CM Siddaramaiah: ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಕುರಿತು ಮಹತ್ವದ ಅಪ್ಡೇಟ್ ನೀಡಿದ ಸಿದ್ದರಾಮಯ್ಯ
ನವದೆಹಲಿ, ನವೆಂಬರ್ 29: ಸಚಿವ ಸಂಪುಟ ವಿಸ್ತರಣೆ, ಪುಮಾರಚನೆ ಕುರಿತಾದ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದವರು ಮಾಧ್ಯಮಗಳವರೇ ಹೊರತು ನಾನಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ದೆಹಲಿಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸಂಪುಟ ವಿಸ್ತರಣೆ, ಪುನಾರಚನೆ ಉದ್ದೇಶ ಸಧ್ಯಕ್ಕಿಲ್ಲ ಎಂದು ತಿಳಿಸಿದ್ದಾರೆ. ಇನ್ನೂ ಮಾಧ್ಯಮಗಳೇ ಈ ಬಗ್ಗೆ ಸುದ್ದಿಗಳನ್ನು ಬಿತ್ತರಿಸುತ್ತಿವೆ. ಸಂಭವನೀಯ ಸಚಿವರ ಪಟ್ಟಿಯನ್ನೂ ಪ್ರಕಟಿಸುತ್ತಿವೆ. ಹೀಗಾಗಿ ಪುನಾರಚನೆ, ವಿಸ್ತರಣೆ ಕುರಿತಾದ ಪ್ರಶ್ನೆಗಳಿಗೆ ಮಾಧ್ಯಮಗಳೇ ಉತ್ತರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಸಂಪುಟ ಪುನಾರಚನೆ, ವಿಸ್ತರಣೆ ಕುರಿತಂತೆ ರಾಹುಲ್ ಗಾಂಧಿ ಅಥವಾ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚೆ ಮಾಡಿಲ್ಲ. ನಾಗೇಂದ್ರ ಅವರು ಸಂಪುಟಕ್ಕೆ ಸೇರ್ಪಡೆ ಆಗಲಿದ್ದಾರೆ. ಆದರೆ ಈಗಲೇ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಇನ್ನೂ ಹಾಸನದಲ್ಲಿ ಡಿಸೆಂಬರ್ 5ರಂದು ಕಾಂಗ್ರೆಸ್ ಪಕ್ಷ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟದ ಆಶ್ರಯದಲ್ಲಿ ಸ್ವಾಭಿಮಾನಿ ಸಮಾವೇಶ ಅಯೋಜಿಸಲಾಗಿದೆ. ಸಮಾವೇಶಕ್ಕೆ ಕೆಪಿಸಿಸಿ ಅಧ್ಯಕ್ಷರು ಹಾಗೂ ರಾಜ್ಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರನ್ನೂ ಸಂಘಟಕರು ಆಹ್ವಾನಿಸಿದ್ದಾರೆ. ಸಮಾವೇಶ ಕುರಿತಂತೆ ಹೈಕಮಾಂಡ್ ಗೆ ಅನಾಮಧೇಯ ಪತ್ರ ಬರೆದಿರುವ ಬಗ್ಗೆ ಮಾಹಿತಿ ಇಲ್ಲ.ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರೂ ಈ ಬಗ್ಗೆ ಚರ್ಚೆ ಮಾಡಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ರಾಜ್ಯದ ರೈತರಿಗೆ ನೀಡಬೇಕಾಗಿದ್ದ ನಬಾರ್ಡ್ ಹಣದಲ್ಲಿ ಶೇ58 ರಷ್ಟು ಕೇಂದ್ರ ಸರ್ಕಾರ ಕಡಿತಗೊಳಿಸಿರುವುದರಿಂದ ರೈತರು ಅಧಿಕ ಬಡ್ಡಿಗೆ ಸಾಲಕೊಡುವ ಲೇವಾದೇವಿದಾರರ ಸುಳಿಗೆ ಸಿಲುಕಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದರು. ರೈತರಿಗೆ ನೀಡುತ್ತಿದ್ದ ಸಬ್ಸಡಿ ಸಾಲ ಕಡಿತಗೊಳಿಸಿದ್ದರಿಂದ ರಾಜ್ಯದಲ್ಲಿ ಮತ್ತು ದೇಶದಲ್ಲಿ ಆಹಾರ ಉತ್ಪಾದನೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದರು.
ರಾಜ್ಯದ ರೈತರಿಗೆ ಮಾತ್ರ ನಬಾರ್ಡ್ ಸಾಲದ ಪ್ರಮಾಣ ಕಡಿಮೆ ಮಾಡಿಲ್ಲ. ಇಡೀ ದೇಶದಲ್ಲಿ ಕಡಿತಗೊಳಿಸಲಾಗಿದೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಇದರಿಂದ ಇಡೀ ದೇಶದ ರೈತರನ್ನು ಸಂಕಷ್ಟಕ್ಕೆ ದೂಡಿದಂತಾಗಿದೆ. ಇಡೀ ದೇಶದ ಕೃಷಿ ಉತ್ಪಾದನೆ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದರು.
ನಬಾರ್ಡ್ 4.5% ಬಡ್ಡಿಗೆ ರೈತರ ಸಾಲದ ಹಣ ನೀಡುತ್ತಿತ್ತು. ನಾವು ರೈತರಿಗೆ ಬಡ್ಡಿ ರಹಿತವಾಗಿ ಸಾಲ ನೀಡಿ ಈ 4.5% ಬಡ್ಡಿಯನ್ನು ಸರ್ಕಾರವೇ ಭರಿಸುತ್ತಿತ್ತು. ಈಗ ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್ ಗಳಿಂದ ಸಾಲ ಪಡೆಯುವಂತೆ ಕೇಂದ್ರ ಸರ್ಕಾರ ಹೇಳುತ್ತಿದೆ. ಶೇ10 ಬಡ್ಡಿ ದರದಲ್ಲಿ ವಾಣಿಜ್ಯ ಬ್ಯಾಂಕ್ ಗಳು ಸಾಲ ನೀಡುತ್ತವೆ. ಇದರಿಂದ ಬ್ಯಾಂಕ್ ಗಳಿಗೆ ಲಾಭ ಆಗುತ್ತದೆಯೇ ಹೊರತು ರೈತರಿಗೆ ಅನುಕೂಲ ಇಲ್ಲ ಎಂದರು.
15 ನೇ ಹಣಕಾಸು ಆಯೋಗದಲ್ಲೂ ರಾಜ್ಯಕ್ಕೆ ಅನ್ಯಾಯ ಆಯಿತು. ಭದ್ರಾ ಮೇಲ್ದಂಡೆ ಯೋಜನೆಗೆ 5000 ಕೋಟಿ ಘೋಷಿಸಿ ಒಂದು ಪೈಸೆಯನ್ನೂ ಕೊಡಲಿಲ್ಲ. ಫೆರಿಫೆರಲ್ ರಿಂಗ್ ರಸ್ತೆಗೂ ಕೊಡಲಿಲ್ಲ. ಇವೆಲ್ಲದರಿಂದ 11000 ಕೋಟಿ ರೂ ರಾಜ್ಯಕ್ಕೆ ನಷ್ಟವಾಗಿದ್ದನ್ನೂ ಪ್ರಧಾನಮಂತ್ರಿಯವರಿಗೆ ನೆನಪಿಸಿದ್ದೇವೆ. ಹೀಗಾಗಿ ಈ ಬಾರಿ ಮತ್ತೆ ನಬಾರ್ಡ್ ಮೂಲಕ ಆಗಿರುವ ಅನ್ಯಾಯವನ್ನು ಸರಿಪಡಿಸಲು ಮನವಿ ಮಾಡಿದ್ದೇವೆ ಎಂದರು.
ರಾಜ್ಯಕ್ಕೆ ನಿರಂತರ ಅನ್ಯಾಯ ಆಗುತ್ತಿದೆ. ಮಹದಾಯಿ, ಮೇಕೆದಾಟುಗೆ ಅನುಮತಿ ನೀಡುತ್ತಿಲ್ಲ. ಇಷ್ಟಾದರೂ ರಾಜ್ಯದಿಂದ ಆಯ್ಕೆ ಆಗಿರುವ ಬಿಜೆಪಿ ಸಂಸದರು ಬಾಯಿ ಬಿಡುತ್ತಿಲ್ಲ. ಮಣ್ಣಿನ ಮಗ ಅಂದುಕೊಂಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಏನು ಮಾಡುತ್ತಿದ್ದಾರೆ. ರಾಜ್ಯಸಭಾ ಸದಸ್ಯರಾದ ಮಾಜಿ ಪ್ರಧಾನಿ ದೇವೇಗೌಡರೂ ರಾಜ್ಯಕ್ಕೆ ಆಗುತ್ತಲೇ ಇರುವ ಅನ್ಯಾಯಗಳ ವಿರುದ್ಧ ಬಾಯಿ ಬಿಡುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.












Click it and Unblock the Notifications