ಜಮ್ಮು ಕಾಶ್ಮೀರದಲ್ಲಿ ಉಗ್ರರು ಬಳಸುತ್ತಿದ್ದ ಸುರಂಗ ಪತ್ತೆ
ಶ್ರೀನಗರ, ಸೆಪ್ಟೆಂಬರ್ 30:ಪಾಕಿಸ್ತಾನ ಬೆಂಬಲಿತ ಉಗ್ರವಾದಿಗಳು ಪಾಕಿಸ್ತಾನದ ಆ ಕಡೆಯಿಂದ ಭಾರತದ ಗಡಿಯೊಳಕ್ಕೆ ಭೂಮಿಯೊಳಗೆ ನುಸುಳಿ ಒಳಬರುವಂತೆ ತೋಡಲಾಗಿದ್ದ ಸುರಂಗವನ್ನು ಗಡಿ ಭದ್ರತಾ ಪಡೆಯು (ಬಿಎಸ್ಎಫ್) ಸೆ. 30ರಂದು ಪತ್ತೆ ಮಾಡಿದೆ.
ಜಮ್ಮುವಿನ ಆರ್ನಿಯಾ ಸೆಕ್ಟರ್ ನಲ್ಲಿ ಈ ಗುಪ್ತ ಸುರಂಗವು ಪತ್ತೆಯಾಗಿದ್ದು, ಇದರ ಮೂಲಕ ಹಲವಾರು ಉಗ್ರರು ಭಾರತದೊಳಕ್ಕೆ ನುಸುಳುತ್ತಿದ್ದರು ಎಂದು ಬಿಎಸ್ ಎಫ್ ಹೇಳಿದೆ. ಅಲ್ಲದೆ, ಇಂಥ ಅನೇಕ ಸುರಂಗಗಳೂ ಈ ಪ್ರಾಂತ್ಯದಲ್ಲಿ ಇರಬಹುದಾದ ಶಂಕೆ ವ್ಯಕ್ತವಾಗಿದ್ದು, ಅದರ ಹುಡುಕಾಟದಲ್ಲಿ ಯೋಧರಿದ್ದಾರೆಂದು ಬಿಎಸ್ಎಫ್ ಹೇಳಿದೆ.

ಕಳೆದ ಏಳು ತಿಂಗಳಲ್ಲಿ ಈ ಪ್ರಾಂತ್ಯದಲ್ಲಿ ಇಂಥದ್ದೊಂದು ಸುರಂಗ ಪತ್ತೆಯಾಗುತ್ತಿರುವುದು ಇದು ಎರಡನೇ ಬಾರಿ. ಕಳೆದ ಏಳು ತಿಂಗಳ ಹಿಂದೆ, ಸಾಂಭಾ ಜಿಲ್ಲೆಯ ರಾಮಗಢದಲ್ಲಿ ಉಗ್ರರು ತೋಡಿದ್ದ ಸುರಂಗ ಪತ್ತೆಯಾಗಿತ್ತು.
ಹಬ್ಬ, ಹರಿದಿನಗಳ ಸಂದರ್ಭದಲ್ಲಿ ಉಗ್ರರು ಭಾರತದಲ್ಲಿ ಅಲ್ಲೋಕ ಕಲ್ಲೋಲ ಸೃಷ್ಟಿಸಲು ಬರಬಹುದೆಂಬ ಗುಮಾನಿ ಮೇಲೆ ನಡೆಸಲಾಗಿದ್ದ ಹುಡುಕಾಟದ ವೇಳೆ ಈ ಸುರಂಗ ಪತ್ತೆಯಾಯಿತೆಂದು ಬಿಎಸ್ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications