗುಣಗಳ ಬಗ್ಗೆ ಅನುಮಾನ ಬೇಡ" ಎಂದು ಲಸಿಕೆ ಪಡೆದುಕೊಳ್ಳುವಂತೆ ಜನರಿಗೆ ಕರೆ ನೀಡಿದ್ದಾರೆ.












Click it and Unblock the Notifications