ದೀಪಾವಳಿಗೆ ಬಿಗ್ ಶಾಕ್! ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 62 ರೂಪಾಯಿ ಏರಿಕೆ
ದೀಪಾವಳಿ ಸಂಭ್ರಮದ ಹೊತ್ತಲ್ಲೇ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ. ವಾಣಿಜ್ಯ ಬಳಕೆಯ 19 ಕೆ.ಜಿ. ತೂಕದ ಸಿಲಿಂಡರ್ ದರವನ್ನು 62 ರೂಪಾಯಿ ಏರಿಕೆ ಮಾಡಿದೆ. ಸದ್ಯ ದೆಹಲಿಯಲ್ಲಿ ಸಿಲಿಂಡರ್ ದರ 1,802 ರೂಪಾಯಿ ಎಂದು ವರದಿಯಾಗಿದೆ.
5 ಕೆ.ಜಿ. ಫ್ರೀ ಟ್ರೇಡ್ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯೂ ಏರಿಕೆ ಕಂಡಿದ್ದು, 15 ರೂಪಾಯಿ ಹೆಚ್ಚಿಸಲಾಗಿದೆ. 14.2 ಕೆ.ಜಿ. ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಗಳಿಲ್ಲದೆ ಯತಾಸ್ಥಿತಿಯಲ್ಲಿದೆ. ಸದ್ಯ ವಾಣಿಜ್ಯ ಬಳಕೆಯ ಸಿಲಿಂಡರ್ ದರಗಳನ್ನು ಮಾತ್ರವೇ ಹೆಚ್ಚಿಸಲಾಗಿದ್ದು, ಗೃಹ ಬಳಕೆ ಸಿಲಿಂಡರ್‌ಗಳ ದರ ಏರಿಕೆಯಾಗಿಲ್ಲ. ಇದರಿಂದ ದೇಶದ ಜನ ನಿಟ್ಟುಸಿರು ಬಿಡುವಂತಾಗಿದೆ.

ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಪರಿಷ್ಕೃತ ದರವು ಇಂದಿನಿಂದಲೇ ದೇಶದಲ್ಲಿ ಜಾರಿಯಾಗಲಿದೆ. ದೆಹಲಿ, ಮುಂಬೈ, ಕಲ್ಕತ್ತಾ, ಚೆನ್ನೈ ನಗರಗಳಲ್ಲಿ ಇಂದಿನಿಂದಲೇ ಈ ಪರಿಷ್ಕೃತ ದರ ಇರಲಿದೆ. ಕಳೆದ ಮೂರು ತಿಂಗಳಿನಿಂದಲೂ ವಾಣಿಜ್ಯ ಬಳಕೆ ಸಿಲಿಂಡರ್ ದರವು ಏರಿಕೆ ಕಾಣುತ್ತಲೇ ಇದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಮೊದಲ ದಿನದಂದೇ ದರ ಏರಿದ್ದವು. ಇದೀಗ ನವೆಂಬರ್ ತಿಂಗಳ ಮೊದಲ ದಿನವೂ ದರ ಏರಿಕೆ ಕಂಡಿದೆ.
ಇನ್ನು ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ದರ ಹೆಚ್ಚಳ, ವಿದೇಶಿ ವಿನಿಮಯ ದರಕ್ಕೆ ಅನುಗುಣವಾಗಿ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪ್ರತಿ ತಿಂಗಳು ದರ ಪರಿಷ್ಕರಣೆ ಮಾಡುತ್ತವೆ. ಅದರಂತೆ ಈ ತಿಂಗಳು ಕೂಡ ಸಿಲಿಂಡರ್ ದರ ಏರಿಕೆಯಾಗಿದೆ.

ಸದ್ಯ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ 19 ಕೆ.ಜಿ. ತೂಕದ ಸಿಲಿಂಡರ್ ದರ 1,879 ರೂಪಾಯಿ ಇದೆ. 47 ಕೆ.ಜಿ. ತೂಕದ ವಾಣಿಜ್ಯ ಸಿಲಿಂಡರ್ ದರ 4,695 ರೂಪಾಯಿ ಎನ್ನಲಾಗಿದೆ. ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಇಲ್ಲಿಯೂ ಯಾವುದೇ ಬದಲಾವಣೆ ಇಲ್ಲ. ರಾಜ್ಯದಲ್ಲಿ ಗೃಹಬಳಕೆಯ 14.2 ಕೆ.ಜಿ ತೂಕದ ಸಿಲಿಂಡರ್ ದರ 805 ರೂಪಾಯಿ ಇದ್ದರೆ, 5 ಕೆ.ಜಿ ತೂಕದ ಸಿಲಿಂಡರ್ ದರ 300 ರೂಪಾಯಿಯಷ್ಟಿದೆ.
ಆಗಸ್ಟ್‌ನಲ್ಲೂ ಏರಿಕೆ: ಇನ್ನು ಆಗಸ್ಟ್ ತಿಂಗಳ ಆರಂಭದಲ್ಲೇ ಜನರಿಗೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಏರಿಕೆಯ ಬಿಸಿ ತಟ್ಟಿತ್ತು. ಬಜೆಟ್ ನಂತರ ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿದ್ದವು. 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳಲ್ಲಿ ಮಾತ್ರ ಬೆಲೆ ಹೆಚ್ಚಳ ಮಾಡಲಾಗಿತ್ತು. 14 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ.
19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 8.50 ರೂಪಾಯಿ ಹೆಚ್ಚಳವಾಗಿತ್ತು. ಹೊಸ ಬೆಲೆ ಜಾರಿಗೆ ಬಂದ ನಂತರ ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ ಸೇರಿದಂತೆ ದೇಶಾದ್ಯಂತ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳು ದುಬಾರಿಯಾಗಿದ್ದವು. ಇದೀಗ ಮತ್ತೆ ವಾಣಿಜ್ಯ ಸಿಲಿಂಡರ್ ದರಗಳು ಏರಿದ್ದು, ಇದರಿಂದ ವ್ಯಾಪಾರಿಗಳು ಕಂಗಾಲಾಗಿದ್ದಾರೆ.












Click it and Unblock the Notifications