ಬ್ಯಾಂಕ್ ವಾಹನದ ಮೇಲೆ ಶಂಕಿತ ಉಗ್ರರ ದಾಳಿ, ಆರು ಮಂದಿ ಸಾವು
ಜಮ್ಮು-ಕಾಶ್ಮೀರದಲ್ಲಿ ಸೋಮವಾರ (ಮೇ 1) ಬ್ಯಾಂಕ್ ನ ಹಣ ಸಾಗಿಸುವ ವಾಹನದ ಮೇಲೆ ದಾಳಿ ನಡೆಸಿರುವ ಉಗ್ರರು ನಾಲ್ವರು ಪೊಲೀಸರು ಹಾಗೂ ಇಬ್ಬರು ಬ್ಯಾಂಕ್ ಸಿಬ್ಬಂದಿಯನ್ನು ಕೊಂದಿದ್ದಾರೆ
ನವದೆಹಲಿ, ಮೇ 1: ಜಮ್ಮು-ಕಾಶ್ಮೀರದ ಕುಲ್ಗಾಂನಲ್ಲಿ ಸೋಮವಾರ ಬ್ಯಾಂಕ್ ನ ಹೊರಭಾಗದಲ್ಲಿ ನಗದು ಇದ್ದ ವಾಹನದ ಮೇಲೆ ಶಂಕಿತ ಉಗ್ರರು ದಾಳಿ ನಡೆಸಿ, ನಾಲ್ವರು ಪೊಲೀಸರು ಹಾಗೂ ಇಬ್ಬರು ಬ್ಯಾಂಕ್ ಸಿಬ್ಬಂದಿಯನ್ನು ಕೊಂದಿದ್ದಾರೆ. "ಅಪರಿಚಿತ ಬಂದೂಕುಧಾರಿಗಳು ಜಮ್ಮು-ಕಾಶ್ಮೀರ್ ಬ್ಯಾಂಕ್ ನ ವ್ಯಾನ್ ನಿಂದ ಹಣ ದರೋಡೆ ಮಾಡುವ ವಿಫಲ ಯತ್ನ ನಡೆಸಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಲ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಕೋರರ ಬಂಧನಕ್ಕಾಗಿ ಕಾರ್ಯಾಚರಣೆ ಮುಂದುವರಿದಿದೆ. ಹಾಗೂ ಶಸ್ತ್ರಾಸ್ತ್ರಗಳನ್ನು ಕಸಿದುಹೋದ ಬಗ್ಗೆ ಸುದ್ದಿ ಕೇಳಿಬರುತ್ತಿದೆ. ಸೋಮವಾರ ಬೆಳಗ್ಗೆ ಪಾಕಿಸ್ತಾನ ಸೇನೆ ಅಪ್ರಚೋದಿತ ದಾಳಿ ನಡೆಸಿ, ಭಾರತೀಯ ಸೈನಿಕರ ದೇಹಗಳನ್ನು ತುಂಡರಿಸಿದ ಘಟನೆ ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯ ಕೃಷ್ಣಾ ಘಾಟಿಯಲ್ಲಿ ಆಗಿತ್ತು.[ಭಾರತೀಯ ಸೈನಿಕರ ದೇಹ ತುಂಡರಿಸಿದ ಪಾಕ್ ಸೇನೆ]

ಕಳೆದ ವರ್ಷ ನವೆಂಬರ್ 8ರಂದು ಅಪನಗದೀಕರಣ ಘೋಷಣೆ ಮಾಡಿ, 500-1000 ರುಪಾಯಿ ನೋಟುಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಮಾನ್ಯಗೊಳಿಸಿದ ನಂತರ ಉಗ್ರಗಾಮಿಗಳು ಬ್ಯಾಂಕ್ ಗಳ ಮೇಲೆ ದಾಳಿ ನಡೆಸುವುದು ಹಾಗೂ ಬಂದೂಕುಗಳನ್ನು ಕದ್ದೊಯ್ಯುವುದು ಹೆಚ್ಚಾಗಿದೆ.












Click it and Unblock the Notifications