2 ವಾರ ತಗ್ಗೋದೇ ಇಲ್ಲ: ಕರ್ನಾಟಕದಲ್ಲೂ 100 ಗಡಿ ದಾಟಿದ ಟೊಮೆಟೋ ಬೆಲೆ!
ಬೆಂಗಳೂರು, ಜೂನ್ 4: ನಿಂಬೆಹಣ್ಣಿನ ಬೆಲೆ ಏರಿಕೆಯಾಗಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ್ದು ಆಗಿದೆ. ಇದೀಗ ಟೊಮೆಟೊ ಸರದಿ ಬಂದಿದೆ. ಮುಂಬೈ, ಬೆಂಗಳೂರು ಸೇರಿದಂತೆ ಮೆಟ್ರೋಪಾಲಿಟನ್ ನಗರಗಳಲ್ಲಿ ಟೊಮೆಟೊ ಬೆಲೆ ಜೂನ್ ಆರಂಭದಿಂದಲೇ ಏರಿಕೆಯಾಗಿದ್ದು, ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದೆ.
ಜೂ. 3 ರಂದು ಮುಂಬೈನ ದಾದರ್ ತರಕಾರಿ ಮಾರುಕಟ್ಟೆಯಲ್ಲಿ 80 ರೂಪಾಯಿಗೆ ಮಾರಾಟವಾಗುತ್ತಿದ್ದ ಕೆ.ಜಿ ಟೊಮೆಟೊ ದರದಲ್ಲಿ ಇದೀಗ ದಿಢೀರ್ ಏರಿಕೆಯಾಗಿದೆ. ಒಂದು ಕೆಜಿ ಟೊಮೆಟೊ ಬೆಲೆಯು 100 ರೂಪಾಯಿ ಗಡಿ ದಾಟಿ ಹೋಗಿದೆ.
ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ ಮುಂದಿನ ಎರಡರಿಂದ ಮೂರು ವಾರಗಳವರೆಗೆ ಟೊಮೆಟೊ ಬೆಲೆ ಇಳಿಕೆಯಾಗುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ. ಚೆನ್ನೈ ಮತ್ತು ಮುಂಬೈನಂತಹ ಪ್ರಮುಖ ನಗರಗಳಲ್ಲಿ ಟೊಮೆಟೊ ಅಷ್ಟೇ ಅಲ್ಲದೆ, ದಿನನಿತ್ಯ ಬಳಸುವ ತರಕಾರಿಗಳ ಬೆಲೆಗಳು ಏರಿಕೆ ಕಂಡಿವೆ.

ಕರ್ನಾಟಕ, ಆಂಧ್ರಪ್ರದೇಶದಿಂದ ಪೂರೈಕೆ ಕಡಿಮೆ:
ಟೊಮೆಟೊ ಮತ್ತು ತರಕಾರಿಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ಬೆಲೆ ಏರಿಕೆಯಾಗಿದೆ. ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಅಧಿಕ ತಾಪಮಾನದಿಂದ ಟೊಮೆಟೊ ಬೆಳೆಯುವ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಉತ್ಪಾದನೆ ತಗ್ಗಿದೆ. ಮಾರುಕಟ್ಟೆಯಲ್ಲಿ ಅಗತ್ಯಕ್ಕೆ ತಕ್ಕ ಮಟ್ಟಿಗೆ ಟೊಮೆಟೊ ಪೂರೈಕೆ ಆಗುತ್ತಿಲ್ಲ. ಇದು ಬೆಲೆ ಏರಿಕೆ ಮೇಲೆ ಪರಿಣಾಮ ಬೀರಿದೆ. ಟೊಮೆಟೊ ಅಲ್ಲದೇ ಇತರೆ ತರಕಾರಿಗಳ ಬೆಲೆ ಕೂಡ ಏರಿಕೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಟೊಮೆಟೊ ಚಿಲ್ಲರೆ ಬೆಲೆಯಲ್ಲಿ ಶೇ.70ರಷ್ಟು ಹೆಚ್ಚಳ:
ಕೇಂದ್ರ ಆಹಾರ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ ಟೊಮೆಟೊದ ಸರಾಸರಿ ಚಿಲ್ಲರೆ ಬೆಲೆ ಕಳೆದ ತಿಂಗಳಲ್ಲಿ ಶೇ.70 ಮತ್ತು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 168 ರಷ್ಟು ಹೆಚ್ಚಾಗಿದೆ.
ಈಗ ಮಳೆಗಾಲ ಶುರುವಾಗಿದ್ದು, ನಿಗದಿತವಾಗಿ ಮಳೆಯಾದರೆ ಉತ್ಪಾದನೆ ಹೆಚ್ಚಾಗುವ ಸಾಧ್ಯತೆ ಇದೆ. ಒಂದು ವೇಳೆ ಮಳೆ ಹೆಚ್ಚಾಗಿ ಕೈಗೆ ಬಂದ ಬೆಳೆ ಏನಾದರೂ ನಾಶವಾದರೆ ತರಕಾರಿ ಸೇರಿದಂತೆ ಇತರೆ ಆಹಾರ ಧಾನ್ಯಗಳ ಬೆಲೆಯಲ್ಲಿ ಮತ್ತೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.












Click it and Unblock the Notifications