ಮಗುವಿನಂತೆ ಮಡಿಲಲ್ಲಿ ವೃದ್ಧೆಯನ್ನು ಎಳೆದು ಕೂರಿಸಿಕೊಂಡ ತೆಲಂಗಾಣ ಸಚಿವ ಮಲ್ಲಾ ರೆಡ್ಡಿ: ವಿಡಿಯೋ ವೈರಲ್
ಹೈದರಾಬಾದ್ ಅಕ್ಟೋಬರ್ 28: ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮ ತಮಾಷೆಯ ವರ್ತನೆಗಳಿಂದ ಸಾರ್ವಜನಿಕರನ್ನು ರಂಜಿಸುವ ತೆಲಂಗಾಣ ಸಚಿವ ಮಲ್ಲಾ ರೆಡ್ಡಿ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
70 ವರ್ಷದ ತೆಲಂಗಾಣದ ಕಾರ್ಮಿಕ ಸಚಿವ ಮಲ್ಲಾ ರೆಡ್ಡಿ ಅವರು ತಮ್ಮ ವಿಲಕ್ಷಣ ವರ್ತನೆಯಿಂದಾಗಿ ಜನರ ಗಮನ ಸೆಳೆದಿದ್ದಾರೆ. ಶುಕ್ರವಾರ ಪ್ರಚಾರ ಕಾರ್ಯಕ್ರಮದ ವೇಳೆ ವಯಸ್ಸಾದ ಮಹಿಳೆಯನ್ನು ಎತ್ತಿಕೊಂಡು ತಮ್ಮ ಮಡಿಲಲ್ಲಿ ಕೂರಿಸಿಕೊಳ್ಳುವ ಮೂಲಕ ನೋಡುಗರನ್ನು ಬೆರಗುಗೊಳಿಸಿದ್ದಾರೆ.

ನವೆಂಬರ್ 30ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ ಮೇಡ್ಚಲ್ ಕ್ಷೇತ್ರದಲ್ಲಿ ಸಚಿವ ಮಲ್ಲಾ ರೆಡ್ಡಿ ಶುಕ್ರವಾರ ಪ್ರಚಾರ ಮಾಡುತ್ತಿದ್ದರು. ಈ ವೇಳೆ ಮಲ್ಲಾ ರೆಡ್ಡಿ ಅವರು ಮಹಿಳೆಯರ ಗುಂಪಿನೊಂದಿಗೆ ಕುಳಿತಿದ್ದರು. ಆಗ ಅವರು ತನ್ನ ಪಕ್ಕದಲ್ಲಿ ಕುಳಿತಿದ್ದ ವಯಸ್ಸಾದ ಮಹಿಳೆಯನ್ನು ತಮ್ಮ ತೊಡೆಯ ಮೇಲೆ ಕುಳಿತುಕೊಳ್ಳಲು ಹೇಳಿದರು. ಬಳಿಕ ಅವರೇ ವೃದ್ಧೆಯನ್ನು ಮಗುವಿನಂತೆ ತಮ್ಮು ಕೈಗಳಿಂದ ಎತ್ತಿಕೊಂಡು ಮಡಿಲಲ್ಲಿ ಕುರಿಸಿಕೊಂಡರು. ಈ ಅನಿರೀಕ್ಷಿತ ಘಟನೆ ನೆರೆದಿದ್ದ ಎಲ್ಲರನ್ನು ಆಶ್ಚರ್ಯಗೊಳಿಸಿದೆ.
ಮಡಿಲಲ್ಲಿ ಕುಳಿತಿದ್ದ ಮಹಿಳೆಗೆ ಸಚಿವರು ಪುಷ್ಪಗುಚ್ಛ ನೀಡಿ ಕ್ಯಾಮರಾಗೆ ಥಂಬ್ಸ್-ಅಪ್ ಕೂಡ ಮಾಡಿದರು. ಈ ವಿಡಿಯೋ ಇದೀಗ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Telangana minister #MallaReddy makes an elderly woman sit on his lap in bizarre incident.#TelanganaElections2023 #Telangana pic.twitter.com/XjQpFaDoTV
— Madhuri Adnal (@madhuriadnal) October 28, 2023
ಭಾರತ್ ರಾಷ್ಟ್ರ ಸಮಿತಿಯ (ಬಿಆರ್‌ಎಸ್) ನಾಯಕ ಮಲ್ಲಾ ರೆಡ್ಡಿ ಪ್ರಸ್ತುತ ಮೇಡ್ಚಲ್ ಕ್ಷೇತ್ರದಲ್ಲಿ ಮರು ಆಯ್ಕೆ ಬಯಸಿದ್ದಾರೆ. ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮ ತಮಾಷೆಯ ವರ್ತನೆಗಳಿಂದ ಸಾರ್ವಜನಿಕರನ್ನು ರಂಜಿಸುವ ವಿಚಾರದಲ್ಲಿ ಮಲ್ಲಾ ರೆಡ್ಡಿ ಅವರು ಪ್ರಸಿದ್ಧರಾಗಿದ್ದಾರೆ.
ಈ ಹಿಂದೆ ನೃತ್ಯ ಮಾಡಿದ್ದ ಮಲ್ಲಾ ರೆಡ್ಡಿ
ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆಯೋಜಿಸಿದ್ದ ವಿಶ್ವ ಹೃದಯ ದಿನದಂದು (ಸೆಪ್ಟೆಂಬರ್ 29) ನಡೆದ ವಾಕಥಾನ್‌ನಲ್ಲಿ ಮಲ್ಲಾ ರೆಡ್ಡಿ ಅವರು ವೇದಿಕೆಯಲ್ಲಿ ನೃತ್ಯ ಮಾಡಿದ್ದರು. ಈ ಮೂಲಕ ಭಾಗವಹಿಸಿದವರಿಗೆ ಆಶ್ಚರ್ಯ ಮತ್ತು ಸಂತೋಷವನ್ನುಂಟು ಮಾಡಿದರು. ಕೆಲವು ನಿಮಿಷಗಳ ನೃತ್ಯದ ನಂತರ, ಅವರು ತಮ್ಮ ಜುಂಬಾ ಕೌಶಲ್ಯಗಳನ್ನು ಪ್ರದರ್ಶಿಸಲು ಪ್ರಯತ್ನಿಸಿದರು.
ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳ ನೆಟ್‌ವರ್ಕ್ ಅನ್ನು ಮೇಲ್ವಿಚಾರಣೆ ಮಾಡುವ ಮಲ್ಲಾ ರೆಡ್ಡಿ, ಅವರು ಭಾಗವಹಿಸುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ನೃತ್ಯ ಅಥವಾ ಇನ್ನಿತರ ಮನರಂಜನೆ ಮೂಲಕ ನೆರೆದವರನ್ನು ಆಚ್ಚರಿಗೊಳಿಸುತ್ತಾರೆ. 70 ನೇ ವಯಸ್ಸಿನಲ್ಲಿಯೂ ಸಹ ಅವರು ಜನಪ್ರಿಯ ಹಾಡುಗಳಿಗೆ ಸಲೀಸಾಗಿ ಮಣಿಯುತ್ತಾರೆ ಮತ್ತು ಕಿರಿಯ ವ್ಯಕ್ತಿಗಳೊಂದಿಗೆ ಸಲೀಸಾಗಿ ಹೊಂದಿಕೊಳ್ಳುತ್ತಾರೆ.












Click it and Unblock the Notifications