ಈ ಸಂಸದನ ಮಾತನ್ನು ಕೇಳಿದ್ರಾ? ನಾಚಿಕೆಯಾಗ್ಬೇಕು
ಕೋಲ್ಕತ್ತಾ, ಜು 1: ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಯೊಬ್ಬರು ಅದರಲ್ಲೂ ಸಂಸತ್ ಸದಸ್ಯನೊಬ್ಬರ ಬಾಯಿಯಿಂದ ಇಂಥ ಮಾತೇ? ಮಾತಿನ ಅಬ್ಬರದಲ್ಲಿ ವಿರೋಧ ಪಕ್ಷದ ಮಹಿಳಾ ಕಾರ್ಯಕರ್ತರನ್ನು ಅತ್ಯಾಚಾರವೆಸಗಲು ತಮ್ಮ ಪಕ್ಷದ ಕಾರ್ಯಕರ್ತರಿಗೆ ಟಿಎಂಸಿ ಸಂಸದರೊಬ್ಬರು ಕರೆ ನೀಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸಂಸದ ತಾಪಸ್ ಪಾಲ್ ಈ ರೀತಿಯ ಬೇಜವಬ್ದಾರಿ ಹೇಳಿಕೆಯನ್ನು ನೀಡಿ ದೇಶವೇ ತಲೆ ತಗ್ಗಿಸುವಂತೆ ಮಾಡಿದ್ದಾರೆ.
ಸೋಮವಾರ (ಜೂ 30) ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಟಿಎಂಸಿ ಸಂಸದ ತಾಪಸ್ ಪಾಲ್, ಅವರು (ಸಿಪಿಎಂ) ನಮ್ಮ ಕಾರ್ಯಕರ್ತರನ್ನು ಕೊಂದರೆ ನೀವು ಅವರ ಪಕ್ಷದ ಮಹಿಳಾ ಕಾರ್ಯಕರ್ತರನ್ನು ಅತ್ಯಾಚಾರವೆಸಗಿ ಎಂದು ಕರೆನೀಡಿದ್ದಾರೆಂದು ಐಬಿಎನ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಕಮ್ಯೂನಿಸ್ಟ್ (ಮಾರ್ಕಿಸ್ಟ್) ಪಕ್ಷದ ಕಾರ್ಯಕರ್ತರು ನಮ್ಮ ಪಕ್ಷದ ಕಾರ್ಯಕರ್ತರನ್ನು ಕೊಲ್ಲುವ ದುಸ್ಸಾಸಹಕ್ಕೆ ಮುಂದಾಗಿದ್ದಾರೆ. ಅವರು ಇದೇ ರೀತಿ ಮುಂದುವರಿದರೆ, ಅವರ ಪಕ್ಷದ ಮಹಿಳಾ ಕಾರ್ಯಕರ್ತರನ್ನು ಅತ್ಯಾಚಾರವೆಸಗಲು ನಮ್ಮ ಪಕ್ಷದ ಯುವಕರಿಗೆ ಕರೆ ನೀಡಬೇಕಾಗುತ್ತದೆಂದು ಎಚ್ಚರಿಸುವ ಅವಿವೇಕಿ ಹೇಳಿಕೆಯನ್ನು ಈ ಸಂಸದರು ನೀಡಿದ್ದಾರೆ.
(ಫೋಟೋ: ಪಿಟಿಐ)

ಕಾರ್ಯಕರ್ತರೂ ಜೈ
ತಾಪಸ್ ಹೇಳಿಕೆ ಒಂದು ಕಡೆಯಾದರೆ, ಅದಕ್ಕಿಂತ ದೊಡ್ದ ದುರಂತವೆಂದರ ಇವರ ಹೇಳಿಕೆಗೆ ನೆರೆದಿದ್ದ ಟಿಎಂಸಿ ಕಾರ್ಯಕರ್ತರು ಭಾರೀ ಚಪ್ಪಾಳೆ, ಶಿಳ್ಳೆಯೊಂದಿಗೆ ಅನುಮೋದಿಸಿದ್ದು.

ಟಿಎಂಸಿ ಮುಖಂಡನ ಸಮಜಾಯಿಷಿ
ತಾಪಸ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ, ಅಧಿಕಾರರೂಢ ಟಿಎಂಸಿ ಮುಖಂಡ ಡೆರೆಕ್ ಬ್ರೇನ್, ತಾಪಸ್ ಹೇಳಿಕೆಯನ್ನು ನಾವು ವಿರೋಧಿಸುತ್ತೇವೆ. ಇದು ಅವರ ಅಭಿಪ್ರಾಯ, ಇದಕ್ಕೂ ಪಕ್ಷಕ್ಕೂ ಏನೂ ಸಂಬಂಧವಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ಎಂದಿನಂತೆ ಮಾಮೂಲಿ ಹೇಳಿಕೆ
ತನ್ನ ಹೇಳಿಕೆ ವ್ಯಾಪಕ ಟೀಕೆಗೊಳಗಾದ ಮೇಲೆ ಎಚ್ಚೆತ್ತುಕೊಂಡ ತಾಪಸ್, ನಾನು ಆ ಉದ್ದೇಶದಿಂದ ಹೇಳಿದ್ದೇ ಅಲ್ಲ. ಮಾಧ್ಯಮಗಳು ನನ್ನ ಹೇಳಿಕೆಯನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ ಎಂದು ಮಾಮೂಲಿ ಡೈಲಾಗ್ ಹೊಡಿದಿದ್ದಾರೆ.

ಆ ರೀತಿ ಹೇಳೇ ಇಲ್ಲ ಎಂದ ಸಂಸದ
ನಾನು ಈ ರೀತಿ ಹೇಳಿಕೆಯನ್ನು ನೀಡಲೇ ಇಲ್ಲ. ನಾನು ಆ ರೀತಿ ಹೇಳಿದ್ದೇ ಆದಲ್ಲಿ, ಶಿಸ್ತು ಮತ್ತು ಕಾನೂನು ಕ್ರಮಕ್ಕೆ ಸಿದ್ದ ಎಂದು ತಾಪಸ್ ಹೇಳಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯದ ಶಿಕ್ಷಣ ಸಚಿವರು ತಾಪಸ್ ರಕ್ಷಣೆಗೆ ದೌಡಾಯಿಸಿದ್ದಾರೆ.

ಮಹಿಳೆಯರು ಎಂದರೆ ಏನಂದು ಕೊಂಡಿದ್ದಾರೆ?
ಕೊನೇ ಪಕ್ಷ ತನ್ನ ಪಕ್ಷದ ಅಧ್ಯಕ್ಷೆ ಮತ್ತು ಮುಖ್ಯಮಂತ್ರಿ (ಮಮತಾ ಬ್ಯಾನರ್ಜಿ) ಕೂಡಾ ಒಬ್ಬಳು ಮಹಿಳೆ ಎನ್ನುವ ಕನಿಷ್ಠ ಬುದ್ದಿ ಈತನಿಗೆ ಇಲ್ಲದಾಗಿದ್ದು ವಿಪರ್ಯಾಸ ಅಲ್ಲದೇ ಮತ್ತೇನು? ಮಹಿಳೆಯರೆಂದರೆ ಏನಂದು ಕೊಂಡಿದ್ದಾರೆ ಇವರು.












Click it and Unblock the Notifications