ನಾಮಕರಣಕ್ಕೆ ಚುನಾವಣೆ ಮಾಡಿದ ಮಹಾರಾಷ್ಟ್ರದ ದಂಪತಿ
ಗೊಂಡಿಯಾ, ಜೂನ್ 20: ಹೆಸರು ಜೀವನ ಪರ್ಯಂತ ಒಬ್ಬ ವ್ಯಕ್ತಿಯನ್ನು ಗುರುತಿಸುವುದಕ್ಕಿರುವ ಸಾಧನ. ಅದರ ಆಯ್ಕೆಯೇ ಒಂದು ದೊಡ್ಡ ಕಸರತ್ತು. ಈಗಂತೂ ಕೂಸು ಹುಟ್ಟೋಕು ಮುನ್ನವೇ, ಗಂಡಾದರೆ ಈ ಹೆಸರು, ಹೆಣ್ಣಾದರೆ ಆ ಹೆಸರು ಎಂದು ನಿರ್ಧಾರವಾಗಿರುತ್ತದೆ. ಆದರೆ ಹೆಸರಿನ ಆಯ್ಕೆ ಕೊಂಚ ಕಷ್ಟವೇ.
ಹೆಸರಿನ ಆಯ್ಕೆಯ ಗೊಂದಲಕ್ಕೆ ಬಿದ್ದ ದಂಪತಿಯೊಬ್ಬರು ಅದಕ್ಕಾಗಿಯೇ ಚುನಾವಣೆ ನಡೆಸಿದ ಅತ್ಯಪರೂಪದ ಘಟನೆಯೊಂದು ಮಹಾರಾಷ್ಟ್ರದ ಗೊಂಡಿಯಾದಲ್ಲಿ ನಡೆದಿದೆ.
ಮಹಾರಾಷ್ಟ್ರದ ಮಿಥುನ್ ಮತ್ತು ಮಾನ್ಸಿ ಎಂಬ ದಂಪತಿ ತಮ್ಮ ಗಂಡು ಮಗುವಿಗೆ ಯಾವ ಹೆಸರಿಡುವುದು ಎಂಬ ಗೊಂದಲದಲ್ಲಿದ್ದರು. ಅದಕ್ಕೆಂದೇ ಜೂನ್ 15 ರಂದು ಚುನಾವಣೆಯೊಂದನ್ನು ನಡೆಸಿದ ಅವರು ಮಗುವಿಗೆ 'ಯುವನ್' ಎಂಬ ಹೆಸರಿಟ್ಟಿದ್ದಾರೆ!

ಇತರ ಚುನಾವಣೆಗಳಂತೆ ಬ್ಯಾಲೆಟ್ ಪೇಪರ್, ಚುನಾವಣೆಯ ಬ್ಯಾನರ್ ಗಳೆಲ್ಲವೂ ಇದ್ದಿದ್ದು ವಿಶೇಷ. ಮಗುವಿಗೆ ಯಕ್ಷ್, ಯೋವಿಕ್ ಮತ್ತು ಯುವನ್ ಎಂಬ ಮೂರು ಹೆಸರುಗಳಲ್ಲಿ ಯಾವುದಾದರೊಂದನ್ನು ಇಡಲು ನಿರ್ಧರಿಸಲಾಗಿತ್ತು. ಆದರೆ ಯಾವುದು ಎಂದು ಒಮ್ಮತಕ್ಕೆ ಬರಲಾಗದ ಕಾರಣ ಈ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಸಂಬಂಧಿಕರೇ ಮತದಾರರು!
"ಮಗುವಿನ ಜಾತಕ ನೋಡಿದ್ದ ಜ್ಯೋತಿಷಿಯೊಬ್ಬರು ಈ ಮಗು ಭವಿಷ್ಯದಲ್ಲಿ ರಾಜಕಾರಣಿಯಾಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಈ ಮಗು ರಾಜಕಾರಣಿಯಾದ ಮೇಲೂ ಈ ದಿನವನ್ನು ನೆನಪಿಸಿಕೊಳ್ಳಲಿ ಎಂಬ ಕಾರಣಕ್ಕೆ ಈ ರೀತಿ ವಿಭಿನ್ನ ರೀತಿಯಲ್ಲಿ ನಾಮಕರಣ ಮಾಡಿದ್ದೇವೆ" ಎಂದು ಮಗುವಿನ ತಂದೆ ಮಿಥುನ್ ಹೇಳುತ್ತಾರೆ!












Click it and Unblock the Notifications