ಸುನಂದಾ ಪುಷ್ಕರಗೆ ಯಾವುದೇ ಕಾಯಿಲೆಯಿರಲಿಲ್ಲ: ಕಿಮ್ಸ್
ನವದೆಹಲಿ, ಜ.18: ಕೇಂದ್ರ ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವ ಶಶಿ ತರೂರ್ ಅವರ ಪತ್ನಿ ಕಾಶ್ಮೀರದ ಪುಷ್ಕರ ಗ್ರಾಮದ ಸುನಂದಾ ಅವರು ಶುಕ್ರವಾರ ರಾತ್ರಿ ಮೃತಪಟ್ಟಿರುವುದು ಸರಿಯಷ್ಟೇ. ಆದರೆ ಅವರ ಸಾವಿನ ಬಗ್ಗೆ ಗಾಳಿಸುದ್ದಿ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಹರಡಿಕೊಂಡಿದೆ.
ಸುನಂದಾ ಪುಷ್ಕರ್ ಸಾವು ಅಸ್ವಾಭಾವಿಕವೆಂದೂ, ಗುಣಪಡಿಸಲಾಗದ ಕಾಯಿಲೆ ಆಕೆಗೆ ಅಂಟಿಕೊಂಡಿತ್ತೆಂದೂ, ಆಕೆಯ ಮೈಮೇಲೆ ಗಾಯಗಳಾಗಿದ್ದವೆಂದೂ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದೂ ಇನ್ನೂ ಏನೇನೋ ವರದಿಗಳು ಪುಂಖಾನುಪುಂಖವಾಗಿ ಹರಿದುಬರುತ್ತಿದೆ.
ಸುನಂದಾ ಸಡನ್ ಡೆತ್ ಆಶ್ಚರ್ಯ ಮತ್ತು ಆಘಾತಕಾರಿ:

ಆದರೆ ಆಕೆಯನ್ನು ವೈದ್ಯರೊಬ್ಬರು ಒಂದು ವಾರದ ಹಿಂದಷ್ಟೇ ಆಮೂಲಾಗ್ರವಾಗಿ ವೈದ್ಯಕೀಯ ತಪಾಸಣೆ ನಡೆಸಿದ್ದರು. ಅದರ ಪ್ರಕಾರ ಆಕೆಗೆ ಯಾವುದೇ ಮಾರಣಾಂತಿಕ ಕಾಯಿಲೆ ಹಾಗಿರಲಿ ಸಾಮಾನ್ಯ ಕಾಯಿಲೆಯೂ ಇರಲಿಲ್ಲವೆಂದು ಆ ವೈದ್ಯಕೀಯ ರಿಪೋರ್ಟುಗಳು ಸಾರಿ ಹೇಳುತ್ತಿವೆ. ( ಮೋದಿಗೆ ತಿರುಗೇಟು: ಪ್ರತಿಯೊಬ್ಬರ ಪತ್ನಿಯೂ ಅಮೂಲ್ಯವೇ )
'ಹೌದು, Sunanda Pushkar ಅವರನ್ನು ಮೊನ್ನೆಯಷ್ಟೇ ಸಂಪೂರ್ಣ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಆಕೆಗೆ ಯಾವುದೇ ರೀತಿಯ ಕಾಯಿಲೆಗಳು ಇರಲಿಲ್ಲ ಎಂದು ತಪಾಸಣೆಯಿಂದ ನಮಗೆ ತಿಳಿದುಬಂದಿತ್ತು' ಎಂದು ತಿರುವನಂತಪುರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ. ಸುನಂದಾರ ಸಡನ್ ಡೆತ್ ಆಶ್ಚರ್ಯ ಮತ್ತು ಆಘಾತ ತಂದಿದೆ ಎಂದು ವೈದ್ಯರು ಹೇಳಿದ್ದಾರೆ.
ಜನವರಿ 12ರಂದು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಸುನಂದಾ ಪುಷ್ಕರ್ ಸಕಲ ವೈದ್ಯಕೀಯ ತಪಾಸಣೆ ಬಳಿಕ ಜನವರಿ 14ರಂದು ಡಿಸ್ಚಾರ್ಜ್ ಆಗಿದ್ದರು. ಪತಿ, ಕೇಂದ್ರ ಸಚಿವ ಶಶಿ ತರೂರ ಸಹ ಈ ವೇಳೆ ಪತ್ನಿ ಸುನಂದಾರ ಜತೆಗಿದ್ದರು. ವೈದ್ಯಕೀಯ ಪರೀಕ್ಷಾ ವರದಿಗಳು ಬಂದ ಬಳಿಕ ಅದನ್ನೆಲ್ಲಾ ಅಧ್ಯಯನ ಮಾಡಿ, ಯಾವುದೇ ಕಾಯಿಲೆಯಿಲ್ಲವೆಂದು ಷರಾ ಬರೆದು ಅದನ್ನು ತಕ್ಷಣ ದಂಪತಿಯ ಕೈಗೆ ತಲುಪಿಸಿದ್ದಾಗಿ ಎಂದು ಕಿಮ್ಸ್ ಮೂಲಗಳು ಹೇಳಿವೆ. ( ಬರೀ 50 ಕೋಟಿನಾ? ಬೆಲೆಯನ್ನೇ ಕಟ್ಟಲಾಗದಂತಹ ಗೆಳತಿ! )
ತಿರುವನಂತಪುರದಲ್ಲಿರುವ ಕಿಮ್ಸ್ ಆಸ್ಪತ್ರೆಯ (Kerala Institute of Medical Sciences) ವೈದ್ಯರು ಸುನಂದಾ ಅವರ ಮೇಲೆ ಅನೇಕ ಪರೀಕ್ಷೆಗಳನ್ನು ನಡೆಸಿದ್ದು, ಅದರ ವರದಿಗಳನ್ನು ಪರಿಶೀಲಿಸಲಾಗಿ ಆಕೆಗೆ ಯಾವುದೇ ಗಂಭೀರ ಕಾಯಿಲೆಗಳು ಇರಲಿಲ್ಲ ಎಂದು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
52 ವರ್ಷದ ವ್ಯಕ್ತಿಯಲ್ಲಿ ಸಾಮಾನ್ಯವಾಗಿ ಕೆಲ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಸುನಂದಾಗೆ ಅಂತಹ ಯಾವುದೇ ಕಾಯಿಲೆಗಳು ಇರಲಿಲ್ಲ. ಕೆಲವು ಸಣ್ಣಪುಟ್ಟ ಮಾತ್ರೆಗಳನ್ನು ನೀಡಿ ಕಳುಹಿಸಿದ್ದೆವು' ಎಂದು ಕಿಮ್ಸ್ ಮುಖ್ಯಸ್ಥ, ಖ್ಯಾತ ಹೃದ್ರೋಗ ತಜ್ಞ ಡಾ. ಜಿ. ವಿಜಯರಾಘವನ್ ಹೇಳಿದ್ದಾರೆ.
ಅಂದಹಾಗೆ, ಸುನಂದಾ ಪುಷ್ಕರ್ ಸಾವಿನ ಸುದ್ದಿ ಕೇಳಿಬರುತ್ತಿದ್ದಂತೆ ಆಕೆಯನ್ನು ತಪಾಸಣೆಗೊಳಪಡಿಸಿದ್ದ ಕಿಮ್ಸ್ ವೈದ್ಯರ ತಂಡ ಇಂದು ಬೆಳಗ್ಗೆ ಸಭೆ ನಡೆಸಿ, ಮತ್ತೊಮ್ಮೆ ವೈದ್ಯಕೀಯ ವರದಿಗಳನ್ನು ಪರಿಶೀಲಿಸಿತು. ತದನಂತರ, ಸುದ್ದಿಗಾರರ ಜತೆ ಮಾತನಾಡಿ ಸುನಂದಾಗೆ ಯಾವುದೇ ಕಾಯಿಲೆಯಿರಲಿಲ್ಲ ಎಂದು ದೃಢಪಡಿಸಿತು.
ಅಂದಹಾಗೆ, ಶಶಿ ತರೂರ್ ಅವರು 2009ರಲ್ಲಿ ತಿರುವನಂತಪುರ ಲೋಕಸಭಾ ಕ್ಷೇತ್ರದಿಂದ ಆರಿಸಿಬಂದಿದ್ದಾರೆ. 2010ರ ಆಗಸ್ಟ್ ತಿಂಗಳಲ್ಲಿ ಪಾಲಕ್ಕಾಡಿನಲ್ಲಿ ರಾಜಮನೆತನದ ಸಂಪ್ರದಾಯದಂತೆ ಶಶಿ ತರೂರ್- ಸುನಂದಾ ಮದುವೆ ಶಾಸ್ತ್ರೋಕ್ತವಾಗಿ ನಡೆದಿತ್ತು.












Click it and Unblock the Notifications