ಕಾರ್ಪೊರೇಟ್ ಕೆಲಸ ಬಿಟ್ಟು ಭಾರತದ ಹಳ್ಳಿಗೆ ಬಂದ ವಿದೇಶಿ ಮಹಿಳೆ: ಬಡ ಮಕ್ಕಳ ಬಾಳಲ್ಲಿ ಬೆಳಕಾದ ಸಾಂಡ್ರಾ ಲಾವಿ
15 ವರ್ಷಗಳ ಹಿಂದೆ ಕೇವಲ ಒಂದು ಕಡೆಗೆ ಪ್ರಯಾಣಿಸುವ ವಿಮಾನದ ಟಿಕೆಟ್ ಹಿಡಿದು ಭಾರತಕ್ಕೆ ಬಂದ ಸಾಂಡ್ರಾ ಲಾವಿ ಗೊಜ್ಕೋವಿಕ್, ಅವರ ಬಳಿ ಭವಿಷ್ಯದ ಬಗ್ಗೆ ಯಾವುದೇ ಸ್ಪಷ್ಟವಾದ ಯೋಜನೆ ಇರಲಿಲ್ಲ. ಸ್ವಿಟ್ಜರ್ಲೆಂಡ್‌ನ ಐಷಾರಾಮಿ ಜೀವನ, ಹಾಗೂ ಯಶಸ್ವಿ ಕಾರ್ಪೊರೇಟ್ ಕೆಲಸವನ್ನಾ ತೊರೆದು ಬಂದ ಅವರ ಏಕೈಕ ಗುರಿ ಜೀವನದ ಉದ್ದೇಶವನ್ನು ಹುಡುಕುವುದಾಗಿತ್ತು. ಆ ಹುಡುಕಾಟ ಅವರನ್ನ ಪಶ್ಚಿಮ ಬಂಗಾಳದ ಒಂದು ಸಣ್ಣ ಗ್ರಾಮಕ್ಕೆ ಕರೆತಂದಿದ್ದು ಅಲ್ಲದೇ, ಅಲ್ಲಿನ ಜನರ ಬದುಕನ್ನೇ ಬದಲಾಯಿಸುವಂತೆ ಮಾಡಿದೆ.
ಗ್ರಾಮೀಣ ಶಿಕ್ಷಣದತ್ತ ಸಾಂಡ್ರಾ ಲಾವಿ ಹೆಜ್ಜೆ
ಜಗತ್ತಿನ ಅತ್ಯಂತ ಶ್ರೀಮಂತ ನಗರಗಳಲ್ಲೊಂದಾದ ಜ್ಯೂರಿಚ್‌ನಲ್ಲಿ ಬೆಳೆದ ಸಾಂಡ್ರಾ ಅವರಿಗೆ ಜೀವನದಲ್ಲಿ ಅವರಿಗೆ ಯಾವುದೇ ಸೌಲಭ್ಯಗಳ ಕೊರತೆ ಇರಲಿಲ್ಲ. ದುಬೈ ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿ ಅತ್ಯುತ್ತಮ ವೃತ್ತಿಜೀವನ ರೂಪಿಸಿಕೊಂಡಿದ್ದರು. ಆದ್ರೆ, ಅವರು ಪ್ರಪಂಚ ಸುತ್ತುತ್ತಿದ್ದಾಗ ಕಂಡ ಜನರ ನಡುವೆ ಇರುವ ಅಸಮಾನತೆ ಅವರನ್ನ ಬಹಳ ಕಾಡುತ್ತಿತ್ತು.

"ನನಗೆ ಇಷ್ಟೆಲ್ಲಾ ಅವಕಾಶಗಳು, ಸೌಲಭ್ಯಗಳು ಸಿಕ್ಕಿರುವಾಗ, ಇತರರಿಗೂ ಏಕೆ ಸಿಗುತ್ತಿಲ್ಲ?" ಎಂಬ ಪ್ರಶ್ನೆ ಅವರನ್ನ ಕಾರ್ಪೊರೇಟ್ ಜಗತ್ತಿನಿಂದ ಗ್ರಾಮೀಣ ಶಿಕ್ಷಣ ಮತ್ತು ಸಮಾಜ ಸೇವೆಯತ್ತ ಮುಖ ಮಾಡುವಂತೆ ಮಾಡಿತು. ಹಾಗಾಗಿ ಅವರು ಕೇವಲ ಎರಡು ಜೊತೆ ಬಟ್ಟೆ ಹಿಡಿದು ತಮ್ಮ ಹೊಸ ಜೀವನವನ್ನ ಅರಸಿ ಭಾರತಕ್ಕೆ ಬಂದಿಳಿದರು.
ಸನಾತನ ಧರ್ಮದ ಪ್ರಭಾವ
ಭಾರತಕ್ಕೆ ಬಂದ ಮೊದ ಮೊದಲು ಸಾಂಡ್ರಾ ಅವರಿಗೆ ಇಲ್ಲಿ ಜೀವನ ನಡೆಸಲು ಸುಲಭವಾಗಿರಲಿಲ್ಲ. ಸಾಂಸ್ಕೃತಿಕ ಭಿನ್ನತೆ, ಭಾಷೆಯ ಸಮಸ್ಯೆಗಳ ನಡುವೆಯೂ ಹಳ್ಳಿಗರ ನಿಷ್ಕಲ್ಮಶ ಪ್ರೀತಿ ಮತ್ತು ಆತಿಥ್ಯ ಅವರನ್ನ ಅಚ್ಚರಿಗೊಳಿಸಿತ್ತು. ಕೇವಲ ಹಣವನ್ನ ದಾನ ಮಾಡುವ ಬದಲು, ಪಾರದರ್ಶಕವಾದ ಮತ್ತು ಶಾಶ್ವತವಾದ ಬದಲಾವಣೆ ತರಲು ಅವರು ನಿರ್ಧರಿಸಿದರು. ಇದಕ್ಕಾಗಿ ಸುದೀರ್ಘ ಪ್ರಯಾಣ ಮಾಡಿ ಪಶ್ಚಿಮ ಬಂಗಾಳದ ದ್ವೀಪವೊಂದರಲ್ಲಿರುವ ಕುಗ್ರಾಮವನ್ನ ತಲುಪಿದರು. ಸನಾತನ ಧರ್ಮದ ನಿಸ್ವಾರ್ಥ ಸೇವೆಯ ತತ್ವದಿಂದ ಪ್ರಭಾವಿತರಾಗಿ ಅಲ್ಲೇ ನೆಲೆಸುವ ನಿರ್ಧಾರ ಮಾಡಿದರು.
ಗ್ರಾಮೀಣ ಮಕ್ಕಳಿಗೆ ಶಾಲೆ ನಿರ್ಮಾಣ
ಮೊದಲು ಶಾಲೆಯೊಂದನ್ನಾ ತೆರೆಯಬೇಕು ಎಂದು ಯೋಜನೆ ರೂಪಿಸಿದ್ದರು. ಹಳ್ಳಿಯಲ್ಲಿ ಶಾಲೆ ಒಂದನ್ನಾ ತೆರೆಯುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಪ್ರತಿ ದಿನ ದುಡಿದು ತರುವ ಹಣದಿಂದಲೇ ಅಂದಿನ ದಿನ ಸಾಗಿಸುತ್ತಿದ್ದ ಕುಟುಂಬಗಳಿಗೆ, ಶಿಕ್ಷಣದ ಮಹತ್ವವನ್ನು ವಿವರಿಸುವುದು ದೊಡ್ಡ ಸವಾಲಾಗಿತ್ತು. ವಿದೇಶಿ ಮಹಿಳೆಯೊಬ್ಬಳನ್ನು ಆರಂಭದಲ್ಲಿ ಹಳ್ಳಿಯ ಜನರು ಅನುಮಾನದಿಂದಲೇ ನೋಡಿದರು. ಆದರೆ, ಸಾಂಡ್ರಾ ಮತ್ತು ಅವರ ತಂಡ ಮನೆ ಮನೆಗೆ ಭೇಟಿ ನೀಡಿ ಪೋಷಕರಲ್ಲಿ ಜಾಗೃತಿ ಮೂಡಿಸಿದರು. ಗುಣಮಟ್ಟದ ಶಿಕ್ಷಣ, ಪೌಷ್ಟಿಕ ಆಹಾರ ಹಾಗೂ ಮಕ್ಕಳ ಮೇಲಿನ ಪ್ರಾಮಾಣಿಕ ಕಾಳಜಿಯನ್ನು ಕಂಡ ಗ್ರಾಮಸ್ಥರು ನಿಧಾನವಾಗಿ ಶಾಲೆಯ ಮೇಲೆ ನಂಬಿಕೆ ಇಡತೊಡಗಿದರು.
ಬಾಲ್ಯ ವಿವಾಹ ತಡೆ
ಇಂದು ಸಾಂಡ್ರಾ ಲಾವಿ ಸ್ಥಾಪಿಸಿರುವ ಶಾಲೆಯು ಕೇವಲ ಅಕ್ಷರ ಕಲಿಸುವ ಕೇಂದ್ರವಾಗಿ ಉಳಿದಿಲ್ಲ. ಶಾಲೆಯ ಮೂಲಕ ಬಾಲ್ಯ ವಿವಾಹ ತಡೆ, ಮಾನವ ಕಳ್ಳಸಾಗಣೆ ಮತ್ತು ಕೌಟುಂಬಿಕ ದೌರ್ಜನ್ಯದ ವಿರುದ್ಧವೂ ದೊಡ್ಡ ಮಟ್ಟದ ಜಾಗೃತಿ ಅಭಿಯಾನ ನಡೆಯುತ್ತಿದೆ. 100ಕ್ಕೂ ಹೆಚ್ಚು ಯುವ ನಾಯಕರನ್ನು ತರಬೇತುಗೊಳಿಸಲಾಗಿದ್ದು, ಅವರು ಸುಮಾರು 30 ಹಳ್ಳಿಗಳ 20,000ಕ್ಕೂ ಹೆಚ್ಚು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಯುವಜನರೇ ಸ್ವತಃ ಮುಂದೆ ಬಂದು ಬಾಲ್ಯ ವಿವಾಹಗಳನ್ನು ತಡೆದಿರುವ ಅನೇಕ ಉದಾಹರಣೆಗಳೂ ಇವೆ.
"ಭಾರತ ನನ್ನನ್ನು ಸಂಪೂರ್ಣವಾಗಿ ಬದಲಾಯಿಸಿದೆ. ತಾಳ್ಮೆ, ವಿನಯ ಮತ್ತು ಸ್ವೀಕಾರ ಮನೋಭಾವವನ್ನ ಇಲ್ಲಿ ನಾನು ಕಲಿತಿದ್ದೇನೆ" ಎನ್ನುವ ಸಾಂಡ್ರಾ, ಸಣ್ಣ ಸಣ್ಣ ಕೆಲಸಗಳೆ ಜಗತ್ತನ್ನು ಬದಲಾಯಿಸಬಲ್ಲವು ಎಂದು ಬಲವಾಗಿ ನಂಬಿದ್ದಾರೆ.


Click it and Unblock the Notifications
