ಸುನಂದಾ ಪುಷ್ಕರ್ ಸಾವಿಗೆ ನಿಖರ ಕಾರಣ ಗೊತ್ತಾಯ್ತು!

ಹೌದು, ಏಮ್ಸ್ ವೈದ್ಯರ ಪ್ರಕಾರ ಸುನಂದಾ ದೇಹದಲ್ಲಿ ಅತಿಯಾದ ಔಷಧ ಅಂಶ ಪತ್ತೆಯಾಗಿದ್ದು, ವಿಪರೀತ ಔಷಧ ಸೇವನೆಯಿಂದಾಗಿ ಅವರು ಸಾವನ್ನಪ್ಪಿದ್ದಾರೆನ್ನಲಾಗಿದೆ. ಆದರೆ ದೇಹದಲ್ಲಿ ಮದ್ಯದ ಅಂಶ ಇಲ್ಲ ಎಂದು ವರದಿಯಾಗಿದೆ. ಶುಕ್ರವಾರ ಮಧ್ಯಾಹ್ನ 4 ಗಂಟೆಯಿಂದ ರಾತ್ರಿ 7 ಗಂಟೆಯೊಳಗೆ ಸಾವನ್ನಪ್ಪಿರಬಹುದು ಎಂದೂ ತಿಳಿದುಬಂದಿದೆ.
ಅಲ್ಲಿಗೆ ಅತಿಯಾದ ಔಷಧ ದೇಹದೊಳಕ್ಕೆ ಸೇರಿ ಸುನಂದಾ ಸಾವಿಗೀಡಾದರು. ಆದರೆ ಇದನ್ನು ಅವರು ಉದ್ದೇಶಪೂರ್ವಕವಾಗಿ ಸೇವಿಸಿದರಾ ಅಥವಾ ಬಲವಂತ ಪ್ರಾಶನವಾ? ಎಂಬುದನ್ನು ನಮಗೆ ಹೇಳಲು ಬರುವುದಿಲ್ಲ. ಅದನ್ನು ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಪತ್ತೆಹಚ್ಚಬೇಕು ಎಂದು ವಿಧಿವಿಜ್ಞಾನ ಪರೀಕ್ಷೆ ನಡೆಸಿದ ವೈದ್ಯರು ಕೈತೊಳೆದುಕೊಂಡಿದ್ದಾರೆ.
All India Institute of Medical Sciences (AIIMS) ಮೂಲಗಳ ಪ್ರಕಾರ ಭಾರತೀಯ ದಂಡ ಸಂಹಿತೆಯ ಪ್ರಕಾರ ಸುನಂದಾ ಪುಷ್ಕರ್ ಶವಪರೀಕ್ಷೆ ಮತ್ತು ವಿಧಿವಿಜ್ಞಾನ ವರದಿಯನ್ನು ಸಂಬಂಧಪಟ್ಟ ಉಪ ವಿಭಾಗಾಧಿಕಾರಿಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿದೆ.
ಇದರಿಂದ ಪೊಲೀಸರ ಕೆಲಸ ಹೆಚ್ಚಾಗಿದ್ದು, ಸಿಸಿಟಿವಿ ವಿಡಿಯೋ ದೃಶ್ಯಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡತೊಡಗಿದ್ದಾರೆ. ಯಾರೆಲ್ಲಾ ಸುನಂದಾ ಪುಷ್ಕರ್ ತಂಗಿದ್ದ ಕೋಣೆಗೆ ( Leela Palace hotel suite 345 ) ಹೋಗಿಬಂದಿದ್ದರು (ಹೋಟೆಲ್ ಸಿಬ್ಬಂದಿ ಸಹಿತ), ಸುನಂದಾ ಯಾರ ಜತೆ ಹೋಟೆಲ್ ಲಾಬಿಯಲ್ಲಿ ಕಾಣಿಸಿಕೊಂಡಿದ್ದರು ಎಂಬುದನ್ನು ಕೂಲಂಕಶವಾಗಿ ಪರಿಶೀಲಿಸತೊಡಗಿದ್ದಾರೆ. ಜತೆಗೆ ಸಚಿವ ಶಶಿ ತರೂರ್ ಸೇರಿದಂತೆ ಸುನಂದಾರ ನಿಕಟವರ್ತಿಗಳನ್ನು ತನಿಖಾಧಿಕಾರಿಗಳು ಮಾತನಾಡಿಸತೊಡಗಿದ್ದಾರೆ.












Click it and Unblock the Notifications