ಗ್ರಾಹಕರಿಗೆ ದುಬಾರಿಯಾದ ಝೊಮ್ಯಾಟೊ, ಸ್ವಿಗ್ಗಿ: ಆದಾಯಕ್ಕಾಗಿ ಮತ್ತೆ ಶುಲ್ಕ ಹೆಚ್ಚಳ
ಆಹಾರ ಡೆಲಿವರಿ ಸಂಸ್ಥೆ ಝೊಮ್ಯಾಟೊ ಮತ್ತು ಸ್ವಿಗ್ಗಿ ಕೆಲವೆಡೆ ಶುಲ್ಕ ಹೆಚ್ಚಳ ಮಾಡಿದೆ. ಪ್ರಸ್ತುತ ದೆಹಲಿ, ಮುಂಬೈ ಮತ್ತು ಬೆಂಗಳೂರು ನಗರಗಳಲ್ಲಿ ಶುಲ್ಕವನ್ನು ಪ್ರತಿ ಆರ್ಡರ್‌ಗೆ 5ರಿಂದ 6 ರೂಪಾಯಿಯಂತೆ ಹೆಚ್ಚಿಸಲಾಗಿದೆ.
ಏಪ್ರಿಲ್‌ನಲ್ಲಿ ಝೊಮ್ಯಾಟೊ ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು 25 ಪ್ರತಿಶತದಷ್ಟು ಹೆಚ್ಚಿಸಿ ಪ್ರತಿ ಆರ್ಡರ್‌ಗೆ 5 ರೂಪಾಯಿ ಫಿಕ್ಸ್ ಮಾಡಿತ್ತು. ಅಲ್ಲದೇ ಇದೇ ಝೊಮ್ಯಾಟೊ ಕಳೆದ ವರ್ಷ ಆಗಸ್ಟ್‌ನಲ್ಲಿ 2 ರೂಪಾಯಿ ಶುಲ್ಕವನ್ನು ಹೆಚ್ಚಿಸಿತ್ತು. ಝೊಮ್ಯಾಟೋಗೆ ಪ್ರತಿಸ್ಪರ್ಧಿಯಾಗಿರುವ ಸ್ವಿಗ್ಗಿ ಸಹ ಹಲವು ನಗರಗಳಲ್ಲಿ ಶುಲ್ಕವನ್ನು ಹೆಚ್ಚಳ ಮಾಡಿತ್ತು.

ಆದರೀಗ ದೆಹಲಿ, ಮುಂಬೈ, ಬೆಂಗಳೂರು ನಗರಗಳಲ್ಲಿ ಪ್ರತಿ ಆರ್ಡರ್‌ಗೆ 5ರಿಂದ 6 ರೂಪಾಯಿಗಳ ಶುಲ್ಕವನ್ನು ಹೆಚ್ಚಿಸಿದೆ. ಶುಲ್ಕ ಏರಿಕೆಗೆ ಕಾರಣಗಳನ್ನು ಖಚಿತಪಡಿಸಿಕೊಳ್ಳಲು ಸಂಪರ್ಕಿಸಿದಾಗ, Zomato ಮತ್ತು Swiggy ಎರಡೂ ಸಂಸ್ಥೆಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದವು.
ಎರಡು ಕಂಪನಿಗಳು ಕಳೆದ ವರ್ಷ ಪ್ಲಾಟ್‌ಫಾರ್ಮ್ ಶುಲ್ಕವನ್ನು ಹೆಚ್ಚಿಸಿದ್ದವು. ಆರಂಭದಲ್ಲಿ ಪ್ರತಿ ಆರ್ಡರ್‌ಗೆ 2 ರೂ ಇದ್ದ ಶುಲ್ಕವನ್ನು ಕ್ರಮೇಣ ಹೆಚ್ಚಿಸಲಾಗಿದೆ. ಪ್ಲಾಟ್‌ಫಾರ್ಮ್ ಶುಲ್ಕವನ್ನು ಆಹಾರ-ವಿತರಣಾ ಪ್ಲಾಟ್‌ಫಾರ್ಮ್‌ಗಳು ತಮ್ಮ ಲಾಭದಾಯಕತೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ವಿಧಾನಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ.
ಪ್ರತಿ ಆರ್ಡರ್‌ಗೆ 1 ರೂಪಾಯಿ ಹೆಚ್ಚಳವು ಗ್ರಾಹಕರಿಗೆ ಸಣ್ಣದಾಗಿ ತೋರಿದರೂ, ಸುಮಾರು 2.2 ರಿಂದ 2.5 ಮಿಲಿಯನ್ ದೈನಂದಿನ ಆರ್ಡರ್ಗಳನ್ನು ನಿರ್ವಹಿಸುವ ಝೊಮ್ಯಾಟೊಗೆ, ಇದು ಹೆಚ್ಚುವರಿಯಾಗಿ ದೈನಂದಿನ 25 ಲಕ್ಷ ರೂ. ಆದಾಯ ತಂದು ಕೊಡಲಿದೆ. ಆಹಾರ ವಿತರಣಾ ಕಂಪನಿಗಳು ಈ ಪ್ಲಾಟ್‌ಫಾರ್ಮ್ ಶುಲ್ಕ ಏರಿಕೆಯ ಮೂಲಕ ಪ್ರತಿದಿನ 1.25 ರಿಂದ 1.5 ಕೋಟಿ ರೂಪಾಯಿ ಲಾಭ ಗಳಿಸುವ ನಿರೀಕ್ಷೆ ಇಟ್ಟುಕೊಂಡಿವೆ.

2023ರಲ್ಲೂ ಎರಡೂ ಕಂಪನಿಗಳು ಶುಲ್ಕವನ್ನು ಹೆಚ್ಚಿಸಿದ್ದವು. ಸ್ವಿಗ್ಗಿ ಮೊದಲ ಬಾರಿಗೆ ಏಪ್ರಿಲ್ 2023ರಲ್ಲಿ 2 ರೂ.ಗಳ ಪ್ಲಾಟ್‌ಫಾರ್ಮ್ ಶುಲ್ಕವನ್ನು ಪರಿಚಯಿಸಿತ್ತು. ಅದೇ ವರ್ಷದ ಆಗಸ್ಟ್‌ನಲ್ಲಿ ಜೊಮಾಟೊ ಕೂಡ ಶುಲ್ಕ ವಿಧಿಸಲಾರಂಭಿಸಿತು. ಅಂದಿನಿಂದ ಎರಡೂ ಕಂಪನಿಗಳು ಈ ಶುಲ್ಕವನ್ನು ಹೆಚ್ಚಿಸುತ್ತಲೇ ಬಂದಿವೆ. ಶುಲ್ಕ ಹೆಚ್ಚಿಸಿದರೂ ಗ್ರಾಹಕರು ಆರ್ಡರ್ ಮಾಡುವುದನ್ನು ಕಡಿಮೆ ಮಾಡಿಲ್ಲ ಎಂಬುದನ್ನು ಎರಡೂ ಕಂಪನಿಗಳು ಕಂಡುಕೊಂಡಿವೆ.
ಅತ್ಯಂತ ದಟ್ಟಣೆಯ ಸಮಯದಲ್ಲಿ, ಜೊಮಾಟೊ ತನ್ನ ಪ್ಲಾಟ್ ಫಾರ್ಮ್ ಶುಲ್ಕವನ್ನು ಪ್ರತಿ ಆರ್ಡರ್‌ಗೆ 9 ರೂ.ಗೆ ಹೆಚ್ಚಿಸಿದರೆ, ಸ್ವಿಗ್ಗಿ ಬೆಂಗಳೂರು, ದೆಹಲಿ, ಹೈದರಾಬಾದ್ ಮತ್ತು ಇತರ ನಗರಗಳಲ್ಲಿನ ನಿರ್ದಿಷ್ಟ ಗ್ರಾಹಕರಿಗೆ 10 ರೂ. ಪ್ಲಾಟ್‌ಫಾರ್ಮ್ ವಿಧಿಸುತ್ತಿದೆ. ಪ್ಲಾಟ್‌ಫಾರ್ಮ್ ಶುಲ್ಕಗಳನ್ನು ಹೆಚ್ಚಿಸುವುದಿಲ್ಲ ಎಂದು ಈ ಹಿಂದೆ ಸ್ವಿಗ್ಗಿ ಹೇಳಿತ್ತು. ಆದರೆ ಗ್ರಾಹಕರಿಂದ ತೀವ್ರ ಪ್ರತಿರೋಧ ಬರುವವರೆಗೂ ಎರಡೂ ಕಂಪನಿಗಳು ಪ್ಲಾಟ್‌ಫಾರ್ಮ್ ಫೀಯನ್ನು ಹೆಚ್ಚಿಸುತ್ತಲೇ ಹೋಗಲಿವೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ.
ಸ್ವಿಗ್ಗಿ ಮತ್ತು ಜೊಮಾಟೊ ತಮ್ಮ ಆಹಾರ ವಿತರಣಾ ಸೇವೆಗಳಿಗೆ ಪ್ರತ್ಯೇಕವಾಗಿ ಪ್ಲಾಟ್ ಫಾರ್ಮ್ ಶುಲ್ಕವನ್ನು ಜಾರಿಗೆ ತಂದಿದ್ದರೂ, ಈ ಶುಲ್ಕವನ್ನು ತಮ್ಮ ತ್ವರಿತ ವಾಣಿಜ್ಯ ಉದ್ಯಮಗಳಾದ ಇನ್ಸ್ಟಾಮಾರ್ಟ್ ಮತ್ತು ಬ್ಲಿಂಕಿಟ್ಗೆ ವಿಸ್ತರಿಸಿಲ್ಲ.












Click it and Unblock the Notifications